ಮುಂಬೈಗೆ ಹೊರಟ ಮಾಗಡಿ ಮಾವು

7
ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆಗೆ ರೈತರ ಆಗ್ರಹ

ಮುಂಬೈಗೆ ಹೊರಟ ಮಾಗಡಿ ಮಾವು

Published:
Updated:
ಮುಂಬೈಗೆ ಹೊರಟ ಮಾಗಡಿ ಮಾವು

ಮಾಗಡಿ: ಈ ಸೀಮೆಯ ರೈತರು ತಮ್ಮ ತೋಟಗಳಲ್ಲಿ ಬೆಳೆದ ಮಾವಿನ ಹಣ್ಣು ಮುಂಬೈನತ್ತ ತೆರಳುತ್ತಿದೆ.

ಹಿಂದೆ ಬೆಟ್ಟಗುಡ್ಡಗಳಿಂದಲೂ, ಕೆರೆಕಟ್ಟೆ ಹಳ್ಳಕೊಳ್ಳಗಳಿಂದಲೂ ಕೂಡಿದ್ದ ಮಾಗಡಿ ತಾಲ್ಲೂಕನ್ನು ಅರೆಮಲೆನಾಡು ಎಂದು ಕರೆಯಲಾಗುತ್ತಿತ್ತು. ರಾಗಿ ಮತ್ತು ಸೊಗಡಿನ ಅವರೆ ಇಲ್ಲಿನ ಸಾಂಪ್ರದಾಯಿಕ ಬೆಳೆಗಳು. ಮಳೆ ಕಡಿಮೆ ಆಗುತ್ತಿರುವುದು ಜತೆಗೆ, ಯುವಜನತೆ ವ್ಯವಸಾಯದಿಂದ ವಿಮುಖರಾಗುತ್ತಿರುವುದು, ಕೃಷಿ ಕಾರ್ಮಿಕ ಕೊರತೆಯಿಂದಾಗಿ 2 ಸಾವಿರ ರೈತರು ಸುಮಾರು ತಮ್ಮ 3 ಸಾವಿರ ಎಕೆರೆ ಭೂಮಿಯಲ್ಲಿ ಮಾವಿನ ತೋಟ ಮಾಡಿಕೊಂಡಿದ್ದಾರೆ.

ಮಾವಿನ ತೋಟಗಳ ನಡುವೆ ರಾಗಿ, ಅವರೆ, ತೊಗರಿ, ಅಲಸಂದೆ ಬೆಳೆಯುತ್ತಿದ್ದಾರೆ. ಈ ಬಾರಿ ಮಾವಿನ ಮರಗಳಲ್ಲಿ ಸುಮಾರಾಗಿ ಕಾಯಿ ಬಿಟ್ಟಿವೆ. ಬಿಸಿ‌ಲು ಹೆಚ್ಚಾಗುತ್ತಿದೆ. ಮಾವಿನ ಫಸಲು ರೈತರ ಕೈಹಿಡಿದಿದೆ ಎಂದು ಮಾವಿನ ತೋಟ ಮಾಡಿರುವ ಬಸವನಹಳ್ಳಿ ಗೊಲ್ಲರ ಹಟ್ಟಿಯ ಬಾಲಿಚಿಕ್ಕಣ್ಣ ಹೇಳುತ್ತಾರೆ.

‘ಸುಮಾರು 2 ಸಾವಿರ ಮಾವು ಬೆಳೆಗಾರರಿದ್ದೇವೆ. ನಾವು ಬೆಳೆದ ಹಣ್ಣುಗಳನ್ನು ಮಾರಲು ಸೂಕ್ತ ಮಾರುಕಟ್ಟೆ ಇಲ್ಲ. ಇದರಿಂದ ಕೃಷಿಕರಿಗೆ ತುಂಬಾ ತೊಂದರೆಯಾಗಿದೆ’ ಎಂದು ಮಾವು ಬೆಳೆಗಾರ ತ್ಯಾಗದೆರೆ ಪಾಳ್ಯದ ಪುಟ್ಟಸ್ವಾಮಯ್ಯ ಅವರ ನೋವಾಗಿದೆ.

ಮಾಡಬಾಳ್‌ ಹೋಬಳಿಯ ಗವಿನಾಗಮಂಗಲ, ಅಜ್ಜನ ಹಳ್ಳಿ, ಬಸವೇನ ಹಳ್ಳಿ, ತ್ಯಾಗದೆರೆ ಪಾಳ್ಯದಲ್ಲಿ ರೈತರು ತೋಟಗಳಲ್ಲಿ ಬಾದಾಮಿ, ಮಲ್ಲಿಕಾ, ತೋತಾಪುರಿ, ಬಾಗನ್‌ ಪುರಿ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ರಾಜೇಶ್‌ ತಿಳಿಸಿದರು.

ತೋಟಗಾರಿಕಾ ಇಲಾಖೆಗೆ ಸೇರಿರುವ ಬಗಿನಗೆರೆ ಗಾಂಧಿಗರ್‌ನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಮತ್ತು ಹಾರೋಹಳ್ಳಿ ತೋಟಗಾರಿಕಾ ಫಾರಂಗಳಲ್ಲಿ ವಿವಿಧ ತಳಿಯ ಮಾವು ಬೆಳೆದು ಮಾರಾಟ ಮಾಡಲಾಗುತ್ತಿದೆ. ಮಾವು ಬೆಳೆಯುವ ರೈತರಿಗೆ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ತೋಟಗಾರಿಕಾ ಅಧಿಕಾರಿ ಶಿವಣ್ಣ ತಿಳಿಸಿದರು.

ತಾಲ್ಲೂಕಿನ 5 ಹೋಬಳಿಗಳಲ್ಲೂ ಮಾವು ಬೆಳೆಯುವ ರೈತರಿದ್ದಾರೆ. ಈ ಬಾರಿ ಫಸಲು ಬಂದಿದೆ. ಸೋಮೇಶ್ವರ ಗುಡಿಯ ಬಳಿ ಎಚ್‌ಎಕೆಎಸ್‌ ಮಾವಿನ ಮಂಡಿ ತೆರೆದಿರುವ ಸೈಯದ್‌ ಅಯೂಬ್‌ ರೈತರ ಮಾವಿನ ತೋಟಗಳಲ್ಲಿ ಬೆಳೆದಿರುವ ಮಾವಿನ ಕಾಯಿಗಳನ್ನು ತಂದು ಲಾರಿಗಳ ಮೂಲಕ ಮುಂಬೈಗೆ ರವಾನಿಸುತ್ತಿದ್ದಾರೆ.

ಪರಂಗಿಚಿಕ್ಕನ ಪಾಳ್ಯದ ರೈತ ಪಿ.ವಿ. ಸೀತಾರಾಮು ಮಾತನಾಡಿ, ‘ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆಯ ಬೆಲೆ ನಿಗದಿಯಾಗಬೇಕಾದರೆ ಮಾಗಡಿಯಲ್ಲಿ ಎಪಿಎಂಸಿ ಮಾರುಕಟ್ಟೆ ಆಗಬೇಕಿದೆ. ರೈತರು ಬೆಳೆದ 1 ಕೆ.ಜಿ. ಮಾವಿನ ಹಣ್ಣನ್ನು ಕೇವಲ ₹3 ರಂತೆ ಖರೀದಿಸುವ ದಳ್ಳಾಳಿಗಳು ತಂಪುಪಾನೀಯ ಮತ್ತು ಉಪ್ಪಿನಕಾಯಿ ತಯಾರಿಸುವ ಕಂಪೆನಿಗಳಿಗೆ ಮಾರಾಟ ಮಾಡುತ್ತಾರೆ. ಅರ್ಧ ಲೀಟರ್‌ ಮಾಜಾ ಪಾನೀಯದ ಬೆಲೆ ₹30 ಇದೆ.

ಮಾವು ಖರೀದಿಸಲು ಎಪಿಎಂಸಿ ಮಾರುಕಟ್ಟೆ ಆರಂಭಿಸಿ ರೈತರ ನೆರವಿಗೆ ಮುಂದಾಗುವಂತೆ ನೂತನ ಶಾಸಕ ಎ. ಮಂಜುನಾಥ ಅವರಲ್ಲಿ ಮನವಿ ಮಾಡಿದ್ದೇನೆ’ ಎಂದರು.

ಮಾಗಡಿ ಸೀಮೆಯ ಮಾವು ದೇಶದ ವಿವಿಧೆಡೆಗಳಲ್ಲಿ ತಂಪು ಪಾನೀಯ ಮಾಜಾ ರೂಪದಲ್ಲಿ ಮಾರಾಟ

ವಾಗುವುದು ಹೆಮ್ಮೆಯ ವಿಷಯವಾಗಿದೆ ಎಂದು ಮಾವು ಬೆಳೆಗಾರ ತ್ಯಾಗದೆರೆ ಪಾಳ್ಯದ ರಂಗಸ್ವಾಮಿ ತಿಳಿಸಿದರು.

ತಂಪುಪಾನೀಯ ಕಂಪನಿಗೆ ಮಾರಾಟ

ಮಾವಿನ ಹಣ್ಣಿನ ವ್ಯಾಪಾರ ಲಾಭದಾಯಕವೇನೂ ಆಗಿಲ್ಲ. ಆದರೂ ರೈತರ ನೆರವಿಗೆ ಮುಂದಾಗುವ ಮತ್ತು ಜೀವನ ನಿರ್ವಹಣೆ ಮಾಡುವ ಉದ್ದೇಶದಿಂದ ಮಾವಿನ ಮಂಡಿ ತೆರೆದಿದ್ದೇನೆ ಎಂದು ಸೈಯದ್‌ ಅಯೂಬ್‌ ಹೇಳುತ್ತಾರೆ. ಸಾವಿರಾರು ಟನ್‌ ಮಾವಿನ ಕಾಯಿ ಬಂದಿದೆ. ಅದರಲ್ಲಿ ಬೇರೆ ಬೇರೆ ತಳಿಗಳನ್ನು ಬೇರ್ಪಡಿಸಿ ಲಾರಿಗಳಿಗೆ ತುಂಬಿ, ಮುಂಬೈನಲ್ಲಿ ಮಾಜಾ ತಂಪು ಪಾನೀಯ ತಯಾರಿಕಾ ಕಂಪನಿಗೆ ರವಾನಿಸುತ್ತಿದ್ದೇವೆ ಎನ್ನುತ್ತಾರೆ.‌

–ದೊಡ್ಡಬಾಣಗೆರೆ ಮಾರಣ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry