ಮಾವಿನ ದರ ಕುಸಿತ: ರೈತ ಕಂಗಾಲು

7
ನಿರಂತರ ಮಳೆಯ ಕಾಟ: ದಲ್ಲಾಳಿಗಳ ಪಾಲಾಗುತ್ತಿರುವ ಲಾಭ

ಮಾವಿನ ದರ ಕುಸಿತ: ರೈತ ಕಂಗಾಲು

Published:
Updated:
ಮಾವಿನ ದರ ಕುಸಿತ: ರೈತ ಕಂಗಾಲು

ರಾಮನಗರ: ಬೇಸಿಗೆ ಋತುವಿನ ಕಡೆಯ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಕುಸಿಯತೊಡಗಿದೆ. ಉತ್ತಮ ಗಳಿಕೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಇದರಿಂದ ನಿರಾಸೆಯಾಗುತ್ತಿದೆ.

ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳ ಪೈಕಿ ರಾಮನಗರವು ಎರಡನೇ ಸ್ಥಾನದಲ್ಲಿ ಇದ್ದು, ಇಲ್ಲಿನ ಎಪಿಎಂಸಿಗೆ ಸದ್ಯ ನಿತ್ಯ 4 ಸಾವಿರ ಕ್ವಿಂಟಲ್‌ನಷ್ಟು ಮಾವು ಆವಕವಾಗುತ್ತಿದೆ. ಇದರಲ್ಲಿ ಶೇ 70ರಷ್ಟು ಹಣ್ಣು ಬಾದಾಮಿ ತಳಿಯದ್ದಾಗಿದೆ.

ತಿಂಗಳ ಹಿಂದಷ್ಟೇ ಪ್ರತಿ ಕೆ.ಜಿ,ಗೆ ₹100–120ರ ಆಸುಪಾಸಿನಲ್ಲಿ ಬೆಲೆ ಕಂಡಿದ್ದ ಈ ತಳಿಯ ಮಾವು ಈಗ ₹ 20ಕ್ಕೆ ಇಳಿದುಹೋಗಿದೆ. ಇದರಿಂದಾಗಿ ಬೆಳೆಗಾರರು, ತೋಟಗಳನ್ನು ಗುತ್ತಿಗೆ ಪಡೆದ ವರ್ತಕರೂ ಕಂಗಾಲಾಗಿದ್ದಾರೆ. ಉಳಿದ ತಳಿಗಳ ಹಣ್ಣಿನ ಪಾಡು ಕೇಳುವಂತಿಲ್ಲ. ರಸಪುರಿ, ಸೇಂದೂರ, ತೋತಾಪುರಿ ಮೊದಲಾದ ತಳಿಗಳ ಹಣ್ಣುಗಳು ಪ್ರತಿ ಕೆ.ಜಿ.ಗೆ ₹15ರ ಒಳಗೇ ಇವೆ. ಇವುಗಳನ್ನು ಕೇಳುವವರೇ ಇಲ್ಲದಂತಾಗಿದೆ.

ರಾಜ್ಯದಲ್ಲಿ ಮೊದಲು ಮಾರುಕಟ್ಟೆಗೆ ಬರುವುದೇ ರಾಮನಗರ ಜಿಲ್ಲೆಯಲ್ಲಿನ ಮಾವು. ಇಲ್ಲಿನ ಉಷ್ಣಾಂಶ ಮತ್ತು ಹವಾಗುಣ ಅದಕ್ಕೆ ಕಾರಣ.

ಇಲ್ಲಿನ ಸುಮಾರು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಆದರೆ ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾದ ಪರಿಣಾಮ ಮರಗಳು ತಡವಾಗಿ ಹೂ ಬಿಟ್ಟು ಫಸಲೂ ತಡವಾಗಿ ಕೈಸೇರುತ್ತಿದೆ. ಕಳೆದ ಹದಿನೈದು ದಿನಗಳಿಂದ ಮಾವಿನ ಕೊಯ್ಲು ಚುರುಕು ಪಡೆದುಕೊಂಡಿದೆ.

ಈ ಬಾರಿ ರಾಜ್ಯದಾದ್ಯಂತ ಇಳಿ ಹಂಗಾಮು ಇದೆ. ರಾಜ್ಯದ ವಾರ್ಷಿಕ ಉತ್ಪನ್ನ ಸರಾಸರಿ 12 ಲಕ್ಷ ಟನ್‌ಗಳಷ್ಟಿದ್ದು, ಈ ವರ್ಷ ಅದು 10 ಲಕ್ಷ ಟನ್‌ಗೆ ಇಳಿಕೆ ಆಗಿರುವ ನಿರೀಕ್ಷೆ ಇದೆ.

‘ಮುಂಗಾರು ಪೂರ್ವ ಮಳೆಯು ಉತ್ತಮವಾಗಿದ್ದು, ಮಳೆ–ಗಾಳಿ ಜೋರಾಗಿರುವ ಕಾರಣ ಮಾವಿನ ಕಾಯಿ ಉದುರತೊಡಗಿದೆ. ಹೀಗಾಗಿ ರೈತರು ಕಾಯಿಗಳನ್ನೇ ಕಿತ್ತು ಮಾರುಕಟ್ಟೆಗೆ ತರುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ವರ್ತಕರು ಬೆಲೆ ಇಳಿಸತೊಡಗಿದ್ದಾರೆ’ ಎಂದು ರಾಮನಗರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದರಾಜು ಹೇಳುತ್ತಾರೆ.

‘ಸ್ಥಳೀಯವಾಗಿ ಕಾಯಿಗಳನ್ನು ಕೇಳುವವರೂ ಇಲ್ಲ. ವರ್ತಕರು ರೈತರಿಂದ ಕಡಿಮೆ ಬೆಲೆಗೆ ಕೊಂಡು ಹೊರ ರಾಜ್ಯಗಳ ಕಾರ್ಖಾನೆಗಳಿಗೆ ದುಬಾರಿ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ. ಕಾಯಿಗಳನ್ನೂ ಸೇರಿಸುವ ಕಾರಣ ಬೆಲೆ ಕಡಿಮೆ ಇದೆ. ಮತ್ತೊಂದೆಡೆ ರೈತರಿಂದ ಶೇ 10ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಬೆಳೆಗಾರರು ಭಾರಿ ನಷ್ಟ ಅನುಭವಿಸುವಂತಾಗಿದೆ’ ಎಂದು ಮಾವು ಬೆಳೆಗಾರ ಜೋಗಿ ಶಿವರಾಮಯ್ಯ ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಇಳಿಯದ ದರ

ಮಾವಿನ ಸಗಟು ಧಾರಣೆ ಕುಸಿದಿದ್ದರೂ ಹಣ್ಣುಗಳ ಚಿಲ್ಲರೆ ಮಾರಾಟ ದರ ಮಾತ್ರ ಸ್ಥಿರವಾಗಿಯೇ ಇದೆ. ಬಾದಾಮಿ ತಳಿಯ ಹಣ್ಣು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹90–100, ರಸಪುರಿ ₹80–90, ಸೇಂದೂರ ₹60–80 ಬೆಲೆ ಇದೆ. ಹೀಗಾಗಿ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ತಲುಪಿಲ್ಲ. ಇತ್ತ ರೈತರಿಗೂ ಅದರ ಲಾಭ ಸಿಗುತ್ತಿಲ್ಲ.

**

ಮಾವಿನ ಬೆಲೆಯು ಬೆಳೆಗಾರರು–ಗ್ರಾಹಕರಿಬ್ಬರಿಗೂ ಸಿಹಿಯಾಗಿಲ್ಲ. ನಿಜವಾದ ಲಾಭ ದಲ್ಲಾಳಿಗಳ ಕೈಸೇರುವುದರಿಂದ ರೈತರು ಹೆಚ್ಚು ನಷ್ಟ ಅನುಭವಿಸುವಂತಾಗಿದೆ.

ಜೋಗಿ ಶಿವರಾಮಯ್ಯ, ಮಾವು ಬೆಳೆಗಾರ, ರಾಮನಗರ

**

ವಾರದಿಂದ ಈಚೆಗೆ ಮಾವಿನ ಬೆಲೆ ತೀವ್ರ ಕುಸಿತ ಕಂಡಿದೆ. ಮಳೆಯ ಆತಂಕದಿಂದ ರೈತರು ಕಾಯಿಗಳನ್ನು ಕಿತ್ತು ಮಾರುಕಟ್ಟೆಗೆ ತರುತ್ತಿದ್ದು, ಧಾರಣೆ ಸಿಗುತ್ತಿಲ್ಲ.

ಸಿದ್ದರಾಜು, ರಾಮನಗರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry