ಮುಂಬೈ ತಂಡದ ಕನಸು ಭಗ್ನ

7
ಗೆಲುವಿನೊಂದಿಗೆ ಅಭಿಯಾನಕ್ಕೆ ಅಂತ್ಯ ಹಾಡಿದ ಡೆಲ್ಲಿ ಡೇರ್‌ ಡೆವಿಲ್ಸ್‌

ಮುಂಬೈ ತಂಡದ ಕನಸು ಭಗ್ನ

Published:
Updated:
ಮುಂಬೈ ತಂಡದ ಕನಸು ಭಗ್ನ

ನವದೆಹಲಿ: ಗೆಲುವಿನ ಹೊಸ್ತಿಲಲ್ಲಿ ಎಡವಿದ ಹಾಲಿ ಚಾಂಪಿ ಯನ್‌ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಬಿದ್ದಿತು.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಡೇರ್‌ ಡೆವಿಲ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 11 ರನ್‌ಗಳಿಂದ ಗೆದ್ದಿತು. ಈ ಮೂಲಕ ಸತತ ಎರಡು ಜಯದೊಂದಿಗೆ 11ನೇ ಆವೃತ್ತಿಯ ಅಭಿಯಾನಕ್ಕೆ ಅಂತ್ಯ ಹಾಡಿತು.

ರಿಷಭ್ ಪಂತ್ ಮತ್ತು ವಿಜಯ್‌ ಶಂಕರ್ ಅವರ ಭರ್ಜರಿ ಬ್ಯಾಟಿಂಗ್ ಮೂಲಕ 174 ರನ್‌ ಗಳಿಸಿದ ಡೆಲ್ಲಿ ತಂಡ ಎದುರಾಳಿಗಳನ್ನು ಕಾಡಿದರು. ಹೀಗಾಗಿ ಮುಂಬೈ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಸಾಗಿತು.

ಆರಂಭದಲ್ಲಿ ಎವಿನ್ ಲೂಯಿಸ್ (48; 31 ಎ, 4 ಸಿ, 3 ಬೌಂ) ಮತ್ತು ಅಂತಿಮ ಓವರ್‌ಗಳಲ್ಲಿ ಬೆನ್ ಕಟಿಂಗ್‌ (37; 20 ಎ, 3 ಸಿ, 2 ಬೌಂ) ನಡೆಸಿದ ಹೋರಾಟ ವ್ಯರ್ಥವಾಯಿತು. ನೇಪಾಳದ ಯುವ ಸ್ಪಿನ್ನರ್‌ ಸಂದೀಪ್ ಲಮಿಚಾನೆ ಮತ್ತು ಲೆಗ್ ಸ್ಪಿನ್ನರ್‌ ಅಮಿತ್ ಮಿಶ್ರಾ ಅವರು ಪರಿಣಾಮಕಾರಿ ದಾಳಿ ಮೂಲಕ ಡೇರ್ ಡೆವಿಲ್ಸ್‌ಗೆ ಜಯ ಗಳಿಸಿಕೊಟ್ಟರು.

ಸೂರ್ಯಕುಮಾರ್ ಯಾದವ್‌ ಮೊದಲ ಓವರ್‌ನ ನಾಲ್ಕನೇ ಎಸೆತ ದಲ್ಲೇ ಔಟಾದರು. ಸ್ಫೋಟಕ ಬ್ಯಾಟ್ಸ್‌ ಮನ್‌ಗಳಾದ ಇಶಾನ್ ಕಿಶನ್ ಮತ್ತು ಕೀರನ್ ಪೊಲಾರ್ಡ್ ಕೂಡ ಬೇಗನೇ ಮರಳಿದರು. ಆರಂಭಿಕ ಬ್ಯಾಟ್ಸ್‌ಮನ್‌ ಲೂಯಿಸ್‌ ಜೊತೆಗೂಡಿದ ನಾಯಕ ರೋಹಿತ್ ಶರ್ಮಾ ಭರವಸೆ ಮೂಡಿಸಿದರು.

13 ರನ್‌ ಗಳಿಸಿ ಶರ್ಮಾ ಔಟಾಗುವುದರೊಂದಿಗೆ ತಂಡದ ಸಂಕಷ್ಟ ಹೆಚ್ಚಿತು. ಹಾರ್ದಿಕ್ ಪಾಂಡ್ಯ ಮತ್ತು ಬೆನ್ ಕಟಿಂಗ್‌ ಮತ್ತೆ ಭರವಸೆ ಮೂಡಿಸಿದರು. ಆದರೆ ನಿರ್ಣಾಯಕ ಹಂತದಲ್ಲಿ ಇವರ ವಿಕೆಟ್ ಉರುಳಿದ್ದು ತಂಡಕ್ಕೆ ಭಾರಿ ಪೆಟ್ಟು ನೀಡಿತು.

ಪಂತ್‌, ವಿಜಯ್‌ ಭರ್ಜರಿ ಭರ್ಜರಿ ಬ್ಯಾಟಿಂಗ್‌: ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ಒಂದು ಹಂತದಲ್ಲಿ 38 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ರಿಷಭ್‌ ಪಂತ್ (64; 44 ಎ, 4 ಸಿ, 4 ಬೌಂ ) ಮತ್ತು ವಿಜಯಶಂಕರ್‌ (ಅಜೇಯ 43; 30 ಎ, 2 ಸಿ, 3 ಬೌಂ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ತಂಡ 30 ರನ್‌ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ರನ್‌ ಔಟ್‌ ಆದರು. ಎಂಟು ರನ್ ಸೇರಿಸುವಷ್ಟರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಮರಳಿದರು. ಅವರನ್ನು ಜಸ್‌‍ಪ್ರೀತ್ ಬೂಮ್ರಾ ಬೌಲ್ಡ್ ಮಾಡಿದರು. ನಾಯಕ ಶ್ರೇಯಸ್ ಅಯ್ಯರ್‌ ಕೇವಲ ಆರು ರನ್‌ ಗಳಿಸಿ ಮಯಂಕ್ ಮಾರ್ಕಂಡೆಗೆ ವಿಕೆಟ್ ಒಪ್ಪಿಸಿದರು.

ಈ ಸಂದರ್ಭದಲ್ಲಿ ಜೊತೆಯಾದ ರಿಷಭ್ ಮತ್ತು ವಿಜಯ್‌ ನಾಲ್ಕನೇ ವಿಕೆಟ್‌ಗೆ 64 ರನ್‌ ಸೇರಿಸಿದರು.

ಭರ್ಜರಿ ಬ್ಯಾಟಿಂಗ್ ಮಾಡಿದ ಪಂತ್‌ ತವರಿನ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಅವರು ಔಟಾದ ನಂತರ ವಿಜಯಶಂಕರ್‌ ಜೊತೆ ಸೇರಿದ ಅಭಿಷೇಕ್ ಶರ್ಮಾ ಐದನೇ ವಿಕೆಟ್‌ಗೆ 35 ರನ್ ಸೇರಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರು

ಡೆಲ್ಲಿ ಡೇರ್‌ ಡೆವಿಲ್ಸ್‌: 20 ಓವರ್‌ಗಳಲ್ಲಿ 4ಕ್ಕೆ 174 (ರಿಷಭ್‌ ಪಂತ್‌ 64, ವಿಜಯಶಂಕರ್‌ ಅಜೇಯ 43; ಕೃಣಾಲ್ ಪಾಂಡ್ಯ 11ಕ್ಕೆ1, ಜಸ್‌ಪ್ರೀತ್ ಬೂಮ್ರಾ 29ಕ್ಕೆ1, ಮಯಂಕ್‌ ಮಾರ್ಕಂಡೆ 21ಕ್ಕೆ1)

ಮುಂಬೈ ಇಂಡಿಯನ್ಸ್: 19.3 ಓವರ್‌ ಗಳಲ್ಲಿ 163ಕ್ಕೆ ಆಲೌಟ್‌ (ಎವಿನ್ ಲೂಯಿಸ್‌ 48, ಹಾರ್ದಿಕ್ ಪಾಂಡ್ಯ 27, ಬೆನ್‌ ಕಟಿಂಗ್‌ 37; ಸಂದೀಪ್ ಲಮಿಚಾನೆ 36ಕ್ಕೆ3, ಟ್ರೆಂಟ್ ಬೌಲ್ಟ್‌ 33ಕ್ಕೆ1, ಹರ್ಷಲ್ ಪಟೇಲ್‌ 28ಕ್ಕೆ3, ಅಮಿತ್ ಮಿಶ್ರಾ 19ಕ್ಕೆ3)

ಫಲಿತಾಂಶ: ಡೆಲ್ಲಿ ಡೇರ್ ಡೆವಿಲ್ಸ್‌ಗೆ 11 ರನ್‌ಗಳ ಜಯ; ಪಂದ್ಯಶ್ರೇಷ್ಠ: ಅಮಿತ್ ಮಿಶ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry