ಇನ್ನೂ ದೂರವಾಗದ ‘ಆಪರೇಷನ್‌ ಕಮಲ’ ಭೀತಿ

7
ಬೆಂಗಳೂರಿನಲ್ಲೇ ಉಳಿದ ಜೆಡಿಎಸ್‌, ಕಾಂಗ್ರೆಸ್‌ ಶಾಸಕರು

ಇನ್ನೂ ದೂರವಾಗದ ‘ಆಪರೇಷನ್‌ ಕಮಲ’ ಭೀತಿ

Published:
Updated:
ಇನ್ನೂ ದೂರವಾಗದ ‘ಆಪರೇಷನ್‌ ಕಮಲ’ ಭೀತಿ

ಬೆಂಗಳೂರು: ವಿಧಾನಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ಮತ ಸಾಬೀತುಪಡಿಸದಂತೆ ತಡೆದ ಬಳಿಕವೂ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟಕ್ಕೆ ‘ಆಪರೇಷನ್‌ ಕಮಲ’ದ ಭೀತಿ ದೂರವಾಗಿಲ್ಲ.

ಮೈತ್ರಿಕೂಟ 117 ಸದಸ್ಯ ಬಲ ಹೊಂದಿದೆ. ಬಹುಮತ ಸಾಬೀತುಪಡಿಸಲು 111 ಮತಗಳ ಅಗತ್ಯವಿದೆ. ಬಿಜೆಪಿಯವರು ಇನ್ನು ಮುಂದೆಯೂ ತಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರಿಸಿದರೆ ಮೈತ್ರಿಕೂಟ ಸದನದಲ್ಲಿ ಬಹುಮತ ಸಾಬೀತು ಪಡಿಸುವುದು ಕಷ್ಟವಾಗಲಿದೆ. ಇದಕ್ಕೆ ಅವಕಾಶ ಕಲ್ಪಿಸಬಾರದು ಎಂಬ ಕಾರಣಕ್ಕೆ ಎರಡೂ ಪಕ್ಷಗಳು ಎಚ್ಚರಿಕೆಯ ನಡೆ ಇಟ್ಟಿವೆ.

ನಗರದ ಲಿ–ಮೆರಿಡಿಯನ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ತನ್ನ ಶಾಸಕರನ್ನು ಜೆಡಿಎಸ್‌ ನಾಯಕರು ಭಾನುವಾರ ಸಂಜೆ ದೇವನಹಳ್ಳಿ ಬಳಿಯ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ.

ಕಾಂಗ್ರೆಸ್‌ ಶಾಸಕರು ದೊಮ್ಮಲೂರಿನ ಹಿಲ್ಟನ್‌ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ಹೋಟೆಲ್‌ಗೆ ಖಾಸಗಿ ಭದ್ರತೆ ಒದಗಿಸಲಾಗಿದೆ. ಅಪರಿಚಿತ ವಾಹನಗಳು ಹೋಟೆಲ್‌ನತ್ತ ಸುಳಿಯದಂತೆ ತಡೆಯಲಾಗುತ್ತಿದೆ. ಹೋಟೆಲ್‌ಗೆ ಬರುವವರ ಪೂರ್ವಾಪರ ವಿಚಾರಿಸಲಾಗುತ್ತಿದೆ.

ಜೆಡಿಎಸ್ ಶಾಸಕರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ನಾವು ಯಾವುದೇ ಕಾರಣಕ್ಕೂ ಮೈಮರೆಯಬಾರದು. ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ನಮ್ಮ ಒಗ್ಗಟ್ಟನ್ನು ಮುರಿಯಲು ಅವಕಾಶ ಕಲ್ಪಿಸುವುದು ಬೇಡ’ ಎಂದು ಸೂಚನೆ ನೀಡಿದರು.

ಇನ್ನೊಂದೆಡೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಮ್ಮಲ್ಲಿ ಒಡಕು ಮೂಡಿಸಲು ಬಿಜೆಪಿಯವರು ಕೊನೆಕ್ಷಣದವರೆಗೂ ಪ್ರಯತ್ನ ಮುಂದುವರೆಸುತ್ತಾರೆ. ಬಹುಮತ ಸಾಬೀತುಪಡಿಸುವವರೆಗೂ ಎಲ್ಲರೂ ಒಂದೇ ಕಡೆ ಇರಬೇಕಾಗುತ್ತದೆ. ಒಂದೆರಡು ದಿನ ಸ್ವಲ್ಪ ಕಷ್ಟ ಆಗಬಹುದು. ಆದರೆ, ಭವಿಷ್ಯದಲ್ಲಿ ಎಲ್ಲರಿಗೂ ಒಳ್ಳೆಯದೇ ಆಗಲಿದೆ’ ಎಂದು ಶಾಸಕರಲ್ಲಿ ಭರವಸೆ ತುಂಬಿದರು.

ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಸಂಸದರಾದ ಎಂ. ವೀರಪ್ಪ ಮೊಯಿಲಿ, ಕೆ.ಎಚ್‌. ಮುನಿಯಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗೋಪ್ಯವಾಗಿ ಸಭೆ ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.

ಶಾಸಕರು ಈಗಾಗಲೇ ಐದು ದಿನಗಳಿಂದ ಕ್ಷೇತ್ರ ಹಾಗೂ ಕುಟುಂಬದವರಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಕುಟುಂಬಸ್ಥರನ್ನು ಹೋಟೆಲ್‌ಗೆ ಕರೆಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗಿದೆ. ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಗುರುವಾರ ಸದನದಲ್ಲಿ ಬಹುಮತ ಸಾಬೀತುಪಡಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಶಾಸಕರು ಇನ್ನೂ ನಾಲ್ಕು ದಿನ ಮನೆಗೆ ಮರಳಲು ಅವಕಾಶ ಇಲ್ಲ.

ಆನಂದ್‌ ಸಿಂಗ್‌, ಪ್ರತಾಪಗೌಡ ಮೇಲೆ ವಿಶೇಷ ನಿಗಾ

ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್‌ ಪಾಳೆಯದಿಂದ ದೂರ ಉಳಿದಿದ್ದ ವಿಜಯನಗರ (ಬಳ್ಳಾರಿ) ಕ್ಷೇತ್ರದ ಶಾಸಕ ಆನಂದ ಸಿಂಗ್‌ ಮತ್ತು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಶನಿವಾರದಿಂದ ಕಾಂಗ್ರೆಸ್‌ ಪಾಳೆಯದಲ್ಲೇ ಇದ್ದಾರೆ. ಅವರು ಮತ್ತೆ ಕೈ ತಪ್ಪದಿರುವಂತೆ ಪಕ್ಷದ ವರಿಷ್ಠರು ಎಚ್ಚರ ವಹಿಸಿದ್ದಾರೆ.

‘ಅವರಿಬ್ಬರ ಮೇಲೆ ವಿಶೇಷ ನಿಗಾ ವಹಿಸಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

* ಸರ್ಕಾರ ರಚನೆ ಪ್ರಕ್ರಿಯೆ ಮುಗಿಯುವ ವರೆಗೂ ಶಾಸಕರು ಒಟ್ಟಿಗೇ ಇರುತ್ತಾರೆ‌

- ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry