ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಪ್ರಜ್ಞೆ ಮತ್ತು ಪ್ರಜಾತಂತ್ರ

Last Updated 20 ಮೇ 2018, 19:31 IST
ಅಕ್ಷರ ಗಾತ್ರ

ಈ ದೇಶದೊಳಗೆ ಜಾತಿಪ್ರಜ್ಞೆಯೆಂಬುದು ಎಲ್ಲ ಪ್ರಗತಿಗಳ ಮೂಲ ತೊಡಕು. ಶಿಕ್ಷಣದಿಂದ ಈ ರೋಗವನ್ನು ನಿವಾರಣೆ ಮಾಡುತ್ತೇವೆನ್ನುವುದೂ ಭ್ರಮೆಯಾಗುತ್ತಿದೆ. ಬದಲಾಗಿ ಅದರ ಸ್ವರೂಪ ಅಮೂರ್ತರೂಪದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಮೂರ್ತರೂಪದ ಜಾತಿಪ್ರಜ್ಞೆಗೆ ನೇರ ನಿಲುವಿನ ನಡೆನುಡಿ ಇದ್ದರೆ ಅಮೂರ್ತರೂಪದ ಜಾತಿಪ್ರಜ್ಞೆಗೆ ಆಕಾರವಿಲ್ಲ, ನಡೆನುಡಿ ಇಲ್ಲ. ಇದ್ದರೂ ಅದು ಅರ್ಥಕ್ಕೆ ಸಿಗದ, ನಿಲುವಿಗೆ ಕಾಣಿಸದ ಅಪಾಯಕಾರಿ ವರ್ತನೆಯದು. ಅನಕ್ಷರಸ್ಥರ ಜಾತಿಭೇದ ಮೂರ್ತರೂಪದ್ದಾದರೆ ಅಕ್ಷರಸ್ಥರ ಜಾತಿಭೇದ ಅಮೂರ್ತ ಸ್ವರೂಪದ್ದು. ಮೂರ್ತರೂಪ ಅಸಮಾನತೆಯನ್ನು ಭಿನ್ನಭೇದವನ್ನು ಅಸಹಿಷ್ಣುತೆಯನ್ನು ನೇರನೇರವಾಗಿ, ಒರಟಾಗಿ, ಕ್ರೂರವಾಗಿ ಅನುಭವಕ್ಕೆ ಉಣ್ಣಿಸುತ್ತದೆ. ಆದರೆ ಅಕ್ಷರಸ್ಥರ ಜಾತಿಭೇದ ನೀತಿ ಜಾತ್ಯತೀತ ನೆಲೆಯ ಹಲವು ಬಗೆಯ ಎಡಸಿದ್ಧಾಂತಗಳ ಮುಖವಾಡ ತೊಟ್ಟು ಅದು ತನ್ನ ಮೂಲಭೂತ ಪ್ರಜ್ಞೆಯನ್ನು ಮರೆಮಾಚುತ್ತದೆ. ಅದು ಈ ಮುಖೇನ ನಂಬಿಸಿ ಕತ್ತುಕೊಯ್ಯುವ ಬೆನ್ನಿಗೆ ಚೂರಿಹಾಕುವ ಕುಯುಕ್ತಿಯದು.

ಮೊದಲನೆಯದು ಎದುರೆದುರೇ ಮುಖಾಮುಖಿಯಾಗಿ ರಾಚಿದರೆ ಎರಡನೆಯದು ಅರಿವಿಗೆ ಬರುವಷ್ಟರಲ್ಲಿ ಅಪಾಯದ ಪ್ರಪಾತಕ್ಕೆ ತಳ್ಳಿರುತ್ತದೆ. ನಂಬಿಕೆಯನ್ನೇ ಬುಡಮೇಲು ಮಾಡಿಬಿಟ್ಟಿರುತ್ತದೆ; ಅಪನಂಬಿಕೆಯ ವಾತಾವರಣದಲ್ಲಿ ವ್ಯಕ್ತಿತ್ವಗಳನ್ನು ಕುಬ್ಜತೆಗೆ ತಳ್ಳುವ ವಿಷಕಾರಿಯಾಗುತ್ತದೆ. ಇಂಥ ಬೆಳವಣಿಗೆ ಪ್ರಜಾಪ್ರಭುತ್ವದಲ್ಲಿ ಒಳ್ಳೆಯದಲ್ಲ; ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ನಾಶಮಾಡುವ ವಂಚನೆಯಲ್ಲಿ ಸಂಚು ಹೆಣೆಯುವ ಅವಕಾಶವಾದಿ ತಂತ್ರಗಾರಿಕೆಯ ವಿನಾಶಕಾರಿ ಪ್ರವೃತ್ತಿಯದಾಗಿರುತ್ತದೆ. ಜಾತ್ಯತೀತವಾಗಿ ಸಮಾಜವಾದಿ ಚಿಂತನೆಯ ಆಶಯದಲ್ಲಿ ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಸಂವಿಧಾನವನ್ನು ಸಂರಕ್ಷಿಸುವ ಹೊಣೆಗಾರಿಕೆಯಲ್ಲಿ ಆಡಳಿತ ನಡೆಸಿದ ವ್ಯಕ್ತಿತ್ವ ಸಂಪನ್ನರು ಕೂಡ ಇಂಥ ಅಕ್ಷರಸ್ಥ ಜಾತಿಪ್ರಜ್ಞೆಗಳ ಕುಯುಕ್ತಿಗೆ ಬಲಿಹೋಗುವ ಅಪಾಯ ಹೆಚ್ಚಾಗಿರುತ್ತದೆ.

ಅಮೂರ್ತ ಜಾತಿಪ್ರಜ್ಞೆಯೆಂಬುದು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಚಾರಗಳನ್ನು ಎದುರಿಸುವ ಹೋರಾಟ ಮಾಡುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಜಾತಿಸ್ವಾರ್ಥದ ವಿಷದ ಸಂಚನ್ನು ವ್ಯಕ್ತಿ ಶಕ್ತಿಯ ಅರಿವಿಗೆ ಬರದಂತೆ ಬಲವಾಗಿ ಹೆಣೆದಿರುತ್ತದೆ. ಸಮಾಜವಾದಿ ಚಿಂತನೆಯ ವ್ಯಕ್ತಿ ಶ್ರೀಸಾಮಾನ್ಯನಿಗೆ ಮಾಡಿದ ಅನುಕೂಲತೆಗಳ ಅಗತ್ಯ ಸೌಕರ್ಯಗಳ ಉಪಕಾರಸ್ಮರಣೆಯನ್ನೂ ಕನಿಷ್ಠ ಕೃತಜ್ಞತೆಯ ನೆನಪಿನಲ್ಲಿ ಉಳಿಸದ ರೀತಿಯಲ್ಲಿ ಜನಮನಸ್ಸು ಆ ವ್ಯಕ್ತಿತ್ವಕ್ಕೆ ದ್ರೋಹಬಗೆಯುವಂತೆ ಜಾತಿಪ್ರಜ್ಞೆಯ ಸಮೂಹಸನ್ನಿಯನ್ನು ಎತ್ತಿಕಟ್ಟಿರುತ್ತದೆ. ಹಸಿವು ಶಿಕ್ಷಣ ಉದ್ಯೋಗಗಳ ಅನುಕೂಲದ ಉಪಕೃತಭಾವ ಎಚ್ಚೇಳದ ರೀತಿಯಲ್ಲಿ ಜಾತಿಗರ್ವವನ್ನು ಸಂಘಟಿಸುತ್ತದೆ. ವ್ಯಕ್ತಿಯ ಸೋಲಿಗೆ ಹವಣಿಸುತ್ತದೆ.

ಹೀಗಾಗಿ ಜಾತಿಪ್ರಜ್ಞೆಯೆಂಬ ಸಮೂಹಸನ್ನಿಯ ಹಿಡಿತದಲ್ಲಿ ಮಾನವೀಯತೆ ಉಪಕೃತತೆ ಔದಾರ್ಯ ಸಹಿಷ್ಣುತೆ ಇತ್ಯಾದಿ ಮನುಷ್ಯ ಸಂಬಂಧಗಳನ್ನು ಆರ್ದ್ರಗೊಳಿಸುವ ಗುಣಾಂಶಗಳೆಲ್ಲ ಸೊನ್ನೆಯಾಗುತ್ತವೆ. ಜಾತಿಯೇ ಮೇಲುಗೈ ಸಾಧಿಸಿ ಜಾತಿದ್ವೇಷವನ್ನು ಬಿತ್ತಿ ಬೆಳೆದ ಅಪಾಯದಲ್ಲಿ ಪ್ರಜಾಪ್ರಭುತ್ವ ನರಳುತ್ತದೆ. ಕೊಡಲಿಯ ಕಾವು ಮರಕ್ಕೆ ಮೃತ್ಯು ಎಂಬಂತೆ ಜನಸಾಮಾನ್ಯರು ಆನಂತರದ ದಿನಗಳಲ್ಲಿ ಬರಿದೆ ಪಶ್ಚಾತ್ತಾಪದಲ್ಲಿ ಬಳಲುತ್ತಾರೆ.
ಮೈಗೆ ಕಾಹ ಹೇಳುವರಲ್ಲದೆ ಮನಕ್ಕೆ ಕಾಹ ಹೇಳುವರೆ?
ಅಣಕದ ಮಿಂಡನ ಹೊಸಪರಿಯ ನೋಡಾ
ಕೂಡಲಸಂಗಮ ದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು

ಚಿತ್ರವ ಬರೆವ ಲೆಕ್ಕಣಿಕೆಯ ಕಟ್ಟಿಗೆಯಂತೆ
ನೋಡಿದಡೆ ರೋಮ ಹಲವಾಗಿ
ಕೂಡಿಹ ದಾರಿ ಒಂದೇ ಆಗಿ ತೋರುವಲು
ತನ್ನಿಚ್ಛೆಗೆ ಪ್ರಕೃತಿ ಹಲವಾಗಿ ವಸ್ತುವ ಮುಟ್ಟುವಲ್ಲಿ
ಏಕಚಿತ್ತವಾಗಿರಬೇಕೆಂದನಂಬಿಗ ಚೌಡಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT