ಸಿರಿಧಾನ್ಯ ಕಷಾಯ, ಜ್ಯೂಸ್‌ಗೆ ಹೆಚ್ಚಿದ ಬೇಡಿಕೆ

7
ಕಿರುಧಾನ್ಯ ಜಾಗೃತಿಯಲ್ಲಿ ತೊಡಗಿಸಿಕೊಂಡ ಕುಟುಂಬ

ಸಿರಿಧಾನ್ಯ ಕಷಾಯ, ಜ್ಯೂಸ್‌ಗೆ ಹೆಚ್ಚಿದ ಬೇಡಿಕೆ

Published:
Updated:
ಸಿರಿಧಾನ್ಯ ಕಷಾಯ, ಜ್ಯೂಸ್‌ಗೆ ಹೆಚ್ಚಿದ ಬೇಡಿಕೆ

ಬೀದರ್‌: ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳು ಕಡಿಮೆಯಾಗುತ್ತಿರುವ ಕಾರಣ ಇಲ್ಲಿಯ ಆದರ್ಶನಗರದ ಕುಟುಂಬವೊಂದು ಕಿರುಧಾನ್ಯಗಳ ಮಹತ್ವ ಅರಿತು ಆರು ವರ್ಷಗಳಿಂದ ಜನಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ.

ದೇಹದ ಬವಣೆ ನೀಗಿಸುವ ಸಿರಿಧಾನ್ಯಗಳ ಬಗೆಗೆ ಜನಪದರು ಹಾಗೂ ವಚನಕಾರರು ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಕಿರುಧಾನ್ಯದ ಮಹತ್ವ ವಿವರಿಸುವ ಗಾದೆಗಳೂ ಇವೆ. ಆದರೆ, ಪ್ರಾಯೋಗಿಕವಾಗಿ ಕಿರುಧಾನ್ಯಗಳನ್ನು ಬಳಸುವವರ ಸಂಖ್ಯೆ ವಿರಳ. ಅಮೃತಪ್ಪ ಅವರು ಮನೆಯಿಂದಲೇ ಜಾಗೃತಿ ಆರಂಭಿಸಿ ಈಗ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಸಿರಿಧಾನ್ಯಗಳಿಂದ ಹೊಸ ಹೊಸ ಉಪಾಹಾರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಪರಿಚಯಿಸುತ್ತಿದ್ದಾರೆ. ನೈಸರ್ಗಿಕ ಉಪಾಹಾರದ ಹೆಸರಲ್ಲಿ ಸಿರಿಧಾನ್ಯ ಬಳಸಿ ಇಡ್ಲಿ, ಉಪ್ಪಿಟ್ಟು, ವಡೆ, ಕಿಚಡಿ, ಗಂಜಿ, ಕಷಾಯ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದರ ಮಹತ್ವ ಅರಿತ ಜನರು ಇವರ ಬಳಿ ಸಾಲುಗಟ್ಟಿ ನಿಂತು ಅವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

‘ಅಧಿಕ ನಾರಿನಂಶ ಹಾಗೂ ಮಿಲೋಸ್‌ ಅಂಶವನ್ನು ಹೊಂದಿರುವ ಸಿರಿಧಾನ್ಯಗಳು ರಕ್ತಹೀನತೆ, ಜಠರದ ಕಾಯಿಲೆ, ಅಧಿಕ ರಕ್ತದೊತ್ತಡ, ಮೂತ್ರಕೋಶದಲ್ಲಿನ ಹರಳು, ಹೊಟ್ಟೆ ಹುಣ್ಣಿನ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ. ಅಷ್ಟೇ ಅಲ್ಲ ಹೃದಯದ ಕಾಯಿಲೆಗಳು ಮತ್ತು ಮಧುಮೇಹದ ಆತಂಕವನ್ನು ದೂರ ಮಾಡುತ್ತದೆ ಎನ್ನುವುದನ್ನು ತಜ್ಞರಿಂದ ಅರಿತುಕೊಂಡು ನಂತರ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅಮೃತಪ್ಪ ನೈಸರ್ಗಿಕ ಹೋಟಲ್‌ ಮಾಲೀಕ ಅಮೃತಪ್ಪ.

‘ವಾಯು ವಿಹಾರಕ್ಕೆ ಹೋಗಿ ಬರುವವರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ತುಳಸಿ ಕಷಾಯ, ಅಮೃತಬಳ್ಳಿ ರಸ, ಕಷಾಯ, ಸುಕಮಲಿ ಟೀ ಮಾಡಿ ಕೊಡುತ್ತೇವೆ. ಪ್ರತಿ ಸೋಮವಾರ ಹಾಗಲಕಾಯಿ, ಕರಬೇವು, ಹವೇಜ್‌, ಹಸಿಶುಂಠಿ, ಮೆಣಸಿನ ಕಾಳಿನಿಂದ ಕೂಡಿದ ಪಾನೀಯ ಸಿದ್ಧಪಡಿಸುತ್ತೇವೆ. ನರ ದೌರ್ಬಲ್ಯ ಇರುವ ಹಾಗೂ ಅಶಕ್ತರು ಸೇವಿಸುವುದರಿಂದ ಶಕ್ತಿ ಬರುತ್ತದೆ. ಹೀಗಾಗಿ ಇದಕ್ಕೆ ಬೇಡಿಕೆ ಇದೆ’ ಎನ್ನುತ್ತಾರೆ.

‘ನಮ್ಮ ಬಳಿ ನಿತ್ಯ ಕಡಿಮೆ ಅಂದರೂ 100 ಜನ ಕಷಾಯ ಇಲ್ಲವೆ ಪಾನೀಯ ಸೇವಿಸುತ್ತಾರೆ. ಸಾರ್ವಜನಿಕರಿಗೆ ಸೇವೆಯ ರೀತಿಯಲ್ಲಿ ಇವುಗಳನ್ನು ಒದಗಿಸುತ್ತಿದ್ದೇವೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಸಿರಿಧಾನ್ಯಗಳಲ್ಲಿ ಪ್ರೊಟಿನ್‌, ನಾರಿನಂಶ, ಬಿ ಕಾಂಪ್ಲೆಕ್ಸ್‌, ಅಮೈನೊ ಆಮ್ಲಗಳು, ಫೋಲಿಕ್‌ ಆಮ್ಲ, ವಿಟಮಿನ್‌ ಇ, ಕಬ್ಬಿಣ, ತಾಮ್ರ, ಫಾಸ್ಫರಸ್‌, ಪೊಟಾಷಿಯಂ, ಕ್ಯಾಲ್ಸಿಯಂ ವಿಫುಲವಾಗಿರುತ್ತವೆ. ಸಿರಿಧಾನ್ಯಗಳಲ್ಲಿ ಕೊಬ್ಬಿನಾಂಶವು ಕಡಿಮೆ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ರವಿ ದೇಶಮುಖ ವಿವರಿಸುತ್ತಾರೆ.

‘ಹರಪನಹಳ್ಳಿಯ ಗುರದತ್ತ ಗುರೂಜಿ, ರಾಯಚೂರಿನ ಯೋಗ ಗುರುಗಳ ಮಾರ್ಗದರ್ಶನ ಹಾಗೂ ಯೋಗ ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದುಕೊಂಡಿದ್ದೇವೆ. ನಾವು ಮೊದಲು ಚಿಕ್ಕ ಹೋಟೆಲ್‌ ನಡೆಸುತ್ತಿದ್ದೇವು.

ಈಗ ಸಿರಿಧಾನ್ಯ ಉಪಾಹಾರ ಹಾಗೂ ಜ್ಯೂಸ್‌ ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ. ಶ್ರಾವಣದಲ್ಲಿ ತಿಂಗಳ ಪೂರ್ತಿ ನಿತ್ಯ 100 ಜನರಿಗೆ ಉಚಿತ ಜ್ಯೂಸ್‌ ವಿತರಣೆ ಮಾಡುತ್ತೇವೆ. ಪ್ರತಿಯೊಬ್ಬರಿಗೂ ಸಿರಿಧಾನ್ಯದ ಮಹತ್ವ ಗೊತ್ತಾಗಬೇಕು. ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ಹೇಳುತ್ತಾರೆ.

**

ನೂಡಲ್ಸ್‌ ತಿನ್ನುವ ಮಕ್ಕಳಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ನಾರಿನಾಂಶ ಹಾಗೂ ಗ್ಲುಕೋಸ್‌ ಇರುವ ಕಿರುಧಾನ್ಯಗಳಿಂದ ಮಾಡಿದ ಆಹಾರ ಸೇವಿಸುವುದು ಉತ್ತಮ

– ರವಿ ದೇಶಮುಖ, ಕೃಷಿ ವಿಜ್ಞಾನ ಕೇಂದ್ರ ಅಧಿಕಾರಿ

ಅಮೃತಪ್ಪ ಅವರ ಮೊಬೈಲ್‌ ಸಂಖ್ಯೆ 90365 7348.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry