ಆಸ್ಪತ್ರೆ ರಸ್ತೆಯೇ ಬಡವರ ಶಾಪಿಂಗ್‌ ಮಾಲ್‌

7
ಇದು ಶ್ರಮಿಕರ ಪಾಲಿನ ಬಿಗ್‌ ಬಜಾರ್‌, ಮನೆ ಬಳಕೆ ವಸ್ತು, ಬಟ್ಟೆಬರೆ ಮಾರಾಟ

ಆಸ್ಪತ್ರೆ ರಸ್ತೆಯೇ ಬಡವರ ಶಾಪಿಂಗ್‌ ಮಾಲ್‌

Published:
Updated:
ಆಸ್ಪತ್ರೆ ರಸ್ತೆಯೇ ಬಡವರ ಶಾಪಿಂಗ್‌ ಮಾಲ್‌

ಮಂಡ್ಯ: ಸದಾ ಜನಜಂಗುಳಿಯಿಂದ ತುಂಬಿ ತುಳುಕುವ ಆಸ್ಪತ್ರೆ ರಸ್ತೆಯನ್ನು ಬಡವರ ಶಾಪಿಂಗ್‌ ಮಾಲ್‌ ಎಂದರೂ ತಪ್ಪಲ್ಲ. ಜಿಲ್ಲೆ, ಹೊರಜಿಲ್ಲೆಯಿಂದ ಮಿಮ್ಸ್‌ ಆಸ್ಪತ್ರೆಗೆ ಬರುವ ಸಾರ್ವಜನಿಕರು ಇಲ್ಲಿ ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಈ ರಸ್ತೆ ‘ಜೀವನದ ದಾರಿ’ಯೂ ಆಗಿದೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ (ನಂದಾ ಟಾಕೀಸ್‌ ಮುಂಭಾಗದಿಂದ) ನೆಹರೂ ನಗರದವರೆಗೆ ಆಸ್ಪತ್ರೆ ರಸ್ತೆ ಚಾಚಿಕೊಂಡಿದೆ. ಹೆದ್ದಾರಿ ಕಡೆಯಿಂದ ಎಡಭಾಗಕ್ಕೆ ಮಿಮ್ಸ್‌ ಆಸ್ಪತ್ರೆ ಇದೆ. ಬಲ ಭಾಗಕ್ಕೆ ಖಾಸಗಿ ನರ್ಸಿಂಗ್‌ ಹೋಮ್‌ಗಳು‌, ಡಯಾಗ್ನೋಸ್ಟಿಕ್‌ ಕೇಂದ್ರಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಬಹುತೇಕ ವೈದ್ಯರು ಆಸ್ಪತ್ರೆ ರಸ್ತೆಯಲ್ಲಿ ಕ್ಲಿನಿಕ್‌ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಯಾವುದಾದರೂ ಕಾರಣಕ್ಕೆ ಆಸ್ಪತ್ರೆ ರಸ್ತೆಗೆ ಭೇಟಿ ಕೊಡುತ್ತಾರೆ. ಆಸ್ಪತ್ರೆ ರಸ್ತೆಗೆ ಸಂಪರ್ಕ ಕಲ್ಪಿಸಲು ಕಿರುದಾರಿಯೊಂದಿದ್ದು ಅದು ಸಣ್ಣ ವ್ಯಾಪಾರಿಗಳ ಜೀವನದ ರಹದಾರಿಯೂ ಆಗಿದೆ.

ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಮಗು ಹುಟ್ಟಿದರೆ ಮಗುವಿಗೆ ಬೇಕಾದ ಹಾಸಿಗೆ, ಬಟ್ಟೆ, ಕರವಸ್ತ್ರ, ಟೋಪಿ, ಕಾಲುಚೀಲ, ಸೊಳ್ಳೆ ಪರದೆ, ಸಣ್ಣ ತೊಟ್ಟಿಲುಗಳು ಈ ರಸ್ತೆಯಲ್ಲಿ ಸಿಗುತ್ತವೆ. ₹ 10– 20ಕ್ಕೆ ಮಕ್ಕಳ ಎಲ್ಲಾ ತೆರನಾದ ಬಟ್ಟೆ ಸಿಗುತ್ತವೆ. ಜಿಲ್ಲಾಸ್ಪತ್ರೆಯಲ್ಲಿ ದಿನಕ್ಕೆ 35ಕ್ಕೂ ಹೆಚ್ಚು ಮಕ್ಕಳು ಹುಟ್ಟುವ ಕಾರಣ ಈ ವಸ್ತುಗಳಿಗೆ ಅಪಾರ ಬೇಡಿಕೆ ಇದೆ. ಸ್ಯಾನಿಟರಿ ನ್ಯಾಪ್ಕಿನ್‌, ಸೋಪು, ಬ್ರಷ್‌, ಟೂತ್‌ ಪೇಸ್ಟ್‌, ಕತ್ತರಿ, ಚಮಚ ಎಲ್ಲವೂ ಸಿಗುತ್ತವೆ. ವ್ಯಾಪಾರಿಗಳು ತಳ್ಳುವ ಗಾಡಿಯಲ್ಲಿ ತಂದು ಮಾರಾಟ ಮಾಡುತ್ತಾರೆ. ಇಷ್ಟೇ ಅಲ್ಲದೆ ದೊಡ್ಡವರ ಲುಂಗಿ, ಪಂಚೆ, ಬನಿಯನ್‌ಗಳು, ಪಟಾಪಟಾ ಚಡ್ಡಿ, ರೆಡಿಮೇಡ್‌ ಶರ್ಟ್‌, ಟಿ ಶರ್ಟ್‌ಗಳೂ ಇಲ್ಲಿ ಸಿಗುತ್ತವೆ.

ಇಲ್ಲಿ ಮಾರಾಟ ಮಾಡುವ ಪ್ಲಾಸ್ಟಿಕ್‌ ವಸ್ತುಗಳಿಗೆ ಅಪಾರ ಬೇಡಿಕೆ ಇದೆ. ಮಗ್‌, ಬಕೆಟ್‌, ಲೋಟ, ಬಿಂದಿಗೆ ಸೇರಿ ಕಾಫಿ, ಟೀ ಜಾಲರಿ, ಬಾಚಣಿಗೆ, ಕನ್ನಡಿ, ಸೂಜಿ, ದಾರ, ಹೇರ್‌ ಪಿನ್‌, ಬಟ್ಟೆ ಪಿನ್‌, ಬಟ್ಟೆ ಕ್ಲಿಪ್ಪುಗಳು, ದಿಂಬು, ದಾರಗಳನ್ನೂ ಇಲ್ಲಿ ಮಾರಾಟವಾಗುತ್ತವೆ. ‘ಮಂಡ್ಯದಲ್ಲಿ ಬಿಗ್‌ ಬಜಾರ್‌ ಇದೆ. ಶ್ರೀಮಂತರು ಅಲ್ಲಿಗೆ ಹೋಗುತ್ತಾರೆ. ಆದರೆ ಬಡವರು ಆಸ್ಪತ್ರೆ ರಸ್ತೆಗೆ ಬಂದು ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಮಾಡುತ್ತಾರೆ. ಆಸ್ಪತ್ರೆಗೆ ಬರುವ ಜನರೇ ನಮಗೆ ಪ್ರಮುಖ ಗ್ರಾಹಕರು. ಅವರಿಂದ ನಮ್ಮ ಜೀವನ ನಡೆಯುತ್ತಿದೆ. ನಾವು ಬಾಡಿಗೆ ಕಟ್ಟುವುದಿಲ್ಲ, ಹೀಗಾಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ’ ಎಂದು ಬಟ್ಟೆ ವ್ಯಾಪಾರಿ ನಾಗಮ್ಮ ಹೇಳಿದರು.

ಹಣ್ಣು ಹಂಪಲು: ಆಸ್ಪತ್ರೆ ರಸ್ತೆಯುದ್ದಕ್ಕೂ ತಳ್ಳುವ ಗಾಡಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಕೊರತೆ ಇಲ್ಲ. ಎಲ್ಲಾ ಥರದ ಹಣ್ಣುಗಳು ಇಲ್ಲಿ ದೊರೆಯುತ್ತವೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಯೋಗ ಕ್ಷೇಮ ವಿಚಾರಿಸಲು ಬರುವ ಜನರು ಇಲ್ಲಿ ಹಣ್ಣುಗಳನ್ನು ಕೊಳ್ಳುತ್ತಾರೆ. 20ಕ್ಕೂ ಹೆಚ್ಚು ವ್ಯಾಪಾರಿಗಳು ಇಲ್ಲಿ ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಕಡ್ಲೆ ಕಾಯಿ ಮಾರಾಟ ಮಾಡುತ್ತಾರೆ. ಆಸ್ಪತ್ರೆಗೆ ಪ್ರವೇಶಿಸುವ ಸಣ್ಣ ರಸ್ತೆಯಲ್ಲಿ ವೃದ್ಧ ಮಹಿಳೆಯರು ಕಡ್ಲೆ ಮಾರಾಟ ಮಾಡುತ್ತಾ ಕುಳಿತಿರುತ್ತಾರೆ.

‘ಬಿಸಿ ಬಿಸಿಯಾಗಿ ಬೇಯಿಸಿದ ಕಡ್ಲೆಕಾಯಿ ತಿನ್ನಲು ಆಸ್ಪತ್ರೆ ರಸ್ತೆಗೆ ಭೇಟಿ ನೀಡಬೇಕು. ಸ್ಟೌ ಇಟ್ಟುಕೊಂಡು ಸ್ಥಳದಲ್ಲೇ ಕಡ್ಲೆ ಕಾಯಿ ಬೇಯಿಸಿ ಕೊಡುತ್ತಾರೆ. ಈ ರಸ್ತೆಯಲ್ಲಿ ಬಡವರ ಬದುಕು ನಡೆಯುತ್ತಿದೆ. ಮಾರುವವರು, ಕೊಳ್ಳುವವರು ಬಡವರೇ ಆಗಿದ್ದಾರೆ’ ಎಂದು ಆಸ್ಪತ್ರೆ ರಸ್ತೆಯಲ್ಲಿ ಮೆಡಿಕಲ್ಸ್‌ ಇಟ್ಟುಕೊಂಡಿರುವ ನಾಗೇಂದ್ರ ತಿಳಿಸಿದರು. ಈಗಾಗಲೇ ರಮ್ಜಾನ್‌ ಉಪವಾಸ ವ್ರತ ಆರಂಭವಾಗಿದೆ. ರೋಜಾ ಮಾಡುವ ಮುಸ್ಲಿಮರಿಗಾಗಿ ಈ ರಸ್ತೆಯಲ್ಲಿ ಒಣದ್ರಾಕ್ಷಿ, ಗೋಡಂಬಿ, ಖರ್ಜೂರವನ್ನೂ ಮಾರಾಟ ಮಾಡಲಾಗುತ್ತಿದೆ.

ತಿಂಡಿ, ಊಟ: ಈ ರಸ್ತೆಯಲ್ಲಿ ತಿಂಡಿ, ಊಟವೂ ದೊರೆಯುತ್ತದೆ. ವ್ಯಾಪಾರಿಗಳು ಮನೆಯಿಂದ ಮಾಡಿಕೊಂಡು ಬಂದು ಇಲ್ಲಿ ಮಾರಾಟ ಮಾಡುತ್ತಾರೆ. ಆಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಕರು ತಿಂಡಿ, ಊಟ ಕಟ್ಟಿಸಿಕೊಂಡು ಹೋಗುತ್ತಾರೆ. ಸ್ಥಳದಲ್ಲೇ ತಿನ್ನಲು ಅವಕಾಶವಿಲ್ಲ, ಆದರೆ ಎಲ್ಲರೂ ಪಾರ್ಸೆಲ್‌ ಮಾಡಿಸಿಕೊಳ್ಳುತ್ತಾರೆ. ‘ತಿಂಡಿ ಊಟಕ್ಕೆ ಮೊದಲು ಅಪಾರ ಬೇಡಿಕೆ ಇತ್ತು. ಈಗ ಸಮೀಪದಲ್ಲೇ ಇಂದಿರಾ ಕ್ಯಾಂಟೀನ್‌, ರಮ್ಯಾ ಕಾಂಟೀನ್‌ಗಳಾಗಿವೆ. ಹೀಗಾಗಿ ಬೇಡಿಕೆ ಕಡಿಮೆಯಾಗಿದೆ’ ಎಂದು ಬೆಳಿಗ್ಗೆ ತಿಂಡಿ ಮಾರಾಟ ಮಾಡುವ ವೆಂಕಟೇಶ್‌ ಹೇಳಿದರು.

‘ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಅಂಗಡಿ ಹಾಕುವ ಕಾರಣದಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತದೆ. ನಗರಸಭೆಯಿಂದ ಈಗಾಗಲೇ ಹಲವು ಬಾರಿ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ. ಆದರೂ ಅಂಗಡಿ ಹಾಕುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ’ ಎಂದು ಅಶೋಕ್‌ ನಗರ ನಿವಾಸಿ ಶಿವರಾಮೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry