ವಿಶ್ವನಾಥ್‌, ಜಿ.ಟಿ. ದೇವೇಗೌಡಗೆ ಸಚಿವ ಸ್ಥಾನ ಸಾಧ್ಯತೆ

7
ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ: ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ?

ವಿಶ್ವನಾಥ್‌, ಜಿ.ಟಿ. ದೇವೇಗೌಡಗೆ ಸಚಿವ ಸ್ಥಾನ ಸಾಧ್ಯತೆ

Published:
Updated:

ಮೈಸೂರು: ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾಗಲಿರುವ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿದೆ.

ಎಚ್‌.ವಿಶ್ವನಾಥ್‌, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌ ಹಾಗೂ ಡಾ.ಯತೀಂದ್ರ ಅವರ ಹೆಸರು ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಜೆಡಿಎಸ್‌ನ ಐವರು ಶಾಸಕರು ಇದ್ದಾರೆ. ಕಾಂಗ್ರೆಸ್‌ನಿಂದ ಮೂವರು ಆಯ್ಕೆಯಾಗಿದ್ದಾರೆ.

ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಹಕಾರ ಸಚಿವರಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಜಿ.ಟಿ.ದೇವೇಗೌಡರು ಕಾರ್ಯನಿರ್ವಹಿಸಿದ್ದಾರೆ. ನಾಲ್ಕನೇ ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರೇ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಅವರಿಗೆ ಪ್ರಮುಖ ಖಾತೆಯೇ ಸಿಗುವ ಸಂಭವವಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೂ ಅವರ ಹೆಸರು ಕೇಳಿ ಬರುತ್ತಿದೆ.

ವಿಶ್ವನಾಥ್‌ ಕೂಡ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು.

ಬಳಿಕ ಬಡ್ತಿ ಪಡೆದು ಅರಣ್ಯ ಸಚಿವರಾದರು. ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 1978ರಲ್ಲಿಯೇ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದವರು. ಹೀಗಾಗಿ, ಜಿಲ್ಲೆಯಲ್ಲಿ ಎಲ್ಲರಿಗಿಂತ ಹಿರಿಯ ಶಾಸಕ ಕೂಡ.

ಕೆ.ಆರ್‌.ನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಸಾ.ರಾ.ಮಹೇಶ್‌ ಅವರಿಗೂ ಸಚಿವ ಸ್ಥಾನದ ಅವಕಾಶ ಒಲಿಯುವ ಸಾಧ್ಯತೆ ಇದೆ.

ವರುಣಾ ಕ್ಷೇತ್ರದಿಂದ ಮೊದಲ ಬಾರಿ ಗೆಲುವು ಸವಿದಿರುವ ಡಾ.ಯತೀಂದ್ರ ಹೆಸರು ಕೂಡ ಮಂತ್ರಿ ಪದವಿಗೆ ಕೇಳಿಬರುತ್ತಿದೆ.

ಅದಕ್ಕೆ ಅಪ್ಪ ಸಿದ್ದರಾಮಯ್ಯನವರ ಶ್ರೀರಕ್ಷೆಯೂ ಇದೆ. ಸತತ ಐದನೇ ಬಾರಿ ಗೆದ್ದಿರುವ ತನ್ವೀರ್‌ ಸೇಠ್‌ ಅವರು ಮತ್ತೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಈಗಾಗಲೇ ಯಾರಿಗೆ ಯಾವ ಸ್ಥಾನ ಸಿಗಬಹುದು ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪಟ್ಟಿ ಓಡಾಡುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry