ಅರುಣಾಚಲ ಗಡಿಯಲ್ಲಿ ಚೀನಾ ಗಣಿಗಾರಿಕೆ

7
ಲ್ಹುಂಝೆ ಪ್ರದೇಶದಲ್ಲಿ ಚಿನ್ನ, ಬೆಳ್ಳಿ ನಿಕ್ಷೇಪ ಪತ್ತೆ

ಅರುಣಾಚಲ ಗಡಿಯಲ್ಲಿ ಚೀನಾ ಗಣಿಗಾರಿಕೆ

Published:
Updated:
ಅರುಣಾಚಲ ಗಡಿಯಲ್ಲಿ ಚೀನಾ ಗಣಿಗಾರಿಕೆ

ಬೀಜಿಂಗ್‌: ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಚಿನ್ನ, ಬೆಳ್ಳಿ ಹಾಗೂ ಇತರ ಅಮೂಲ್ಯ ಲೋಹಗಳ ನಿಕ್ಷೇಪ ಪತ್ತೆ ಹಚ್ಚಿರುವ ಚೀನಾ, ಗಣಿಗಾರಿಕೆಗೆ ಚಾಲನೆ ನೀಡಿದೆ.

ಲ್ಹುಂಝೆ ಎಂಬ ಪ್ರದೇಶ ಸದ್ಯ ಚೀನಾದ ನಿಯಂತ್ರಣದಲ್ಲಿದೆ. ಅರುಣಾಚಲ ಪ್ರದೇಶ ತನ್ನ ವಶದಲ್ಲಿರುವ ದಕ್ಷಿಣ ಟಿಬೆಟ್‌ನ ಒಂದು ಭಾಗ ಎಂದು ಚೀನಾ ಹೇಳುತ್ತಿದೆ. ಇಲ್ಲಿ ಲಭ್ಯವಾಗಲಿರುವ ಲೋಹಗಳ ಮೌಲ್ಯ ₹ 4 ಲಕ್ಷ ಕೋಟಿ (6000 ಕೋಟಿ ಡಾಲರ್‌) ಎಂದು ಅಂದಾಜಿಸಲಾಗಿದೆ ಎಂದು ಹಾಂಗ್‌ಕಾಂಗ್‌ ಮೂಲದ ‘ಸೌತ್‌ ಮಾರ್ನಿಂಗ್‌ ಚೀನಾ ಪೋಸ್ಟ್‌’ ನಿಯತಕಾಲಿಕ ವರದಿ ಮಾಡಿದೆ.

ಚೀನಾದ ಈ ಕ್ರಮ ಭಾರತದೊಂದಿಗೆ ಮತ್ತೊಂದು ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಲ್ಹುಂಝೆ ಪ್ರದೇಶ ಪರ್ವತ, ದಟ್ಟ ಅರಣ್ಯಗಳಿಂದ ಆವೃತವಾಗಿರುವುದರಿಂದ ಸಂಪರ್ಕ ಕಷ್ವವಾಗಿತ್ತು. ಆದರೆ, ಅಪಾರ ಪ್ರಮಾಣದ ನಿಕ್ಷೇಪ ಪತ್ತೆಯಾದ ಕಾರಣ ಈ ಪ್ರದೇಶಕ್ಕೆ ರಸ್ತೆ ಹಾಗೂ ಇತರ ಮೂಲಸೌಕರ್ಯ ಒದಗಿಸಲು ಚೀನಾ ಸರ್ಕಾರ ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದೆ ಎಂದೂ ನಿಯತಕಾಲಿಕ ವರದಿ ಮಾಡಿದೆ.

ಅದಿರು ಸಾಗಣೆಗೆ ಅನುಕೂಲವಾಗುವಂತೆ ಸುರಂಗ ಮಾರ್ಗ ನಿರ್ಮಾಣ, ಸಂವಹನ ಸೌಲಭ್ಯ ಒದಗಿಸಿರುವ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿದೆ. ಭಾರಿ ಸಂಖ್ಯೆಯಲ್ಲಿ ಜನರೂ ಈ ಪ್ರದೇಶದತ್ತ ಬರುತ್ತಿದ್ದಾರೆ. ಕೆಲವರು ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದರೆ, ಇನ್ನೂ ಕೆಲವರು ಹೋಟೆಲ್‌ ಹಾಗೂ ಇತರ ವ್ಯವಹಾರ ಆರಂಭಿಸಿದ್ದಾರೆ.

‘ಗಣಿಗಾರಿಕೆ ಹಾಗೂ ಇತರ ಪೂರಕ ಚಟುವಟಿಕೆಯಿಂದ ಗಡಿ ಭಾಗದಲ್ಲಿ ಚೀನಾದ ಜನಸಂಖ್ಯೆ ತ್ವರಿತಗತಿಯಲ್ಲಿ ಹೆಚ್ಚಲಿದೆ.

ಇದರಿಂದ ಭಾರತದೊಂದಿಗೆ ಸಂಬಂಧಕ್ಕೆ ಮತ್ತು ಚೀನಾದ ಸೇನಾ ಚಟುವಟಿಕೆಗೆ ಸಾಕಷ್ಟು ನೆರವು ನೀಡಲಿದೆ. ಇದರಿಂದ ಚೀನಾ ತನ್ನ ಹಕ್ಕು ಸ್ಥಾಪಿಸುತ್ತಿರುವ ಪ್ರದೇಶದಿಂದ ಭಾರತೀಯ ಸೇನೆ ಹಾಗೂ ನಾಗರಿಕರನ್ನು ಹೊರ ಹಾಕಲು ಸಾಧ್ಯವಾಗಲಿದೆ’ ಎಂದು ಬೀಜಿಂಗ್‌ನಲ್ಲಿರುವ ಚೀನಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಝೆಂಗ್‌ ಯೌಯೆ ವಿಶ್ಲೇಷಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry