ಶಾಲಾ ದಿನಗಳ ಸವಿ ಸವಿ ನೆನಪಿಗೆ ಚಿನ್ನದ ಮೆರುಗು.. !

7
50 ವರ್ಷದ ನಂತರ ಒಂದೆಡೆ ಕಲೆತು ಸಂಭ್ರಮಿಸಿದ ಸಕ್ರಿ ಶಾಲೆ ಹಳೆಯ ವಿದ್ಯಾರ್ಥಿಗಳು

ಶಾಲಾ ದಿನಗಳ ಸವಿ ಸವಿ ನೆನಪಿಗೆ ಚಿನ್ನದ ಮೆರುಗು.. !

Published:
Updated:
ಶಾಲಾ ದಿನಗಳ ಸವಿ ಸವಿ ನೆನಪಿಗೆ ಚಿನ್ನದ ಮೆರುಗು.. !

ಬಾಗಲಕೋಟೆ: ಅದು ಶಾಲಾ ದಿನಗಳ ನೆನಪಿಗೂ ಚಿನ್ನದ ಹಬ್ಬದ ಸಂಭ್ರಮ. ಐದು ದಶಕದ ಸುದೀರ್ಘ ಪಯಣದ ನಂತರ ಒಂದೆಡೆ ಕಲೆತ ಗೆಳೆಯರು, ಕಲಿಕೆಯ ದಿನಗಳನ್ನು ಮೆಲುಕು ಹಾಕಿದರು. ಅಕ್ಕ–ಪಕ್ಕ ಕುಳಿತು ಕಲಿತು, ನಲಿದ ಕ್ಷಣಗಳನ್ನು ಸ್ಮರಿಸಿಕೊಂಡರು. ಮೈದಡವಿ, ಕೈ ಹಿಡಿದು ಪರಸ್ಪರ ಆನಂದಬಾಷ್ಪ ಹರಿಸಿದರು.. ಸವಿ ಸವಿನೆನಪುಗಳನ್ನು ಅರಸುತ್ತಾ ಮುಖದಲ್ಲಿ ಸಾವಿರ ಭಾವಗಳ ಅರಳಿಸುತ್ತಾ ಖುಷಿಪಟ್ಟರು.ಇದು ಶನಿವಾರ ನಗರದ ವಿದ್ಯಾಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಹೈಸ್ಕೂಲ್‌ನಲ್ಲಿ ಕಂಡು ಬಂದ ಚಿತ್ರಣ.

ಶಾಲೆಯಲ್ಲಿ 1968ನೇ ಸಾಲಿನಲ್ಲಿ ಎಸ್ಎಸ್‌ಎಲ್‌ಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಬಂದಿದ್ದರು. ಹಳೆಯ ಗೆಳೆಯರನ್ನು ಕಾಣುವ ತವಕದಲ್ಲಿ ಕುಟುಂಬದವರನ್ನೂ ಕರೆತಂದಿದ್ದರು. ಪರಸ್ಪರರನ್ನು ಕಾಣುತ್ತಲೇ ಭಾವೋದ್ವೇಗಕ್ಕೆ ಒಳಗಾದರು. ಉದ್ಗಾರ ತೆಗೆದು ಅಪ್ಪಿಕೊಂಡರು. ಕೀಟಲೆ ಮಾಡಿ ನಕ್ಕು ನಲಿದರು. ಹಳೆಯ ವಿದ್ಯಾರ್ಥಿಗಳ ಈ ಅಪೂರ್ವ ಮಿಲನಕ್ಕೆ ಶಾಲೆಯ ಆಡಳಿತ ಮಂಡಳಿ ವೇದಿಕೆ ಕಲ್ಪಿಸಿತ್ತು. ಅವರಿಗಾಗಿ ಎರಡು ದಿನ (ಮೇ 19 ಹಾಗೂ 20) ಕಾರ್ಯಕ್ರಮ ಆಯೋಜಿಸಿತ್ತು. ಆ ಬ್ಯಾಚ್‌ನ ಸ್ಥಳೀಯ ವಿದ್ಯಾರ್ಥಿಗಳ ನೆರವು ಪಡೆದು ಇಲ್ಲಿ ಹಿಂದೆ ಕಲಿತವರ ವಿಳಾಸ ಹುಡುಕಿ ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಲಾಗಿತ್ತು.

ಈ ಬ್ಯಾಚ್‌ನ ಅನೇಕರು ಈಗ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರು ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳನ್ನು ಕಂಡಿದ್ದಾರೆ. ದೇಶ–ವಿದೇಶ ಸುತ್ತಿ ಬಂದಿದ್ದಾರೆ. ಆದರೆ ಆ ಎಲ್ಲಾ ಬಿಗುಮಾನಗಳನ್ನು ಮರೆತು ಸಮ್ಮಿಲನ ಸಮಾರಂಭದಲ್ಲಿ ಎಲ್ಲರೂ ಒಂದಾಗಿ ನಲಿದರು.

ಈ ವೇಳೆ ಮಾತನಾಡಿದ ಹಿರಿಯರಾದ ಎಂ.ಕೆ.ಕಲಬುರ್ಗಿ, ‘ಅಂದು ಪಠ್ಯ–ಪಠ್ಯೇತರ ಚಟುವಟಿಕೆಗಳಿಗೆ ಮಾತ್ರ ನಮ್ಮ ಶಾಲೆ ಮತ್ತು ಗುರು–ವೃಂದ ಸೀಮಿತವಾಗಿರಲಿಲ್ಲ. ಅದರೊಂದಿಗೆ ಸಾಮಾಜಿಕ ಚಿಂತನೆಗಳನ್ನು ಬಿತ್ತುತ್ತಿದ್ದರು. ಅದರ ಪರಿಣಾಮ ಆ ದಿನಗಳಲ್ಲಿ ಇಲ್ಲಿ ಕಲಿತ ನಾವೆಲ್ಲರೂ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದೇವೆ. ನಮ್ಮ ವಿದ್ಯಾರ್ಥಿ ಬದುಕಿನ ಘಳಿಗೆಗಳನ್ನು ಸ್ಮರಿಸಿಕೊಳ್ಳಲು ನೆರವು ನೀಡಿದ ಶಾಲೆಯ ಆಡಳಿತಕ್ಕೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಗುರುಗಳಿಗೆ ಸನ್ಮಾನ: ಮೊದಲ ದಿನ ಒಬ್ಬರಿಗೊಬ್ಬರು ಕಲೆತಿದ್ದ ಹಳೆಯ ವಿದ್ಯಾರ್ಥಿಗಳು ಭಾನುವಾರ ಕಲಿಸಿದ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು. ಆಗ ಇದ್ದ ಶಿಕ್ಷಕರ ಪೈಕಿ ಏಳು ಮಂದಿ ಬದುಕಿದ್ದು, ಅವರನ್ನು ಕರೆದು ಗೌರವಿಸಿದರು. ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್, ‘ಅಂದು ಇಲ್ಲಿ ಕಲಿತವರಲ್ಲಿ ಹಲವರು ವೈದ್ಯರು, ವಕೀಲರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಕೃಷಿಕರು ಆಗಿದ್ದಾರೆ. ಸಮಾಜದಲ್ಲಿ ತಮ್ಮದೇ ವರ್ಚಸ್ಸು ರೂಪಿಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಅವರೆಲ್ಲರನ್ನೂ ಕರೆದು ಬಾಲ್ಯದ ನೆನಪುಗಳಿಗೆ ಜಾರಲು ಅವಕಾಶ ಮಾಡಿಕೊಟ್ಟಿದ್ದು ನಮಗೂ ಖುಷಿ ತಂದಿದೆ. ಉಳಿದ ಬ್ಯಾಚ್‌ನವರೂ ಆಗಾಗ ಇಂತಹ ಸ್ಮರಣೀಯ ಕಾರ್ಯಕ್ರಮಗಳಿಗೆ ಸಂಸ್ಥೆಯನ್ನು ವೇದಿಕೆಯಾಗಿಸಿಕೊಳ್ಳಲಿ’ ಎಂದರು. ಈ ವೇಳೆ ಹಳೆಯ ವಿದ್ಯಾರ್ಥಿಗಳಾದ ಡಾ.ಎಸ್.ಕೆ.ನಾರಾ, ಡಾ.ಎಚ್.ಆರ್.ತೋಸನಿವಾಲ, ಎಸ್.ಕೆ.ಮಗಜಿ, ಅಜಿತ್ ಬೇತಾಳ, ಡಾ.ಸುರೇಶ ಹಂದ್ರಾಳ, ವೆಂಕಣ್ಣ ಮೆಳ್ಳಿಗೇರಿ, ಪರಿಮಳಾ ಪುರೋಹಿತ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry