ಸ್ವತಂತ್ರ ಧರ್ಮ ಹೋರಾಟದಿಂದ ರಾಜಕೀಯ ಲಾಭ ಬಯಸುವುದು ಸರಿಯಲ್ಲ: ನಟ ಚೇತನ್‌

7

ಸ್ವತಂತ್ರ ಧರ್ಮ ಹೋರಾಟದಿಂದ ರಾಜಕೀಯ ಲಾಭ ಬಯಸುವುದು ಸರಿಯಲ್ಲ: ನಟ ಚೇತನ್‌

Published:
Updated:
ಸ್ವತಂತ್ರ ಧರ್ಮ ಹೋರಾಟದಿಂದ ರಾಜಕೀಯ ಲಾಭ ಬಯಸುವುದು ಸರಿಯಲ್ಲ: ನಟ ಚೇತನ್‌

ಬೆಳಗಾವಿ: ‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವೇ ಬೇರೆ. ಚುನಾವಣಾ ರಾಜಕಾರಣವೇ ಬೇರೆ. ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಕಾರಣದಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜಕೀಯವಾಗಿ ಲಾಭವಾಗಬೇಕಿತ್ತು ಎಂದು ಬಯಸುವುದು ಸರಿಯಲ್ಲ’ ಎಂದು ಚಲನಚಿತ್ರ ನಟ ಚೇತನ್‌ ಹೇಳಿದರು.

‘ಯಾವುದೇ ಅಭ್ಯರ್ಥಿಯು, ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ಸೋತಿದ್ದಾರೆ ಅಥವಾ ಗೆದ್ದಿದ್ದಾರೆ ಎನ್ನಲಾಗದು. ಹೋರಾಟವು ಮತವಾಗಿ ಪರಿವರ್ತನೆಯಾಗಬೇಕಿತ್ತು ಎನ್ನುವುದೂ ಸರಿಯಲ್ಲ. ಅಭ್ಯರ್ಥಿ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದರ ಮೇಲೆ ಅವರ ಸೋಲು–ಗೆಲುವು ನಿರ್ಧಾರವಾಗುತ್ತದೆ. ಧರ್ಮದ ವಿಷಯವನ್ನು ಚುನಾವಣಾ ರಾಜಕಾರಣಕ್ಕೆ ಬಳಸಬಾರದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‘ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ನನ್ನನ್ನು ಖಳನಾಯಕನಂತೆ ಬಿಂಬಿಸಲಾಗುತ್ತಿದೆ. ಇದು ಹಿಂದುತ್ವದ, ವೈದಿಕ ಧರ್ಮದ, ಬ್ರಾಹ್ಮಣ್ಯದ ಹುನ್ನಾರ. ಇದು ಹಿಂದೂ ಧರ್ಮಕ್ಕೆ ವಿರುದ್ಧವಾದುದೂ ಹೌದು’ ಎಂದು ಹೇಳಿದರು.

‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆಯಬೇಕು ಎನ್ನುವುದನ್ನು ಶೇ 60ರಷ್ಟು ಲಿಂಗಾಯತರು ಬೆಂಬಲಿಸುತ್ತಾರೆ ಎನ್ನುವ ಅಂಶ ಸಮೀಕ್ಷೆಯಿಂದ ಹೊರಬಿದ್ದಿದೆ. ಇಂಟರ್ನೆಟ್‌ನಲ್ಲೂ ಇದು ಹರಿದಾಡುತ್ತಿದೆ. ದಲಿತರು, ಪ್ರಗತಿಪರರು ಕೂಡ ಈ ಹೋರಾಟ ಬೆಂಬಲಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜಕಾರಣಿಗಳನ್ನು ದೂರವಿಟ್ಟು, ಜನಸಾಮಾನ್ಯರ ಹೋರಾಟವನ್ನಾಗಿ ಮುಂದುವರಿಸಬೇಕು. ಕಾರ್ಯಕರ್ತನಾಗಿ ದುಡಿಯಲು ನಾನೂ ಸಿದ್ಧವಿದ್ದೇನೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry