7

ಚಿಂಚೋಳಿ: ಇಲ್ಲಿ ಗೆದ್ದರೆ ಅಲ್ಲಿ ಗದ್ದುಗೆ; ಮತ್ತೆ ನಿಜವಾಯಿತು!

Published:
Updated:

ಚಿಂಚೋಳಿ: ಚಿಂಚೋಳಿ ಮತಕ್ಷೇತ್ರದಲ್ಲಿ ಗೆದ್ದ ಪಕ್ಷವೇ ಅಧಿಕಾರ ಪಡೆಯುವುದು 15ನೇ ವಿಧಾನಸಭೆ ಚುನಾವಣೆಯಲ್ಲೂ ನಿಜವಾಗಿದೆ.

ಇಲ್ಲಿ ಗೆದ್ದ ಪಕ್ಷದವರು ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ವಾಡಿಕೆಯಾಗಿದೆ. ಒಂದೊಮ್ಮೆ ಇಲ್ಲಿ ಗೆದ್ದ ಪಕ್ಷದವರಿಗೆ ರಾಜ್ಯದಲ್ಲಿ ಅಧಿಕಾರ ದೊರೆಯದಿದ್ದರೆ ಆ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂಬುದು ಜನರ ನಂಬಿಕೆ.

2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ, ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್‌. ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸದೆ ಅಧಿಕಾರ ಕಳೆದುಕೊಳ್ಳುವ ಮೂಲಕ ಚಿಂಚೋಳಿಯ ಕ್ಷೇತ್ರದ ವಿಶೇಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಚಿಂಚೋಳಿಯಿಂದ ಶಾಸಕರಾಗಿ ಡಾ. ಉಮೇಶ ಜಾಧವ್‌ ಆಯ್ಕೆಯಾಗಿದ್ದಾರೆ. ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚುನಾವಣೋತ್ತರ ಮೈತ್ರಿಯಿಂದ ಬಹುಮತ ಪಡೆದಿವೆ. ಈಗ ಸಮ್ಮಿಶ್ರ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದೆ.

1952ರಿಂದ 2018ರ ವರೆಗೆ ನಡೆದ ಚುನಾವಣೆಗಳಲ್ಲಿ 1983 ಮತ್ತು 1985ರಲ್ಲಿ ಮಾತ್ರ ಇಲ್ಲಿ ಗೆದ್ದ ಪಕ್ಷದವರಿಗೆ ಅಧಿಕಾರ ಸಿಕ್ಕಿರಲಿಲ್ಲ. ಆಗ ಎರಡು ಅವಧಿಯಲ್ಲಿ ಇಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದರೂ ಅಧಿಕಾರ ಸಿಕ್ಕಿರಲಿಲ್ಲ. ಇದರಿಂದ ಆ ಸರ್ಕಾರ ಅವಧಿ ಪೂರ್ವದಲ್ಲಿ ಅಧಿಕಾರ ಕಳೆದುಕೊಂಡಿತು.

ಎರಡು ಬಾರಿ ಮುಖ್ಯಮಂತ್ರಿಯನ್ನು ನೀಡಿದ ಚಿಂಚೋಳಿ ಕ್ಷೇತ್ರದಿಂದ ವೀರೇಂದ್ರ ಪಾಟೀಲ 4 ಬಾರಿ ಗೆದ್ದಿದ್ದರು. ಮಾಜಿ ಸಚಿವ ದಿವಂಗತ ದೇವೇಂದ್ರಪ್ಪ ಘಾಳಪ್ಪ 3 ಬಾರಿ, ಹೋರಾಟಗಾರ ವೈಜನಾಥ ಪಾಟೀಲ ಹಾಗೂ ಡಾ. ಉಮೇಶ ಜಾಧವ್‌ ತಲಾ ಎರಡು ಬಾರಿ ಗೆದ್ದಿದ್ದಾರೆ.

ಜಾಧವಗೆ ಸಿಗುವುದೇ ಮಂತ್ರಿಗಿರಿ?

ಡಾ. ಉಮೇಶ ಜಾಧವ್‌ ಅವರಿಗೆ ಮೈತ್ರಿಕೂಟ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯುವ ಬಗ್ಗೆ ಕಾರ್ಯಕರ್ತರು ಮತ್ತು ಬೆಂಬಲಿಗರು ಆಶಾವಾದಿಯಾಗಿದ್ದಾರೆ.

ಲಂಬಾಣಿ ಸಮುದಾಯದ ಜಾಧವ್‌, ಕೇಂದ್ರ ಸರ್ಕಾರದ ಸೇವೆಯಲ್ಲಿದ್ದರು. ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯದಲ್ಲಿ ಗುರುತಿಸಿಕೊಂಡು, ಎರಡನೇ ಬಾರಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry