ತೆವಳುತ್ತಿರುವ ಬಸ್‌ ನಿಲ್ದಾಣ ಕಾಮಗಾರಿ

7
₹ 30 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಯೋಜನೆ

ತೆವಳುತ್ತಿರುವ ಬಸ್‌ ನಿಲ್ದಾಣ ಕಾಮಗಾರಿ

Published:
Updated:
ತೆವಳುತ್ತಿರುವ ಬಸ್‌ ನಿಲ್ದಾಣ ಕಾಮಗಾರಿ

ಬೆಳಗಾವಿ: ಇಲ್ಲಿನ ಕೇಂದ್ರ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ತೆವಳುತ್ತಾ ಸಾಗುತ್ತಿದೆ.

ಯೋಜನೆ ಸಿದ್ಧವಾದ ಹಲವು ವರ್ಷಗಳ ನಂತರ ಕೊನೆಗೂ ಚಾಲನೆ ಪಡೆದುಕೊಂಡಿದ್ದ ₹ 30 ಕೋಟಿ ವೆಚ್ಚದ ಈ ಕಾಮಗಾರಿಯಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ. ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ ನಿಗದಿತ ಅವಧಿಯೊಳಗೆ ಸಿದ್ಧವಾಗುವುದು ಅನುಮಾನ ಎನ್ನುವಂತಹ ಸ್ಥಿತಿ ಇದೆ.

ಹಿಂದೆ ಇಲ್ಲಿ 4.5 ಎಕರೆ ಜಾಗ­ದಲ್ಲಿ ಕಾರ್ಯಾಗಾರ ಹಾಗೂ 4.5 ಎಕರೆ ಪ್ರದೇಶದಲ್ಲಿ ಬಸ್‌ ನಿಲ್ದಾಣವಿತ್ತು. ಕಾರ್ಯಾಗಾರವನ್ನು ಆಟೊನಗರಕ್ಕೆ ಸ್ಥಳಾಂತರಿಸಿ, ಎಲ್ಲ ಜಾಗವನ್ನೂ ನಿಲ್ದಾಣಕ್ಕೆಂದೇ ನೀಡಲಾಗಿದೆ. ನಿಲ್ದಾಣದ ಆವರಣದಲ್ಲಿ ಕಾಂಕ್ರೀಟ್‌ ಹಾಕುವುದು, ರ್‍ಯಾಂಪ್‌, ಶೌಚಾ­ಲಯ, ವಾಣಿಜ್ಯ ಮಳಿಗೆಗಳ ಕಟ್ಟಡ, ಸಂಚಾರ ನಿರೀಕ್ಷಕರ ಕೊಠಡಿ, ವಿಶ್ರಾಂತಿ ಗೃಹ, ನೀರು ಮರುಬಳಕೆ ಸ್ಥಾವರ, ಕಟ್ಟಡಗಳು, ವಾಹನಗಳ ನಿಲುಗಡೆ ತಾಣ ಮೊದಲಾದ

ವುಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆಯನ್ನು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿದ್ಧಪಡಿಸಿತ್ತು.

ನೂರಾರು ಬಸ್‌ಗಳು: ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಪರ್ಕ ಕೊಂಡಿಯಾಗಿರುವ ಕೇಂದ್ರ ಬಸ್‌ ನಿಲ್ದಾಣದ ಮೂಲಕ ಬೆಳಗಾವಿ ಘಟಕ ಸೇರಿದಂತೆ ವಿವಿಧ ಘಟಕಗಳ 2000ಕ್ಕೂ ಹೆಚ್ಚು ಬಸ್‌ಗಳು ನಿತ್ಯ ಸಂಚರಿಸುತ್ತವೆ. ಹುಬ್ಬಳ್ಳಿ, ಮುಂಬೈ, ಪುಣೆ, ಗೋವಾ, ಚೆನ್ನೈ, ಹೈದರಾಬಾದ್‌, ಬೆಂಗಳೂರು, ಬಾಗಲಕೋಟೆ, ಮೈಸೂರು, ಬೀದರ್‌, ವಿಜಯಪುರ ಹೀಗೆ ವಿವಿಧೆಡೆಗೆ ಬಸ್‌ಗಳು ನೂರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ಇಷ್ಟೂ ಬಸ್‌ಗಳಿಗೆ ಈಗಿರುವ ತಾತ್ಕಾಲಿಕ ಜಾಗ ಸಾಲುತ್ತಿಲ್ಲ. ಮಳೆ ಬಂದ ಸಂದರ್ಭದಲ್ಲಂತೂ ಈ ಆವರಣ ಅಕ್ಷರಶಃ ಕೆಸರು ಗದ್ದೆಯಂತಾಗುತ್ತದೆ. ಇದರಿಂದ, ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಮುಂಗಾರು ಹಂಗಾಮು ಸಮೀಪಿಸುತ್ತಿರುವುದರಿಂದ, ಕಾಮಗಾರಿಗೆ ಮಳೆಯಿಂದ ಅಡ್ಡಿಯಾಗುವ ಅನುಮಾನವೂ ಕಾಡುತ್ತಿದೆ. ಈ ಬಸ್‌ ನಿಲ್ದಾಣವನ್ನು ನಿತ್ಯ ಸರಾಸರಿ 60 ಸಾವಿರಕ್ಕೂ ಹೆಚ್ಚಿನ ಜನರು ಬಳಸುತ್ತಾರೆ.

ಫೆಬ್ರುವರಿಗೆ ಸಿದ್ಧವಾಗಬೇಕು ಎಂದಿದ್ದರು: 2016ರ ಡಿಸೆಂಬರ್‌ 3ರಂದು ಶಂಕುಸ್ಥಾಪನೆ ನೆರವೇರಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. 2018ರ ಜನವರಿಗೆ ಪೂರ್ಣಗೊಳಿಸಬೇಕು. ಫೆಬ್ರುವರಿಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗಬೇಕು. ಕಾಮಗಾರಿಯಲ್ಲಿ ವಿಳಂಬವಾದರೆ ದಂಡ ಹಾಕಲಾಗುವುದು’ ಎಂಬ ಎಚ್ಚರಿಕೆಯನ್ನು ನೀಡಿದ್ದರು. ವಾಸ್ತವವಾಗಿ ಹೋದ ವರ್ಷದ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಪಡೆಯುವ ಗಡಿಬಿಡಿ, ಪ್ರಚಾರದಲ್ಲಿ ಮುಳುಗಿ ಹೋಗಿದ್ದ ಜನಪ್ರತಿನಿಧಿಗಳು ಕಾಮಗಾರಿ ಯಾವ ಹಂತದಲ್ಲಿದೆ ಎಂದು ಪರಿಶೀಲಿಸುವ ಗೋಜಿಗೂ ಹೋಗಲಿಲ್ಲ!

ಭಾನುವಾರ ನಿರ್ಮಾಣ ಹಂತದ ಕಟ್ಟಡದ ಎದುರು ಜೆಸಿಬಿಯೊಂದನ್ನು ನಿಲ್ಲಿಸಲಾಗಿತ್ತು. ಯಾವುದೇ ಕಾಮಗಾರಿ ನಡೆಯುತ್ತಿರಲಿಲ್ಲ. ಕಾರ್ಮಿಕರೂ ಇರಲಿಲ್ಲ!

ಈ ಕುರಿತು ಪ್ರತಿಕ್ರಿಯಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ, ‘ನಾನು ಒಂದೂವರೆ ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದೇನೆ. ವಿಧಾನಸಭೆ ಚುನಾವಣೆ ನೀತಿಸಂಹಿತೆಯಿಂದಾಗಿ ಕಾಮಗಾರಿಗೆ ಕೊಂಚ ತೊಂದರೆಯಾಗಿತ್ತು. ನಿರೀಕ್ಷಿಸಿದಷ್ಟು ವೇಗವಾಗಿ ಕಾಮಗಾರಿ ನಡೆದಿಲ್ಲ; ವಿಳಂಬವಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

**

ಬಸ್‌ ನಿಲ್ದಾಣದ ಕಾಮಗಾರಿ ಶೇ 70ರಷ್ಟು ಮುಗಿದಿದೆ. ಇನ್ಮುಂದೆ, ತ್ವರಿತವಾಗಿ ನಡೆಯುವಂತೆ ಕ್ರಮ ಕೈಗೊಂಡು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು

ಮಹಾದೇವಪ್ಪ ಮುಂಜಿ, ವಿಭಾಗೀಯ ನಿಯಂತ್ರಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry