ಬ್ಯಾಡ್ಮಿಂಟನ್‌: ಭಾರತಕ್ಕೆ ನಿರಾಸೆಯ ಆರಂಭ

7
ಥಾಮಸ್‌ ಮತ್ತು ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ

ಬ್ಯಾಡ್ಮಿಂಟನ್‌: ಭಾರತಕ್ಕೆ ನಿರಾಸೆಯ ಆರಂಭ

Published:
Updated:
ಬ್ಯಾಡ್ಮಿಂಟನ್‌: ಭಾರತಕ್ಕೆ ನಿರಾಸೆಯ ಆರಂಭ

ಬ್ಯಾಂಕಾಕ್‌: ಭಾರತದ ಪುರುಷರ ಹಾಗೂ ಮಹಿಳೆಯರ ತಂಡಗಳು ಥಾಮಸ್‌ ಮತ್ತು ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಸೋಲು ಕಂಡಿವೆ. ಇದರಿಂದಾಗಿ ನಾಕ್‌ಔಟ್‌ ಹಂತಕ್ಕೆ ತಲುಪಲು ಮುಂದಿನ ಪಂದ್ಯ ಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಎರಡು ತಂಡಗಳು ಸಿಲುಕಿವೆ.

ಭಾನುವಾರ ನಡೆದ ಥಾಮಸ್‌ ಕಪ್ ಪಂದ್ಯದಲ್ಲಿ ಭಾರತದ ಪುರುಷರ ತಂಡವು 1–4ರಿಂದ ಫ್ರಾನ್ಸ್‌ ತಂಡದ ವಿರುದ್ದ ಸೋತಿತು.

ಮೊದಲ ಪಂದ್ಯದಲ್ಲಿ ಭಾರತ ಪುರುಷ ತಂಡದ ಸಾರಥ್ಯ ವಹಿಸಿದ್ದ ಬಿ ಸಾಯಿಪ್ರಣೀತ್‌ ಅವರು ಫ್ರಾನ್ಸ್‌ನ ಬ್ರೈಸ್‌ ಲೆವೆರ್ಡೆಜ್‌ ಅವರನ್ನು 21–7, 21–18ರಿಂದ ಮಣಿಸಿದರು. ಈ ಮೂಲಕ 1–0 ಮುನ್ನಡೆಯೊಂದಿಗೆ ಉತ್ತಮ ಆರಂಭ ದೊರಕಿಸಿಕೊಟ್ಟರು. ಆರಂಭದಿಂದಲೂ ಬಿರುಸಿನ ಆಟಕ್ಕಿಳಿದ ಸಾಯಿಪ್ರಣೀತ್‌ ಅವರು ಆಕರ್ಷಕ ಡ್ರಾಪ್‌ ಹಾಗೂ ಸ್ಮ್ಯಾಷ್‌ಗಳ ಮೂಲಕ ಗಮನಸೆಳೆದರು.

ಆದರೆ, ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಬ್ಯಾಸ್ಟಿಯನ್‌ ಕೆರ್ಸೌಡಿ ಹಾಗೂ ಜೂಲಿಯನ್‌ ಮೆಯೊ ಜೋಡಿಯು ಎಂ. ಆರ್‌. ಅರ್ಜುನ್‌ ಹಾಗೂ ರಾಮಚಂದ್ರನ್‌ ಶ್ಲೋಕ್‌ ಜೋಡಿಯನ್ನು13–21, 16–21ರಿಂದ ಮಣಿಸಿತು. ಇದರೊಂದಿಗೆ ಫ್ರಾನ್ಸ್‌ ತಂಡವು ಪಂದ್ಯದಲ್ಲಿ 1–1ರ ಸಮಬಲ ಸಾಧಿಸಿತು.

ರೋಚಕ ಹೋರಾಟದ ಮೂರನೇ ಪಂದ್ಯದಲ್ಲಿ ಭಾರತದ ಸಮೀರ್‌ ವರ್ಮಾ ಅವರು ಲೂಕಾಸ್‌ ಕೊರ್ವಿ ವಿರುದ್ಧ 18–21, 22–20, 18–21ರಿಂದ ಸೋತರು. ಈ ಗೆಲುವಿನ ಮೂಲಕ ಫ್ರಾನ್ಸ್‌ ತಂಡವು 2–1ರ ಮುನ್ನಡೆ ಕಾಯ್ದುಕೊಂಡಿತು.

ಮೊದಲ ಗೇಮ್‌ನ ಸೋಲಿನ ನಂತರ ಸಮೀರ್‌ ಅವರು ಎಚ್ಚರಿಕೆಯಿಂದ ಆಡಿದರು. ಎರಡನೇ ಗೇಮ್‌ನಲ್ಲಿ ಇಬ್ಬರು ಆಟಗಾರರು ಆಕರ್ಷಕ ಸ್ಮ್ಯಾಷ್‌ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದರು. ಆದರೆ, ನಿರ್ಣಾಯಕ ಹಂತದಲ್ಲಿ ತಪ್ಪೆಸಗಿದ ಸಮೀರ್‌ ಗೇಮ್‌ ಕಳೆದುಕೊಂಡರು.

ನಿರ್ಣಾಯಕವಾಗಿದ್ದ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಅರುಣ ಜಾರ್ಜ್‌ ಹಾಗೂ ಸನ್ಯಾಮ್‌ ಶುಕ್ಲಾ ಜೋಡಿಯು 10–21, 12–21ರಿಂದ ಥೋಮ್‌ ಗಿಕ್ಯುಲ್‌ ಹಾಗೂ ರೋನನ್‌ ಲೆಬರ್‌ ಜೋಡಿಗೆ ಸೋತಿತು.

ಕೊನೆಯ ಪಂದ್ಯದಲ್ಲಿ ಯುವ ಆಟಗಾರ ಲಕ್ಷ್ಯ ಸೇನ್‌ ಅವರು ಸವಾಲಿನ ಹೋರಾಟ ಮಾಡಿದರಾದರೂ ಗೆಲುವು ಲಭಿಸಲಿಲ್ಲ. ಟೊಮಾ ಜೂನಿಯರ್‌ ಪೊಪೊವ್‌ ಅವರ ವಿರುದ್ಧ 20–22, 21–19, 19–21ರಿಂದ ಲಕ್ಷ್ಯ ಅವರು ಸೋಲು ಕಂಡರು.

ಮಹಿಳಾ ತಂಡಕ್ಕೆ ಸೋಲು: ಪ್ರಮುಖ ಆಟಗಾರ್ತಿಯರಾದ ಪಿ. ವಿ. ಸಿಂಧು, ಅಶ್ವಿನಿ ಪೊನ್ನಪ್ಪ ಹಾಗೂ ಎನ್‌. ಸಿಕ್ಕಿ ರೆಡ್ಡಿ ಅವರಿಲ್ಲದೇ ಕಣಕ್ಕಿಳಿದ ಭಾರತದ ಮಹಿಳಾ ತಂಡವು ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಸೋಲು ಕಂಡಿತು.

ಮಹಿಳೆಯರ ತಂಡದ ಸಾರಥ್ಯ ವಹಿಸಿರುವ ಸೈನಾ ನೆಹ್ವಾಲ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಕೆನಡಾದ ಮಿಷೆಲ್‌ ಲಿ ವಿರುದ್ಧ 21–15, 16–21, 16–21ರಿಂದ ಸೋತರು. ಅನುಭವಿ ಸೈನಾ ಅವರ ಸವಾಲು ಮೀರಿದ ಮಿಷೆಲ್‌ ತಮ್ಮ ತಂಡಕ್ಕೆ 1–0 ಮುನ್ನಡೆ ತಂದುಕೊಟ್ಟರು.

ಸಿಂಗಲ್ಸ್‌ ವಿಭಾಗದ ಎರಡನೇ ಪಂದ್ಯದಲ್ಲಿ ವೈಷ್ಣವಿ ರೆಡ್ಡಿ ಜಕ್ಕಾ ಅವರನ್ನು 11–21, 13–21ರಿಂದ ಫ್ರಾನ್ಸ್‌ನ ರಚೆಲ್‌ ಹೊಂಡೆರಿಚ್‌ ಮಣಿಸಿದರು. ಇದರಿಂದಾಗಿ ಫ್ರಾನ್ಸ್‌ ತಂಡವು 2–0 ಮುನ್ನಡೆ ಹೊಂದಿತು.

ಡಬಲ್ಸ್‌ ವಿಭಾಗದ ಮುಂದಿನ ಪಂದ್ಯದಲ್ಲಿ ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ಎಸ್‌. ರಾಮ್‌ ಜೋಡಿಯು ಗೆಲುವು ಸಾಧಿಸಿ ಭಾರತ ತಂಡದಲ್ಲಿ ಭರವಸೆ ಹುಟ್ಟಿಸಿತು. ಭಾರತದ ಜೋಡಿಯು ಮಿಷೆಲ್‌ ಟಾಂಗ್‌ ಹಾಗೂ ಜೊಸೆಫಿನ್‌ ವು ಜೋಡಿಯನ್ನು 21–19, 21–15ರಿಂದ ಸೋಲಿಸಿತು.

ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಶ್ರೀ ಕೃಷ್ಣ ಪ್ರಿಯಾ ಕುಂದರವಲ್ಲಿ ಅವರು ಬ್ರಿಟ್ನಿ ಟ್ಯಾಮ್‌ ಅವರ ವಿರುದ್ಧ 11–21, 15–21ರಿಂದ ಸೋತರು.

ಕೊನೆಯ ಪಂದ್ಯದಲ್ಲಿ ಭಾರತದ ಸನ್ಯೋಗಿತಾ ಘೋರ್ಪಡೆ ಹಾಗೂ ಪ್ರಜಕ್ತಾ ಸಾವಂತ್‌ ಜೋಡಿಯು 15–21, 16–21ರಿಂದ ರಚೆಲ್‌ ಹೊಂಡೆರಿಚ್‌ ಹಾಗೂ ಕ್ರಿಸ್ಟನ್‌ ತ್ಸೈ ಜೋಡಿಯ ವಿರುದ್ಧ ಸೋತಿತು.

ಸೋಮವಾರ ನಡೆಯುವ ನಿರ್ಣಾಯಕ ಪಂದ್ಯದಲ್ಲಿ ಭಾರತದ ಉಭಯ ತಂಡಗಳು ಆಸ್ಟ್ರೇಲಿಯಾವನ್ನು ಎದುರಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry