ಮಕ್ಕಳ ಅಪಹರಣ ವದಂತಿ, ಆತಂಕ

7
ಆಂಧ್ರ ಮೂಲದವರು ಪಟ್ಟಣದಿಂದ ಹೊರಕ್ಕೆ

ಮಕ್ಕಳ ಅಪಹರಣ ವದಂತಿ, ಆತಂಕ

Published:
Updated:

ನಾಲತವಾಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಕ್ಕಳ ಅಪಹರಣಕಾರರು ಹಾಗೂ ನರಭಕ್ಷಕರು ಬೀಡು ಬಿಟ್ಟಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣದ ಹೊರವಲಯದಲ್ಲಿ ಬೀಟುಬಿಟ್ಟಿದ್ದ ಆಂಧ್ರ ಮೂಲದವರನ್ನು ಹೊರ ಕಳುಹಿಸಿದರು.

ಕರ್ನೂಲ್‌ ಜಿಲ್ಲೆಯ ಕಡೂರ ಗ್ರಾಮದವರು ಈ ಭಾಗದಲ್ಲಿ ಬೀಡು ಬಿಟ್ಟಿದ್ದು, ಕೂದಲು ಸಂಗ್ರಹಿಸುವ ಹಾಗೂ ಸ್ಟೀಲ್ ಸಾಮಗ್ರಿ ಮಾರಾಟ ಮಾಡುವ ನೆಪದಲ್ಲಿ ಬಂದು ಮಕ್ಕಳನ್ನು ಅಪಹರಣ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ನಾಲತವಾಡ, ಬಿಜ್ಜೂರ, ಖಾನಿಕೇರಿ, ಸುಲ್ತಾನಪುರ, ಅಯ್ಯನಗುಡಿ, ಇಂಗಳಗಿ ಟಕ್ಕಳಕಿಯಲ್ಲಿ ತೆಲುಗು ಭಾಷಿಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿತ್ತು.

ನಿದ್ದೆಗೆಟ್ಟ ರೈತರು: ಸಮೀಪದ ಬಿಜ್ಜೂರ ವ್ಯಾಪ್ತಿಯಲ್ಲಿ ಕಳೆದ 3-4 ದಿನಗಳಿಂದ 4 ರಿಂದ 5 ಜನರ ತಂಡ ಜಮೀನುಗಳಲ್ಲಿ ವಾಸಿಸುತ್ತಿದೆ. ರೈತರನ್ನು ಕಂಡಾಕ್ಷಣವೇ ಕಬ್ಬಿನ ಗದ್ದೆಗಳಲ್ಲಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿ ರೈತರೊಬ್ಬರು ಆತಂಕ ಹೊರ ಹಾಕಿದರು.

ವಿಚಿತ್ರವಾದ ಬಟ್ಟೆಗಳನ್ನು ಧರಿಸಿಕೊಂಡ ಮಹಿಳೆಯರು ಭಯಾನಕವಾಗಿ ಕಾಣುತ್ತಿದ್ದು, ಇವರೇ ಮಕ್ಕಳ ಅಪಹರಣಕಾರರು ಇರಬಹುದು ಎಂಬ ಭೀತಿ ಕಾಡುತ್ತಿತ್ತು.

ಕಾಲ್ಕಿತ್ತ ತಂಡ: ಪಟ್ಟಣದ ಜಗದೇವ ನಗರದ ಜಮೀನಿನಲ್ಲಿ 7 ಜನರನ್ನೊಳಗೊಂಡ ತಂಡದಲ್ಲಿ ಮಹಿಳೆಯರು ಹಾಗೂ ಪುರುಷರಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಎಎಸ್‌ಐ ಎಸ್.ಬಿ.ನ್ಯಾಮಣ್ಣ, ಹೆಡ್‌ ಕಾನ್‌ಸ್ಟೆಬಲ್‌ ಪಿ.ಎಸ್.ಪಾಟೀಲ, ಎ.ವೈ.ಸಾಲಿ ಅವರು ದಾಖಲೆ ಪರಿಶೀಲಿಸಿ, ಸ್ಥಳದಿಂದ ಹೊರ ಕಳುಹಿಸಿದರು.

**

ನಾಲತವಾಡ ಬಳಿ ಆಂಧ್ರ ಮೂಲದ ತಂಡವನ್ನು ಪಟ್ಟಣದಿಂದ ಹೊರ ಹಾಕಲಾಗಿದೆ. ಮಕ್ಕಳ ಅಪಹರಣಕಾರರು ಎಂಬ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ

ರವಿಕುಮಾರ ಕಪ್ಪತ್ತನವರ, ಸಿಪಿಐ, ಮುದ್ದೇಬಿಹಾಳ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry