ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟ

4
ಸಂಪುಟದಲ್ಲಿ ಪ್ರಮುಖ ಖಾತೆ, ಸ್ಪೀಕರ್‌ ಹುದ್ದೆಗೆ ಕಾಂಗ್ರೆಸ್‌– ಜೆಡಿಎಸ್‌ ಪೈಪೋಟಿ

ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟ

Published:
Updated:
ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರ ರಚಿಸುವುದು ಖಚಿತವಾದ ಬೆನ್ನಲ್ಲೇ ಸಚಿವ ಸ್ಥಾನಗಳನ್ನು ಹಂಚಿಕೊಳ್ಳುವ ಕುರಿತು ಎರಡೂ ಪಕ್ಷಗಳ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ.

ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ನವದೆಹಲಿಗೆ ತೆರಳಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪಕ್ಷದ ಪ್ರಮುಖರ ಜೊತೆ ಅಧಿಕಾರ ಹಂಚಿಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ.

ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಕುಮಾರಸ್ವಾಮಿ

ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಸೇರಿ 14 ಸಚಿವ ಸ್ಥಾನಗಳು ಜೆಡಿಎಸ್‌ಗೆ ಮತ್ತು 20 ಸ್ಥಾನಗಳು ಕಾಂಗ್ರೆಸ್‌ಗೆ ಎಂದು ಒಪ್ಪಂದವಾಗಿದೆ. ಹಣಕಾಸು, ಗೃಹ, ಕಂದಾಯ, ಜಲ ಸಂಪನ್ಮೂಲ, ಸಾರಿಗೆ, ಬೃಹತ್‌ ಕೈಗಾರಿಕೆ, ಬೆಂಗಳೂರು ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ

ಗಳಿಗೆ ಎರಡೂ ಪಕ್ಷಗಳ ನಡುವೆ ಪೈಪೋಟಿ ಇದೆ. ಖಾತೆ ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಎರಡೂ ಪಕ್ಷಗಳ ಹಿರಿಯ ನಾಯಕರು ಚರ್ಚೆ ನಡೆಸಲಿದ್ದಾರೆ.

ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿರುವ ಪಕ್ಷೇತರ ಸದಸ್ಯ ಎಚ್‌. ನಾಗೇಶ್‌, ಕೆಪಿಜೆಪಿಯ ಆರ್‌. ಶಂಕರ್‌ ಹಾಗೂ ಬಿಎಸ್‌ಪಿಯ ಎನ್‌. ಮಹೇಶ್‌ಗೂ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಈ ಮೂವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಿದರೆ ಜೆಡಿಎಸ್‌ ಅಥವಾ ಕಾಂಗ್ರೆಸ್‌ಗೆ ಈಗ ನಿರ್ಧರಿಸಿರುವಷ್ಟು ಸಚಿವ ಸ್ಥಾನಗಳು ಸಿಗುವುದಿಲ್ಲ. ಜೆಡಿಎಸ್‌ ಪಾಲಿನ 14 ಸ್ಥಾನಗಳಲ್ಲೇ ಇವರಿಗೂ ಸ್ಥಾನ ಬಿಟ್ಟುಕೊಡಲಿ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಕಾಂಗ್ರೆಸ್‌ನ ಪ್ರಮುಖರು ಗೋಪ್ಯ ಸಭೆ ನಡೆಸಿ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಅವಕಾಶ ಕಲ್ಪಿಸಬೇಕು ಎಂಬ ಬಗ್ಗೆಯು ಸಮಾಲೋಚನೆ ನಡೆಸಿದ್ದಾರೆ. ಸಚಿವ ಸ್ಥಾನ ಹಂಚಿಕೆ ವೇಳೆ ಹಿರಿಯರಿಗೆ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಪಕ್ಷದ ಕೆಲವು ಹಿರಿಯ ಶಾಸಕರು ಪ್ರಮುಖ ಖಾತೆಗಳಿಗಾಗಿ ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಕೆಲವು ಶಾಸಕರು ಒತ್ತಾಯಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲೂ ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸಚಿವರಾಗುವ ಅವಕಾಶ ಕೈ ತಪ್ಪಿದರೆ ಕೆಲವು ನಾಯಕರು ನಿಷ್ಠೆ ಬದಲಾಯಿಸುವ ಆತಂಕವೂ ಕಾಂಗ್ರೆಸ್‌ ಅನ್ನು ಕಾಡುತ್ತಿದೆ. ಹೀಗಾಗಿ, ಬಹುಮತ ಸಾಬೀತುಪಡಿಸುವ ವರೆಗೂ ಪಕ್ಷದಿಂದ ಯಾರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬೇಡ ಎಂದು ಕಾಂಗ್ರೆಸ್‌ ತೀರ್ಮಾನಿಸಿದೆ.

‘ಕುಮಾರಸ್ವಾಮಿ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುರುವಾರ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಶುಕ್ರವಾರ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸ್ಪಷ್ಟಪಡಿಸಿದ್ದಾರೆ.

ಎರಡು ಉಪಮುಖ್ಯಮಂತ್ರಿ ಸ್ಥಾನಗಳಿಗೆ ಬೇಡಿಕೆ?: ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಬೇಕು. ಒಂದು ಸ್ಥಾನವನ್ನು ದಲಿತರಿಗೆ, ಇನ್ನೊಂದನ್ನು ಲಿಂಗಾಯತರಿಗೆ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್‌ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಉತ್ತರ ಕರ್ನಾಟಕದವರೊಬ್ಬರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಪಕ್ಷಕ್ಕೂ ಅನುಕೂಲವಾಗುತ್ತದೆ. ಲಿಂಗಾಯತ ಸಮುದಾಯದ ನಾಯಕ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು ಎಂದು ಬಿಜೆಪಿಯವರು ಈಗಾಗಲೇ ಹುಯಿಲೆಬ್ಬಿದ್ದಾರೆ. ಕನಿಷ್ಠಪಕ್ಷ ಉಪಮುಖ್ಯಮಂತ್ರಿ ಸ್ಥಾನವನ್ನು ಈ ಸಮುದಾಯದ ಶಾಸಕರಿಗೆ ನೀಡಿದರೆ ಪಕ್ಷಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು ಎಂದು ಕೆಲವರು ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಪಕ್ಷದ ಶಾಸಕರೆಲ್ಲ ಒಗ್ಗಟ್ಟಾಗಿರುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಕೂಡಾ ಈ ಸ್ಥಾನದ ಆಕಾಂಕ್ಷಿ ಎಂದು ಮೂಲಗಳು ತಿಳಿಸಿವೆ. ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದು ಬಹುತೇಕ ಖಚಿತ. ಇನ್ನೊಂದು ಸ್ಥಾನಕ್ಕಾಗಿ ಶಾಮನೂರು ಶಿವಶಂಕರಪ್ಪ ಪ್ರಬಲ ಆಕಾಂಕ್ಷಿ. ಎಂ.ಬಿ. ಪಾಟೀಲ ಹಾಗೂ ಎಚ್‌.ಕೆ. ಪಾಟೀಲ ಅವರೂ ಈ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ.

‘ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆ ಚರ್ಚೆ ನಡೆದಿರುವುದು ನಿಜ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಪರಮೇಶ್ವರ ತಿಳಿಸಿದರು.

* ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಸದಸ್ಯರು ಸೇರಿ 15 ಮಂದಿ ಇರಲಿದ್ದಾರೆ. ಸಮಿತಿ ಅಧ್ಯಕ್ಷ ಸ್ಥಾನವನ್ನು ಯಾರು ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸಮಿತಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ ಉದ್ದೇಶಿಸಿದೆ.

ಸ್ಪೀಕರ್‌ ಸ್ಥಾನಕ್ಕೆ ಜೆಡಿಎಸ್‌ ಪಟ್ಟು

ತಮ್ಮ ಪಕ್ಷದವರೇ ಸ್ಪೀಕರ್‌ ಆಗಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಪಟ್ಟು ಹಿಡಿದಿದ್ದಾರೆ.

ಸರ್ಕಾರವನ್ನು ಹದ್ದುಬಸ್ತಿನಲ್ಲಿಟ್ಟು, ಕಲಾಪಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಈ ಹುದ್ದೆ ತಮ್ಮ ವಶದಲ್ಲಿರುವುದು ಅವಶ್ಯಕ ಎಂಬುದು ಜೆಡಿಎಸ್‌ ಲೆಕ್ಕಾಚಾರ. ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲು ಪಕ್ಷ ಒಲವು ಹೊಂದಿದೆ.

ಮೈತ್ರಿಕೂಟದಲ್ಲಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್‌ ಕೂಡಾ ಸ್ಪೀಕರ್‌ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಶ್ರೀನಿವಾಸಪುರದ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಅವರನ್ನು ಈ ಪೀಠದಲ್ಲಿ ಕುಳ್ಳಿರಿಸಲು ಬಯಸಿದೆ. ರಮೇಶ್‌ ಕುಮಾರ್‌ 1994ರಿಂದ 99ರವರೆಗೆ ಸ್ಪೀಕರ್‌ ಆಗಿದ್ದರು.

‘ಬಹುಮತ ಪಡೆದ ಬಳಿಕ ದೆಹಲಿಗೆ ಬನ್ನಿ’

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಸೇರಿದಂತೆ ಪಕ್ಷದ ಕೆಲವು ಪ್ರಮುಖರು ಸೋಮವಾರ ನವದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ, ಪಕ್ಷದ ವರಿಷ್ಠರು, ‘ಸದನದಲ್ಲಿ ಬಹುಮತ ಸಾಬೀತುಪಡಿಸುವವರೆಗೆ ಯಾರೂ ದೆಹಲಿಗೆ ಬರುವ ಅಗತ್ಯವಿಲ್ಲ’ ಎಂದು ಸೂಚನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry