ಗಾಂಜಾ ಮತ್ತಿನಲ್ಲಿ ಕೊಂದರು!

7

ಗಾಂಜಾ ಮತ್ತಿನಲ್ಲಿ ಕೊಂದರು!

Published:
Updated:

ಬೆಂಗಳೂರು: ಆಡುಗೋಡಿ ಸಮೀಪದ ರಾಜೇಂದ್ರನಗರ ಆರನೇ ಅಡ್ಡರಸ್ತೆಯಲ್ಲಿ ಶನಿವಾರ ರಾತ್ರಿ ಗಾಂಜಾ ಮತ್ತಿನಲ್ಲಿದ್ದ ಮೂವರು ಯುವಕರು, ವಿನಾ ಕಾರಣ ಜಗಳ ತೆಗೆದು ಜಾವೀದ್ (19) ಎಂಬಾತನನ್ನು ಹತ್ಯೆಗೈದಿದ್ದಾರೆ.

ಎಲ್‌.ಆರ್.ನಗರ ನಿವಾಸಿಯಾದ ಜಾವೀದ್, ನೀಲಸಂದ್ರದಲ್ಲಿ ಗ್ಯಾರೇಜ್ ಇಟ್ಟುಕೊಂಡಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಆಡುಗೋಡಿಯ ಮಸೀದಿಗೆ ತೆರಳಿದ್ದ ಆತ, ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದ.

ಈ ವೇಳೆ ಗಾಂಜಾ ಸೇದುತ್ತ ರಸ್ತೆ ಬದಿಕುಳಿತಿದ್ದ ಅಜಿತ್, ರಾಹುಲ್ ಹಾಗೂ ಅಜಿತ್ ರಾವ್ ಎಂಬುವರು ‘ಏಯ್ ಬಾರೋ ಇಲ್ಲಿ’ ಎಂದು ಕರೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟ ಜಾವಿದ್‌ನನ್ನು ಅಡ್ಡಗಟ್ಟಿದ ಆರೋಪಿಗಳು, ‘ಕರ್ದಿದ್ದು ಕೇಳಿಸ್ಲಿಲ್ವಾ. ನಮ್ ಮಾತಿಗೆ ಅಷ್ಟೂ ಬೆಲೆ ಇಲ್ವಾ’ ಎನ್ನುತ್ತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

‘ಪರಿಚಯನೇ ಇಲ್ಲ ಅಂದ್ಮೇಲೆ, ನಿಮ್ ಹತ್ರ ನಾನ್ಯಾಕ್ ಮಾತಾಡ್ಬೇಕು’ ಎಂದು ಹೇಳಿ ಜಾವೀದ್ ಮುಂದೆ ಸಾಗಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು, ಚಾಕುವಿನಿಂದ ಹೊಟ್ಟೆ ಹಾಗೂ ತೊಡೆಗೆ ಇರಿದು ಪರಾರಿಯಾಗಿದ್ದರು. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದ ಜಾವೀದ್, ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳೀಯರು ನೀಡಿದ ಹೇಳಿಕೆ ಆಧರಿಸಿ ಶುಕ್ರವಾರ ಬೆಳಿಗ್ಗೆ ಆರೋಪಿಗಳನ್ನು ವಶಕ್ಕೆ ಪಡೆದೆವು. ‘ಕೊಲ್ಲುವ ಉದ್ದೇಶ ಇರಲಿಲ್ಲ. ಅಷ್ಟಕ್ಕೂ ಆತ ಯಾರೆಂಬುದೇ ನಮಗೆ ಗೊತ್ತಿಲ್ಲ. ಗಾಂಜಾ ಮತ್ತಿನಲ್ಲಿ ನಮ್ಮಿಂದ ಅನಾಹುತವಾಗಿದೆ’ ಎಂದು ಅವರು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry