ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಆಗ್ರಹ

7

ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಆಗ್ರಹ

Published:
Updated:
ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಆಗ್ರಹ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಸಮುದಾಯ ಎನಿಸಿರುವ ಲಿಂಗಾಯತರಿಗೆ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಬೇಕೆಂಬ ಕೂಗು ಹೆಚ್ಚುತ್ತಿದೆ.

ಈಗಾಗಲೇ ಒಂದು ಡಿಸಿಎಂ ಹುದ್ದೆ ಸೃಷ್ಟಿಸಲು ಎರಡೂ ಪಕ್ಷಗಳ ಮಧ್ಯೆ ತೀರ್ಮಾನವಾಗಿದ್ದು, ಈ ಹುದ್ದೆಗೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ (ಚಲವಾದಿ) ಹೆಸರು ಮುಂಚೂಣಿಯಲ್ಲಿದೆ. ಈ ಬೆನ್ನಲ್ಲೇ ಇನ್ನೊಂದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಆಗ್ರಹ ಬಲವಾಗಿದೆ.

ಮಹಾಸಭಾ ಬೇಡಿಕೆ: ‘ಕಾಂಗ್ರೆಸ್‌ ಪಕ್ಷದಲ್ಲಿ 17 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಈ ಪೈಕಿ, ಶಾಮನೂರು ಶಿವಶಂಕರಪ್ಪ ಹಿರಿಯರಾಗಿದ್ದು ಅವರಿಗೆ ಡಿಸಿಎಂ ಹುದ್ದೆ ನೀಡುವುದು ಸೂಕ್ತ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್‌. ತಿಪ್ಪಣ್ಣ ತಿಳಿಸಿದ್ದಾರೆ.

‘ಶಿವಶಂಕರಪ್ಪ ಕಳೆದ 50 ವರ್ಷಗಳಿಂದ ಪಕ್ಷ ವಹಿಸಿದ ಎಲ್ಲ ಹುದ್ದೆಗಳನ್ನೂ ಸಮರ್ಥವಾಗಿ ನಿರ್ವಹಿಸಿದ್ದು ಅವರನ್ನು ಡಿಸಿಎಂ ಹುದ್ದೆಗೆ ಪರಿಗಣಿಸುವುದು ಸೂಕ್ತ’ ಎಂದು ಅವರು ಹೇಳಿದ್ದಾರೆ.

ಐವರಿಗೆ ಸಚಿವ ಸ್ಥಾನ ನೀಡಿ: ‘ಸಮ್ಮಿಶ್ರ ಸರ್ಕಾರದಲ್ಲಿ ಐವರು ಲಿಂಗಾಯತರಿಗೆ ಸಚಿವ ಸ್ಥಾನ ನೀಡಬೇಕು‘ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎನ್‌. ಕೇಶವಕುಮಾರ್ ಆಗ್ರಹಿಸಿದ್ದಾರೆ.

ಜಾತಿವಾರು ಲೆಕ್ಕ: ‘ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 46 ಕ್ಷೇತ್ರಗಳಲ್ಲಿ ಲಿಂಗಾಯತ ವೀರಶೈವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಅವರಲ್ಲಿ ಕಾಂಗ್ರೆಸ್‌ನ 16 ಹಾಗೂ ಜೆಡಿಎಸ್‌ನಿಂದ 4 ಜನ ಲಿಂಗಾಯತರು ಆಯ್ಕೆಯಾಗಿದ್ದಾರೆ’ ಎಂದು ಕೇಶವಕುಮಾರ್ ವಿವರಿಸಿದ್ದಾರೆ.

‘ಮೇ 19ರಂದು ನಡೆದ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಲಿಂಗಾಯತ ಶಾಸಕರು ಸಮ್ಮಿಶ್ರ ಸರ್ಕಾರದ ಬಗ್ಗೆ ಒಗ್ಗಟ್ಟು ಮತ್ತು ನಿಷ್ಠೆ ಪ್ರದರ್ಶಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಅನ್ಯ ಸಮಾಜದವರಿಗೆ ಸೂಕ್ತ ಸ್ಥಾನಮಾನ ನೀಡುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ವೀರಶೈವ ಲಿಂಗಾಯತ ಸಮಾಜ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಬಾರಿ ಬಿಜೆಪಿಯ ಅಬ್ಬರದ ಚುನಾವಣಾ ಪ್ರಚಾರದ ನಡುವೆಯೂ ಸಮುದಾಯದವರು 17 ಜನರನ್ನು ಆಯ್ಕೆ ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಕೊಟ್ಟರೆ ಸಂತೋಷ, ಕೊಡದಿದ್ದರೆ ಏನು ಮಾಡಲಿ?

‘ಡಿಸಿಎಂ ಹುದ್ದೆಯನ್ನು ನನಗೆ ಕೊಟ್ಟರೆ ಸಂತೋಷ. ಕೊಡಲಿಲ್ಲ ಎಂದರೆ ಏನು ಮಾಡಲಿಕ್ಕೆ ಆಗುತ್ತೇ’

ಇದು ಡಿಸಿಎಂ ಹುದ್ದೆ ಚರ್ಚೆಗೆ ಸಂಬಂಧಿಸಿದಂತೆ ಶಾಮನೂರು ಶಿವಶಂಕರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪರಿ.

‘ಡಿಸಿಎಂ ಹುದ್ದೆ ಕುರಿತಂತೆ ಚರ್ಚೆ ನಡೆದಿದೆ. ಆದರೆ, ನಾನು ಈ ಬಗ್ಗೆ ಇನ್ನೂ ಯಾರೊಂದಿಗೂ ಪ್ರತ್ಯೇಕವಾಗಿ ಮಾತನಾಡಿಲ್ಲ. ಆದರೆ, ಸದ್ಯದಲ್ಲೇ ಪಕ್ಷದ ವರಿಷ್ಠರಾದ ಗುಲಾಂ ನಬಿ ಆಜಾದ್‌ ಹಾಗೂ ವೇಣುಗೋಪಾಲ್‌  ಅವರೊಂದಿಗೆ ಮಾತನಾಡುತ್ತೇನೆ’ ಎಂದರು.

‘ಬಿಜೆಪಿ ಶಕ್ತಿ ಇರುವ ಪ್ರದೇಶದಲ್ಲಿ ಕಾಂಗ್ರೆಸ್‌ ಬಲವರ್ಧನೆಗೆ ಎರಡನೇ ಡಿಸಿಎಂ ಹುದ್ದೆ ಸೃಷ್ಟಿ ಮಾಡಲಾಗುತ್ತಿದೆಯೇ’ ಎಂಬ ಪ್ರಶ್ನೆಗೆ, ‘ಅವರ ಶಕ್ತಿ ಕಡಿಮೆ ಮಾಡಲು ನಾವು ಯಾರು, ಅವರ ಶಕ್ತಿ ಅವರಿಗಿದ್ದೇ ಇರುತ್ತದೆ’ ಎಂದು ಶಿವಶಂಕರಪ್ಪ ಹೇಳಿದರು.

ವಿಧಾನಸಭೆ ಚುನಾವಣೆ–2018

ಜಾತಿ ಮತ್ತು ಪಕ್ಷದ ಸಂಗ್ರಹಿತ ಫಲಿತಾಂಶ ಪಟ್ಟಿ

ಜಾತಿ;ಕಾಂಗ್ರೆಸ್‌;ಬಿಜೆಪಿ;ಜೆಡಿಎಸ್‌;ಇತರರು; ಒಟ್ಟು‌

ವೀರಶೈವ ಲಿಂಗಾಯತ; 16; 38; 04; 00; 58

ಒಕ್ಕಲಿಗ; 11; 08; 23; 00; 42

ಪರಿಶಿಷ್ಟ ಜಾತಿ (ಎಸ್‌.ಸಿ); 12; 16; 06; 02; 36

ಇತರರು; 05; 16; 00; 00; 21

‍ಪರಿಶಿಷ್ಟ ಪಂಗಡ (ಎಸ್.ಟಿ); 09; 09; 01; 00; 19

ಬ್ರಾಹ್ಮಣರು; 04; 10; 00; 00; 14

ಕುರುಬ; 09; 01; 02; 01; 13

ರೆಡ್ಡಿ; 04; 04; 01; 00; 09

ಮುಸ್ಲಿಮರು; 07; 00; 00; 00; 07

ಕೊಡವ; 00; 02; 00; 00; 02

ಕ್ರಿಶ್ಚಿಯನ್; 01; 00; 00; 00; 01

ಒಟ್ಟು; 78; 104; 37; 03; 222

* ನಮ್ಮ ಪಕ್ಷಕ್ಕೆ ಈಗಾಗಲೇ ಮುಖ್ಯಮಂತ್ರಿ ಸ್ಥಾನ ಇದೆ. ಒಂದು ಉಪ ಮುಖ್ಯಮಂತ್ರಿ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ಕೊಟ್ಟರೆ ನಾವು ಸ್ವಾಗತಿಸುತ್ತೇವೆ.

-ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ (ಜೆಡಿಎಸ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry