8ನೇ ವಾರ್ಡ್‌ನಲ್ಲಿ ಹತ್ತಾರು ಸಮಸ್ಯೆ

7
ಅಭಿವೃದ್ಧಿ ಕಾಣದ ಬಡಾವಣೆಗಳು

8ನೇ ವಾರ್ಡ್‌ನಲ್ಲಿ ಹತ್ತಾರು ಸಮಸ್ಯೆ

Published:
Updated:
8ನೇ ವಾರ್ಡ್‌ನಲ್ಲಿ ಹತ್ತಾರು ಸಮಸ್ಯೆ

ಬೆಳಗಾವಿ: ಇಲ್ಲಿನ 8ನೇ ವಾರ್ಡ್‌ನಲ್ಲೂ ಹತ್ತಾರು ಸಮಸ್ಯೆಗಳು ಕಂಡುಬರುತ್ತಿವೆ. ಚಿದಂಬರ ನಗರ, ಮೃತ್ಯುಂಜಯ ನಗರ, ಭಾಗ್ಯ ನಗರ 1ನೇ ಕ್ರಾಸ್‌, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, 1ನೇ ರೈಲ್ವೆ ಗೇಟ್‌, 2ನೇ ರೈಲ್ವೆ ಗೇಟ್‌, 3ನೇ ರೈಲ್ವೆ ಗೇಟ್‌ ವ್ಯಾಪ್ತಿಯನ್ನು ಈ ವಾರ್ಡ್‌ ಒಳಗೊಂಡಿದೆ. ದಕ್ಷಿಣದ ಕೊನೆಯ ಭಾಗದಲ್ಲಿರುವ ಈ ವಾರ್ಡ್‌ನಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲ.

ಅಲ್ಲಲ್ಲಿ ಗುಂಡಿಗಳದ್ದೇ ದರ್ಬಾರ್‌. ಬಹುತೇಕ ಕಡೆಗಳಲ್ಲಿ ಚರಂಡಿಗಳಿಲ್ಲ. ಇರುವೆಡೆ ನಿರ್ವಹಣೆಯ ಕೊರತೆ ಕಂಡುಬರುತ್ತಿದೆ. ನಿತ್ಯ ಸ್ವಚ್ಛತೆಯೂ ಇಲ್ಲಿ ಮರೀಚಿಕೆಯಾಗಿದೆ. ಅಲ್ಲಲ್ಲಿ ತ್ಯಾಜ್ಯ ಕೊಳೆತು ನಾರುತ್ತಿರುವುದರಿಂದ, ರೋಗ–ರುಜಿನಗಳು ಹರಡುವುದಕ್ಕೆ ಆಸ್ಪದ ನೀಡಿದಂತಾಗುತ್ತಿದೆ.

ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆ ಹಾಗೂ ಅಮೃತ್‌ ಯೋಜನೆಗಳಡಿ ಯಾವುದೇ ಅನುದಾನ ಸಿಕ್ಕಿಲ್ಲ.

‘ಸುಶಿಕ್ಷಿತರು ಮತ್ತು ಹಸಿರು ವನದಿಂದ ಕೂಡಿದ ಈ ಪ್ರದೇಶದಲ್ಲಿ ಅನೈರ್ಮಲ್ಯದ  ಸಮಸ್ಯೆ ತಪ್ಪಿಲ್ಲ. ಇಲ್ಲಿ ವಾರಕ್ಕೊಮ್ಮೆಯೂ ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆ ಕಾರ್ಯ ನಡೆಯುವುದಿಲ್ಲ. ಆಗಾಗ ಮಾತ್ರವೇ ಈ ಕಾರ್ಯ ನಡೆಯುತ್ತದೆ. ತ್ಯಾಜ್ಯ ವಿಲೇವಾರಿಯಲ್ಲಿ ವಿಳಂಬ ಆಗುತ್ತಿರುವುರಿಂದ, ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ’ ಎಂದು ತಾನಾಜಿ ಜಾಧವ ದೂರಿದರು.

ಭಾಗ್ಯನಗರ ಮುಖ್ಯ ಕ್ರಾಸ್‌ನಿಂದ ವಾರ್ಡ್‌ ಪ್ರವೇಶಿಸುವ ರಸ್ತೆಯಲ್ಲಿ ಗುಂಡಿಗಳು ಕಂಡುಬರುತ್ತವೆ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮಳೆ ಬಂದಾಗ ಇದು ಅಕ್ಷರಶಃ ಕೆಸರು ಗದ್ದೆಯಂತೆ ಆಗುತ್ತದೆ.

ಈ ಭಾಗದಲ್ಲಿ ಎರಡು ಕಡೆಗಳಲ್ಲಿ ತ್ಯಾಜ್ಯ ಬಿಸಾಡುವ ತಾಣಗಳಿವೆ. ಇವು ಇಡೀ ಪ್ರದೇಶವನ್ನು ಮಲಿನ ಗೊಳಿಸುತ್ತಿವೆ. ಆಗಾಗ ಸ್ವಚ್ಛಗೊಳಿಸದೇ ಇರುವುದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

‘ಈ ಪ್ರದೇಶದಲ್ಲಿನ ತ್ಯಾಜ್ಯವನ್ನು ಈಚೆಗೆ ತೆರವುಗೊಳಿಸಿ, ಪೇವರ್ಸ್‌ ಅಳವಡಿಸಲಾಗುತ್ತಿದೆ. ಗಟಾರ ನಿರ್ಮಾಣ ಕಾರ್ಯವೂ ಪೂರ್ಣ ಗೊಳ್ಳುವ ಹಂತದಲ್ಲಿದೆ. ಕಾಮಗಾರಿ  ಮುಗಿದ  ನಂತರವಾದರೂ  ಒಳ್ಳೆಯದಾಗಬೇಕು’ ಎನ್ನುವುದು ಇಲ್ಲಿನ ನಿವಾಸಿ ರಮೇಶ ಶಹಾಪುರ ಅವರ ಆಶಯ.

ಇಲ್ಲಿನ ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆಗಳಲ್ಲಿ ನಿತ್ಯ ಮಾರುಕಟ್ಟೆ ನಡೆಯುತ್ತದೆ. ಮಾರುಕಟ್ಟೆಗೆ ಪ್ರತ್ಯೇಕ ಜಾಗ ಒದಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ನಿವಾಸಿಗಳ ಬೇಡಿಕೆ. ಇದಕ್ಕೆ ಸ್ಪಂದನೆ ಸಿಕ್ಕಿಲ್ಲ’ ಎಂದು ನಿವಾಸಿ ಮಾಲತಿ ನಾಶಿ ಹೇಳಿದರು.

‘ಭಾಗ್ಯನಗರ 1ನೇ ಕ್ರಾಸ್‌ನಿಂದ ಸಾಗುವ ರಸ್ತೆ ಸುಧಾರಣೆ ಮಾಡಬೇಕು, ಚರಂಡಿಗಳನ್ನು ನಿರ್ಮಿಸಬೇಕು ಮತ್ತು ಆಶೀರ್ವಾದ ಮಂಗಲ ಕಾರ್ಯಾಲಯದ ಮುಂಭಾಗದ ಮುಖ್ಯ ರಸ್ತೆ  ಅಭಿವೃದ್ಧಿಪಡಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಇಲ್ಲಿ ₹ 1 ಕೋಟಿ ವೆಚ್ಚದ ಕಾಮಗಾರಿ ಆಗಬೇಕಾಗಿದೆ. ಆದರೆ ಪಾಲಿಕೆಯಿಂದ ₹ 10 ಲಕ್ಷ ಬಂದಿದ್ದು ಅದರಲ್ಲಿ ಕೆಲಸ ಆರಂಭಿಸಬೇಕು ಎಂದು ಆಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಪಾಲಿಕೆ ಸದಸ್ಯ ರಾಕೇಶ ಪಲಂಗೆ ಪ್ರತಿಕ್ರಿಯಿಸಿದರು.

‘ಈಗ ದೊರೆಯುವ ಅನುದಾನದಲ್ಲಿ ಕೆಲಸ ಆರಂಭಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಪಡೆಯಬೇಕು ಎನ್ನುವ ಉದ್ದೇಶವಿದೆ. ಅನಗೋಳ ಮುಖ್ಯರಸ್ತೆ, ಭಾಗ್ಯನಗರ ರಸ್ತೆ, ಸ್ಟಾರ್‌ ಕಪಲ್‌ ಹೋಟೆಲ್‌ ಬಳಿಯ ರಸ್ತೆಗಳನ್ನು ಕಾಂಕ್ರೀಟ್‌ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ. ಕೆಲವೆಡೆ ಡಾಂಬರು ಹಾಕಲಾಗಿದೆ’ ಎಂದರು.

**

ದೊಡ್ಡ ಕಾಮಗಾರಿಗಳನ್ನು ಕಡಿಮೆ ಹಣದಲ್ಲಿ ಮಾಡುವುದು ಹೇಗೆ ಎನ್ನುವುದು ಪ್ರಶ್ನೆಯಾಗಿದೆ. ಅನುದಾನ ಸರಿಯಾಗಿ ಸಿಗುತ್ತಿಲ್ಲ

– ರಾಕೇಶ ಪಲಂಗೆ, ಪಾಲಿಕೆ ಸದಸ್ಯ

ಆರ್‌.ಎಲ್‌. ಚಿಕ್ಕಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry