3

ವಿಟ್ಲ ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ

Published:
Updated:
ವಿಟ್ಲ ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ

ವಿಟ್ಲ: ಕಾಂಗ್ರೆಸ್‌ ವಿಜಯೋತ್ಸವದ ವೇಳೆ ಉಂಟಾದ ಘರ್ಷಣೆಯ ಬಳಿಕ ಪಟ್ಟಣ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಭಾನುವಾರ ನೂರಾರು ಜನರು ಇಲ್ಲಿನ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು.

ಆದರೆ, ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರ ಮನವೊಲಿಕೆ ನಂತರ ಠಾಣೆಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ಬಿಜೆಪಿ ಕಾರ್ಯಕರ್ತರು ಹಿಂದಕ್ಕೆ ಪಡೆದರು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರಲಿರುವುದರಿಂದ ಶನಿವಾರ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿಗೆ ಧಿಕ್ಕಾರ ಕೂಗಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿದ್ದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು,  ಘರ್ಷಣೆಗೆ ತಿರುಗಿತ್ತು. ಈ ವೇಳೆ ಆರು ಜನರು ಗಾಯಗೊಂಡಿದ್ದು, ವಿಟ್ಲ ಮತ್ತು ಪುತ್ತೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಪಡೆಯುತ್ತಿದ್ದಾರೆ.

ಈ ಘಟನೆಯನ್ನು ಖಂಡಿಸಿ ಭಾನುವಾರ ಬೆಳಿಗ್ಗೆ ಸಾವಿರಾರು ಕಾರ್ಯಕರ್ತರು ವಿಟ್ಲ ಪೊಲೀಸ್ ಠಾಣಾ ಸಮೀಪ ಇರುವ ನಗರ ಬಿಜೆಪಿ ಕಚೇರಿ ಮುಂಭಾಗ ಸೇರಿದ್ದರು. ಪೊಲೀಸರು ಬಿಜೆಪಿ ಮುಖಂಡರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಚೇರಿಗೆ ಬಂದ ಸಂಸದ ನಳಿನ್‌ಕುಮಾರ್ ಕಟೀಲ್‌, ‘ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಮತ್ತು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಕಾರ್ಯಕರ್ತರು ಯಾವುದೇ ರೀತಿಯಲ್ಲಿ ಕಾನೂನು ಭಂಗ ಮಾಡಬಾರದು. ಮನೆಗೆ ನುಗ್ಗಿ ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾನೂನು ಪ್ರಕಾರವಾಗಿ ಆಗ್ರಹಿಸೋಣ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ಒಂದು ದಿನದ ಗಡುವು ನೀಡೋಣ’ ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರೂ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ನಂತರ ಬಿಜೆಪಿ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

‘ವಿಟ್ಲ ಪರಿಸರದಲ್ಲಿ ನಡೆದಿರುವ ಗಲಾಟೆಗಳು ಕೋಮು ದ್ವೇಷಕ್ಕೆ ಸಂಬಂಧಿಸಿದ್ದಲ್ಲ. ರಾಜಕೀಯ ಕಾರಣಗಳಿಗೆ ನಡೆದಿವೆ. ಸ್ವತಃ ಸ್ಥಳಕ್ಕೆ ಭೇಟಿ ನೀಡಿ ನಿಗಾ ವಹಿಸಿದ್ದೇನೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಬಿ.ಆರ್‌. ರವಿಕಾಂತೇಗೌಡ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry