6

ಪಕ್ಷಾಂತರ ನಿಷೇಧ: ಪಕ್ಷಗಳು ಮಾಡಿದ್ದೆಲ್ಲ ಸರಿಯೇ?

Published:
Updated:

1985ರ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿ ಜಯ ದಾಖಲಿಸಿದ ತಕ್ಷಣ ರಾಜೀವ್ ಗಾಂಧಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವಂತೆ ಮಾಡಿದರು. ಈ ಕಾಯ್ದೆಯ ಆಶಯ ಹೀಗಿದೆ: ‘ಪಕ್ಷದ ನಿರ್ದೇಶನವನ್ನು ಮತದಾನದ ವೇಳೆ ಉಲ್ಲಂಘಿಸುವ ಶಾಸಕ (ಅಥವಾ ಸಂಸದ) ಪಕ್ಷಾಂತರಿ ಎಂದು ಪರಿಗಣಿತನಾಗುತ್ತಾನೆ. ಆತ ಅನರ್ಹ ಆಗುತ್ತಾನೆ'.

ಅಂದರೆ, ಪಕ್ಷ ತನ್ನ ಸದಸ್ಯರಿಗೆ ಒಮ್ಮೆ ವಿಪ್‌ (ಮತದಾನದ ಸಮಯದಲ್ಲಿ ಹಾಜರಿರಬೇಕು ಎಂಬ ಸೂಚನೆ ಇರುವ ಲಿಖಿತ ನೋಟಿಸ್) ಜಾರಿಗೊಳಿಸಿದ ನಂತರ ಅವರು ತಮಗೆ ಇಷ್ಟಬಂದಂತೆ ಮತ ಚಲಾಯಿಸುವಂತೆ ಇಲ್ಲ; ಅವರು ಪಕ್ಷದ ಸೂಚನೆಗೆ ಅನುಸಾರವಾಗಿಯೇ ಮತ ಚಲಾಯಿಸಬೇಕು. ಶಾಸಕ ಮತದಾನದಿಂದ ದೂರ ಉಳಿದರೂ ಆತನನ್ನು ಅನರ್ಹಗೊಳಿಸಬಹುದು. ಇಲ್ಲಿ ಮತದಾನ ಅಂದರೆ, ಒಂದು ಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸುವ ವಿಶ್ವಾಸಮತಕ್ಕೆ ಸಂಬಂಧಿಸಿದ್ದೇ ಆಗಬೇಕಿಲ್ಲ. ಪಕ್ಷ ತೀರ್ಮಾನಿಸಿದರೆ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾವುದೇ ಮತದಾನಕ್ಕಾದರೂ ಅನ್ವಯ ಮಾಡಬಹುದು.

ಕನಿಷ್ಠ ಮೂರನೆಯ ಒಂದರಷ್ಟು ಶಾಸಕರು ತಮ್ಮ ಪಕ್ಷದ ಸೂಚನೆ ಉಲ್ಲಂಘಿಸಿದ್ದರೆ, ಆಗ ಅವರ ವಿರುದ್ಧ ಈ ಕಾಯ್ದೆ ಅನ್ವಯ ಆಗುತ್ತಿರಲಿಲ್ಲ. ಆದರೆ, 2004ರಲ್ಲಿ ಈ ಅಂಶವನ್ನು ತೆಗೆಯಲಾಯಿತು. 'ಮೂರನೆಯ ಒಂದರಷ್ಟು' ಎನ್ನುವ ನಿಯಮವು 'ಸಾಮೂಹಿಕ ಪಕ್ಷಾಂತರ'ಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬುದು ಈ ಅಂಶವನ್ನು ತೆಗೆದಿದ್ದರ ಹಿಂದಣ ತರ್ಕವಾಗಿತ್ತು. 2007ರಲ್ಲಿ ವಿಚಾರಣೆ ನಡೆಸಿದ ಒಂದು ಪ್ರಕರಣದಲ್ಲಿ (ಬಹುಜನ ಸಮಾಜ ಪಕ್ಷಕ್ಕೆ ಸಂಬಂಧಿಸಿದ 'ರಾಜೇಂದ್ರ ಸಿಂಗ್ ರಾಣಾ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ನಡುವಣ ಪ್ರಕರಣ') ಸುಪ್ರೀಂ ಕೋರ್ಟ್, 'ಎದುರಾಳಿ ಪಕ್ಷವನ್ನು ಬೆಂಬಲಿಸಿ ಒಂದು ಪತ್ರಕ್ಕೆ ಸಹಿ ಮಾಡಿ ರಾಜ್ಯಪಾಲರಿಗೆ ಸಲ್ಲಿಸುವುದು ಕೂಡ ಪಕ್ಷಾಂತರಕ್ಕೆ ಸಮ' ಎಂದು ಹೇಳಿತು. ಕರ್ನಾಟಕ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದ್ದರು ಎನ್ನಲಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಹೆಸರುಗಳನ್ನು ಬಿಜೆಪಿ ಉಲ್ಲೇಖಿಸದಿದ್ದುದಕ್ಕೆ ಇದೂ ಒಂದು ಕಾರಣ.

ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದ ಪತ್ರದಲ್ಲಿ ಅವರ ಹೆಸರುಗಳನ್ನೂ ಸೇರಿಸಿದ್ದಿದ್ದರೆ, ಆ ಶಾಸಕರ ಪಾಲಿಗೆ ಅದು ಮರಣಶಾಸನದಂತೆ ಆಗುತ್ತಿತ್ತು. ಕರ್ನಾಟಕದ ಬಿಜೆಪಿ ಪರವಾಗಿ ವಾದ ಮಂಡಿಸಿದ ಕೇಂದ್ರ ಸರ್ಕಾರವು ಕರ್ನಾಟಕದ ಶಾಸಕರು ಪ್ರಮಾಣವಚನ ಸ್ವೀಕರಿಸಿಲ್ಲವಾದ ಕಾರಣ ಪಕ್ಷಾಂತರ ನಿಷೇಧ ಕಾಯ್ದೆಯು ಅವರಿಗೆ ಅನ್ವಯ ಆಗದು ಎಂದು ಹೇಳಿತ್ತು. ಇದಕ್ಕೆ ಉತ್ತರವಾಗಿ ಸುಪ್ರೀಂ ಕೋರ್ಟ್‌, 'ಈ ವಾದವು ತರ್ಕರಹಿತವಾದದ್ದು. ಇದು ಶಾಸಕರ ಖರೀದಿಗೆ ಮುಕ್ತ ಆಹ್ವಾನ ನೀಡಿದಂತೆ ಆಗುತ್ತದೆ' ಎಂದು ಹೇಳಿತ್ತು. ಶಾಸಕಾಂಗದ ಅಧಿಕಾರವ್ಯಾಪ್ತಿಯ ವಿಚಾರಗಳಲ್ಲಿ ತನ್ನ ತೀರ್ಮಾನಗಳನ್ನು ಹೇರಲು ನ್ಯಾಯಾಂಗಕ್ಕೆ ಈ ಕಾಯ್ದೆಯ ಕಾರಣದಿಂದಾಗಿ ಈಚಿನ ವರ್ಷಗಳಲ್ಲಿ ಸಾಧ್ಯವಾಗಿದೆ. ಹೀಗೆ ಮಾಡುವುದು ಅಗತ್ಯ ಎಂದು ಕೆಲವರು ಹೇಳಬಹುದು. ಆದರೆ, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಆರೋಗ್ಯಕರ ಅಲ್ಲ.

ನೂರಕ್ಕೂ ಹೆಚ್ಚು ಶಾಸಕರನ್ನು, ಎರಡು ಡಜನ್‌ಗೂ ಹೆಚ್ಚು ಸಂಸದರನ್ನು ಈ ಕಾಯ್ದೆ ಬಳಸಿ ಅನರ್ಹಗೊಳಿಸಲಾಗಿದೆ. ಶಾಸಕರು ತಮ್ಮ ಪಕ್ಷ ನೀಡುವ ವಿಪ್ ಉಲ್ಲಂಘಿಸುವ ಸಮಸ್ಯೆಯು ಜಗತ್ತಿನ ಇತರ ಮಹಾನ್ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಕೂಡ ಇದೆ. ಆದರೆ, ಈ ಸಮಸ್ಯೆಗೆ ಅವರು ಕಂಡುಕೊಂಡಿರುವ ಪರಿಹಾರವು ನಮ್ಮಲ್ಲಿಯಷ್ಟು ತೀವ್ರತರವಾದುದಲ್ಲ. ಬ್ರಿಟನ್ನಿನಲ್ಲಿ ಪಕ್ಷ ನೀಡುವ ಪ್ರಮುಖ ವಿಪ್‌ (ಇದರ ಅಡಿಯಲ್ಲಿ ಮೂರು ಗೆರೆ ಎಳೆದು ಇದು ಪ್ರಮುಖ ಎಂದು ಸೂಚಿಸಲಾಗುತ್ತದೆ) ಉಲ್ಲಂಘಿಸುವ ಸಂಸದನನ್ನು ಪಕ್ಷದಿಂದ ಉಚ್ಚಾಟಿಸಬಹುದು. ಆದರೆ ಆ ಸಂಸದ ತನ್ನ ಕ್ಷೇತ್ರದ ಪ್ರತಿನಿಧಿಯಾಗಿ ಮುಂದುವರಿಯುತ್ತಾನೆ. ಭಾರತದಲ್ಲಿ ಅನರ್ಹಗೊಳ್ಳುವ ಶಾಸಕ, ಸಂಸದ ತನ್ನ ಸ್ಥಾನವನ್ನೂ ಕಳೆದುಕೊಳ್ಳುತ್ತಾನೆ, ಪಕ್ಷದಿಂದಲೂ ಹೊರಹಾಕಿಸಿಕೊಳ್ಳುತ್ತಾನೆ. ಆಸ್ಟ್ರೇಲಿಯಾದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದರೆ, ಪಕ್ಷ ಒದಗಿಸುವ ಕೆಲವು ಸಂಪನ್ಮೂಲಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಮೆರಿಕದಲ್ಲಿ ಸದಸ್ಯರನ್ನು ಪಕ್ಷದಿಂದ ಹೊರಹಾಕಲು ಬರುವುದಿಲ್ಲ. ಹಾಗಾಗಿ, ಇಂತಹ ಶಿಕ್ಷೆಗಳ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ. ಪಕ್ಷದ ಸೂಚನೆ ಉಲ್ಲಂಘಿಸಿ ಮತ ಚಲಾಯಿಸಿದ್ದಕ್ಕೆ ತೀರಾ ಕಠಿಣ ಶಿಕ್ಷೆ ಎದುರಿಸಬೇಕಾಗಿರುವುದು ಪ್ರಮುಖ ಪ್ರಜಾತಂತ್ರ ವ್ಯವಸ್ಥೆಗಳ ಪೈಕಿ ಭಾರತದಲ್ಲಿ ಮಾತ್ರ.

ಈ ಕಾಯ್ದೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಇತರ ಯಾವುದೇ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಇಲ್ಲ ಎಂದು ಸುಪ್ರೀಂ ಕೋರ್ಟ್‌  (ಕಿಹೊಟೊ ಹೊಲ್ಲೊಹಾನ್ ಮತ್ತು ಝಚಿಲ್ಹು ನಡುವಣ ಪ್ರಕರಣದಲ್ಲಿ)1992ರಲ್ಲಿ ಹೇಳಿತು. 'ರಾಜಕೀಯ ಮತ್ತು ವೈಯಕ್ತಿಕ ನಡವಳಿಕೆಗಳಲ್ಲಿ ಕಾಯ್ದುಕೊಳ್ಳಬೇಕಾದ ಶಿಸ್ತಿನ ವಾಸ್ತವಿಕ ಅಗತ್ಯವು ಕೆಲವು ಕಲ್ಪಿತ ಸಿದ್ಧಾಂತಗಳಿಗಿಂತ ಮೇಲು ಎಂಬುದು ಈ ಕಾಯ್ದೆ ಹೇಳುವ ಮಾತು' ಎಂದು ಕೋರ್ಟ್‌ ಹೇಳಿತು.

ಈ ಮಾತನ್ನು ಒಪ್ಪಬೇಕಾಗಿಲ್ಲ. ಆದರೆ, ಒಂದು ವೇಳೆ ಇದನ್ನು ಒಪ್ಪಿಕೊಂಡರೂ ಇತರ ಕೆಲವು ಗಂಭೀರ ಪ್ರಶ್ನೆಗಳು ಹಾಗೇ ಉಳಿದುಕೊಳ್ಳುತ್ತವೆ. ಒಂದು ಪಕ್ಷವು ಚುನಾವಣೆಯ ನಂತರ ಇನ್ನೊಂದು ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ ಏನಾಗುತ್ತದೆ, ಮೈತ್ರಿ ಮಾಡಿಕೊಂಡ ಪಕ್ಷದ ಸಿದ್ಧಾಂತವು ಶಾಸಕರಿಗೆ ಒಪ್ಪಿತವಾಗುವಂತೆ ಇಲ್ಲದಿದ್ದರೆ ಏನಾಗುತ್ತದೆ? ತನ್ನ ಪಕ್ಷದ ನಾಯಕರು ಇಂಥದ್ದೊಂದು ತೀರ್ಮಾನ ಕೈಗೊಂಡಿದ್ದಾರೆ ಎಂದಮಾತ್ರಕ್ಕೆ ಶಾಸಕ ತನಗೆ ಮತ ಹಾಕಿದವರ ಇಚ್ಛೆಗೆ ವಿರುದ್ಧವಾಗಿ ನಡೆಯಬೇಕೇ? ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ಈ ಪ್ರಶ್ನೆಯನ್ನು ಪಕ್ಷಾಂತರ ನಿಷೇಧ ಕಾಯ್ದೆಯು ನಿರ್ಲಕ್ಷಿಸಿದೆ.

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅದನ್ನು ತಂದ ಸಂದರ್ಭದಲ್ಲಿ ಸಮರ್ಥಿಸಿಕೊಳ್ಳಲಾಯಿತು. ಆವಾಗ ಬಹಳಷ್ಟು ಶಾಸಕರು ಸಚಿವ ಸ್ಥಾನ, ಹಣದ ಆಮಿಷಕ್ಕೆ ಒಳಗಾಗಿ ತಮ್ಮ ಪಕ್ಷ ಬದಲಾಯಿಸಿದ್ದರು. 60ರ ದಶಕದ ಕೊನೆಯ ಭಾಗದಲ್ಲಿ ಹರಿಯಾಣದ ಕಾಂಗ್ರೆಸ್ ಶಾಸಕ ಗಯಾ ಲಾಲ್ ಎನ್ನುವವರು ಕೆಲವೇ ದಿನಗಳ ಅವಧಿಯಲ್ಲಿ ಮೂರು ಬಾರಿ ಪಕ್ಷ ಬದಲಾಯಿಸಿದ್ದರು. ಹೀಗೆ ಮಾಡಿದ್ದು 'ಆಯಾ ರಾಮ್, ಗಯಾ ರಾಮ್' ಎನ್ನುವ ನುಡಿಗಟ್ಟಿನ ಬಳಕೆಗೆ ಕಾರಣವಾಯಿತು. ಯಾವ ಪಕ್ಷಕ್ಕೂ ನಿಷ್ಠೆ ತೋರದೆ, ತಮ್ಮ ಹಿತಾಸಕ್ತಿಗಳಿಗಾಗಿ ಮಾತ್ರ ರಾಜಕಾರಣದಲ್ಲಿ ಇರುವವರ ಬಗ್ಗೆ ಮಾತನಾಡುವಾಗ ಈ ನುಡಿಗಟ್ಟು ಬಳಕೆಯಾಯಿತು.

ಇಂತಹ ಪಕ್ಷಾಂತರಗಳನ್ನು ತಡೆಯುವುದು ಈ ಕಾಯ್ದೆಯ ಉದ್ದೇಶ ಆಗಿತ್ತು. ಕಾಯ್ದೆಯು ತನ್ನ ಉದ್ದೇಶವನ್ನು ಬಹುಮಟ್ಟಿಗೆ ಈಡೇರಿಸಿದೆ. ಆದರೆ ಈ ಕಾಯ್ದೆಯು ಒಂದು ನೈತಿಕ ಸಮಸ್ಯೆಗೆ ಕಂಡುಕೊಂಡ ವಿಶಾಲ ಹರವಿನ ಪರಿಹಾರ ಆಗಿತ್ತು. ತಾನು ಗೆದ್ದುಬಂದ ಪಕ್ಷದ ವಿರುದ್ಧವಾಗಿ ಶಾಸಕನೊಬ್ಬ ನಡೆದುಕೊಂಡರೆ ಅವನನ್ನು ಶಿಕ್ಷಿಸುವ ಹೊಣೆ ಮತದಾರನದ್ದೇ ವಿನಾ ಪಕ್ಷದ್ದಲ್ಲ.

ಚುನಾಯಿತ ಪ್ರತಿನಿಧಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವ ಅವಕಾಶವನ್ನು ಪಕ್ಷಾಂತರ ನಿಷೇಧ ಕಾಯ್ದೆಯು ಇಲ್ಲವಾಗಿಸಿತು. ಇದು ಪ್ರಜಾತಂತ್ರ ಹಾಗೂ ಸಂವಿಧಾನಕ್ಕೆ ವಿರುದ್ಧ. ಈ ಕಾಯ್ದೆಯು ಶಾಸಕರ ಸಾಮರ್ಥ್ಯ ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಂಡಿತು. ಈ ಕಾಯ್ದೆಯು ಪ್ರಜೆಗಳನ್ನು ಎರಡು ವಿಚಾರಗಳಲ್ಲಿ ಆಘಾತಕ್ಕೆ ನೂಕಿತು. ಒಂದನೆಯದು, ಶಾಸಕನೊಬ್ಬ ತನ್ನ ಪಕ್ಷಕ್ಕಿಂತಲೂ ತನ್ನ ಕ್ಷೇತ್ರದ ಮತದಾರರ ಬಗ್ಗೆ ಹೊಂದಿರಬೇಕಾದ ನಿಷ್ಠೆ. ಎರಡನೆಯದು, ಪಕ್ಷ ಯಾವತ್ತಿಗೂ ಸರಿಯಾದ ಹೆಜ್ಜೆಯನ್ನೇ ಇಡುತ್ತದೆ ಎನ್ನುವ ತಪ್ಪು ನಂಬಿಕೆ. ಯಾವ ಪಕ್ಷವೂ ದೋಷರಹಿತವಲ್ಲ, ಪಕ್ಷಗಳ ನಾಯಕತ್ವ ಕೂಡ ತಪ್ಪು ಮಾಡುತ್ತದೆ ಎಂಬುದನ್ನು ಭಾರತದ ಇತಿಹಾಸ ಹೇಳುತ್ತದೆ. ಆದರೆ, ಪಕ್ಷಾಂತರ ನಿಷೇಧ ಕಾಯ್ದೆಯು ಪಕ್ಷಗಳು ಮಾಡುವ ತಪ್ಪುಗಳನ್ನು ಗಟ್ಟಿ ದನಿಯಲ್ಲಿ ವಿರೋಧಿಸಲು ಸಾಧ್ಯವಾಗದಂತೆ ಮಾಡುತ್ತದೆ.

ಪ್ರಜಾತಂತ್ರದಲ್ಲಿ ನಮ್ಮ ದನಿ ಅತ್ಯಂತ ಗಟ್ಟಿಯಾಗಿ ಕೇಳಿಸಬಲ್ಲ ಮತ್ತು ಅತ್ಯಂತ ಶಕ್ತಿಯುತವಾಗಿ ಕೇಳಿಸಬಲ್ಲ ವೇದಿಕೆ ಸಂಸತ್ತು ಮಾತ್ರ. ಆದರೆ, ಸಂಸತ್ತಿನಲ್ಲಿ ವ್ಯಕ್ತಪಡಿಸಬಹುದಾದ ಎಲ್ಲ ಬಗೆಯ ಆಂತರಿಕ ಭಿನ್ನಮತಗಳನ್ನು ಪಕ್ಷಾಂತರ ನಿಷೇಧ ಕಾಯ್ದೆಯು ಹತ್ತಿಕ್ಕಿದೆ. ಕರ್ನಾಟಕದಲ್ಲಿ ನಾವು ಯಾವುದೇ ರಾಜಕೀಯ ಗುಂಪಿನ ಪರ ನಿಂತಿರಬಹುದು. ಆದರೆ, ಈ ಕಾಯ್ದೆಯು ತಂದುಕೊಟ್ಟಿರುವ ಪ್ರಯೋಜನಗಳನ್ನು ಒಪ್ಪಿಕೊಳ್ಳುತ್ತಲೇ, ಕಾಯ್ದೆಯಿಂದ ಆಗಿರುವ ತೊಂದರೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕು.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry