‘ಮೈತ್ರಿ ಸರ್ಕಾರ’ದಲ್ಲಿ ‘ಮಹಾರಾಷ್ಟ್ರ ಸೂತ್ರ’ ಪಾಲನೆ: ಜಿ. ಪರಮೇಶ್ವರ ಸುಳಿವು

7

‘ಮೈತ್ರಿ ಸರ್ಕಾರ’ದಲ್ಲಿ ‘ಮಹಾರಾಷ್ಟ್ರ ಸೂತ್ರ’ ಪಾಲನೆ: ಜಿ. ಪರಮೇಶ್ವರ ಸುಳಿವು

Published:
Updated:
‘ಮೈತ್ರಿ ಸರ್ಕಾರ’ದಲ್ಲಿ ‘ಮಹಾರಾಷ್ಟ್ರ ಸೂತ್ರ’ ಪಾಲನೆ: ಜಿ. ಪರಮೇಶ್ವರ ಸುಳಿವು

ಬೆಂಗಳೂರು: ಮಹಾರಾಷ್ಟ್ರದಲ್ಲಿ ಈ ಹಿಂದೆ ಎನ್‌ಸಿಪಿ– ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರ ರಚಿಸಿದ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಜೆಡಿಎಸ್‌ ಜೊತೆ ಅಧಿಕಾರ ಒಪ್ಪಂದ ಮಾಡಿಕೊಂಡು ಸರ್ಕಾರ ರಚಿಸಲು ಕಾಂಗ್ರೆಸ್‌ ಹೈಕಮಾಂಡ್‌ ಉದ್ದೇಶಿಸಿದೆ.

ಎನ್‌ಸಿಪಿ (ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ) ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್‌, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ಉಪ ಮುಖ್ಯಮಂತ್ರಿ, ಗೃಹ, ಇಂಧನ, ಲೋಕೋಪಯೋಗಿ, ಅಬಕಾರಿ, ಸ್ಪೀಕರ್‌ ಹುದ್ದೆಗಳನ್ನು ಪಡೆದುಕೊಂಡಿತ್ತು. ಆದೇ ಸೂತ್ರವನ್ನು ಕರ್ನಾಟಕದಲ್ಲೂ ಪಾಲಿಸುವ ಬಗ್ಗೆ ಜೆಡಿಎಸ್‌ ನಾಯಕರ ಜೊತೆ ಕಾಂಗ್ರೆಸ್‌ ವರಿಷ್ಠರು ಮಾತುಕತೆ ನಡೆಸಲಿದ್ದಾರೆ.

‘ಪ್ರಜಾವಾಣಿ’ ಜೊತೆ ಮಂಗಳವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಈ ಸುಳಿವು ನೀಡಿದರು. ಮಹಾರಾಷ್ಟ್ರ ಮಾದರಿಯಲ್ಲೇ ರಾಜ್ಯದಲ್ಲೂ ಸರ್ಕಾರ ರಚಿಸಲು ಪಕ್ಷದ ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆದಿದೆ.  ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೆ ಸಂಬಂಧ ಎರಡೂ ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ. ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ ಪಾಲಿಗೆ ಬರಲಿದೆ ಎಂದೂ ಅವರು ಹೇಳಿದರು.

ನಮಗೆ 78 ಶಾಸಕರು ಮತ್ತು ಜೆಡಿಎಸ್‌ 37 ಶಾಸಕರಿದ್ದಾರೆ. ಸಚಿವ ಸ್ಥಾನಗಳು ಶಾಸಕರ ಅನುಪಾತಕ್ಕೆ ಅನುವಾಗಿ ಹಂಚಿಕೆ ಆಗಲಿದೆ. ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ ಎಂದರು.

ದೈನಂದಿನ ಚಟುವಟಿಕೆ ಹೊರತುಪಡಿಸಿದರೆ, ಸರ್ಕಾರದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ಹಿರಿಯ ನಾಯಕರನ್ನು ಒಳಗೊಂಡ ‘ಸಮನ್ವಯ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ. ಹೀಗಾಗಿ, ಯೋಜನೆಗಳ ರೂಪರೇಷೆ ಮತ್ತು ಅನುಷ್ಠಾನ ಸಂಬಂಧಿಸಿದಂತೆ ಮೈತ್ರಿ ಕೂಟದಲ್ಲಿ ಯಾವುದೇ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಉಂಟಾಗುವ ಪ್ರಮೇಯವೇ ಬರುವುದಿಲ್ಲ ಎಂದೂ ಅವರು ವಿವರಿಸಿದರು.

‘ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಮಂಗಳವಾರ ಭೇಟಿ ಮಾಡಲಿರುವ ಕುಮಾರಸ್ವಾಮಿ, ಧನ್ಯವಾದ ಸಲ್ಲಿಸಿ ಮರಳಲಿದ್ದಾರೆ. ಸಚಿವ ಸಂಪುಟ ರಚನೆ ಸಂಬಂಧ ಯಾವುದೇ ಮಾತುಕತೆ ಅಥವಾ ಚರ್ಚೆ ನಡೆಸುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಿದ ಸಚಿವ ಸಂಪುಟ ರಚನೆಯ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ಬರಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಸದನದಲ್ಲಿ ಬಹುಮತ ಸಾಬೀತು ಪಡಿಸಲಿದ್ದಾರೆ. ಎರಡೂ ಪಕ್ಷಗಳ ಪರಸ್ಪರ ಹೊಂದಾಣಿಕೆಯಲ್ಲಿ ಸಚಿವ ಸಂಪುಟ ಅಸ್ವಿತ್ವಕ್ಕೆ ಬರಲಿದೆ ಎಂದೂ ಅವರು ಹೇಳಿದರು.

ಉತ್ತರ ಕರ್ನಾಟಕ ಭಾಗದ ಶಾಸಕರು ಉಪ ಮುಖ್ಯಮಂತ್ರಿ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮಗೂ ಪ್ರಾತಿನಿಧ್ಯ ನೀಡುವಂತೆ ಅವರು ಆಗ್ರಹಿಸಿದ್ದಾರೆ. ಅದು ಸಹಜ. ಪಕ್ಷದ ಹೈಕಮಾಂಡ್‌ ಈ ಬಗ್ಗೆ ಚರ್ಚೆ ನಡೆಸಲಿದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಎಂಟು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸಚಿವ ಸಂಪುಟಕ್ಕೆ ಸೇರಿದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತೇನೆ’ ಎಂದೂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry