ಸಾಂಸ್ಕೃತಿಕ ಲೋಕಕ್ಕೆ ಕೊಂಡೊಯ್ದ ಶಿಬಿರ

6
ಮಕ್ಕಳ ಬೇಸಿಗೆ ಶಿಬಿರ: ಅಭಿನಯ, ನರ್ತನ, ಕುಶಲ ಕಲೆಯ ಅನಾವರಣ

ಸಾಂಸ್ಕೃತಿಕ ಲೋಕಕ್ಕೆ ಕೊಂಡೊಯ್ದ ಶಿಬಿರ

Published:
Updated:
ಸಾಂಸ್ಕೃತಿಕ ಲೋಕಕ್ಕೆ ಕೊಂಡೊಯ್ದ ಶಿಬಿರ

ಬೀದರ್‌: ಅಲ್ಲಿ ಏಕಾಗ್ರತೆ, ತನ್ಮಯತೆ, ಸಂತಸ ಹಾಗೂ ಸಂಭ್ರಮ ಮನೆ ಮಾಡಿತ್ತು. ಸಂಕೋಚ, ಭಯಕ್ಕೆ ಜಾಗ ಇರಲಿಲ್ಲ. ಗಂಡು, ಹೆಣ್ಣು ಎನ್ನುವ ಭೇದ ಭಾವವೂ ಇರಲಿಲ್ಲ. ಎಲ್ಲ ಮಕ್ಕಳಲ್ಲಿ ನೆಲೆಯೂರಿದ್ದ ಮಾನವೀಯತೆ ಭಾವ ಪ್ರತಿಫಲಿಸುವಂತೆ ಗೋಚರಿಸುತ್ತಿತ್ತು.

ಹೌದು! ಇದೆಲ್ಲವೂ ಸಾಧ್ಯವಾಗಿದ್ದು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ. ಪ್ರೇಕ್ಷಕರು ಹಾಗೂ ಪಾಲಕರು ಅಲ್ಲಿಗೆ ಬಂದು ಮಕ್ಕಳ ಆಟೋಟಗಳನ್ನು ವೀಕ್ಷಿಸುತ್ತಿದ್ದರು. ಆದರೆ, ಮಕ್ಕಳಿಗೆ ಇದಾವುದರ ಪರಿವೇ ಇರಲಿಲ್ಲ. ಮಕ್ಕಳು ಅಭಿನಯದಲ್ಲಿ ತೊಡಗಿ ತಮಗೆ ವಹಿಸಿಕೊಟ್ಟ ಪಾತ್ರಕ್ಕೆ ಜೀವ ತುಂಬುವಲ್ಲಿ ನಿರತರಾಗಿದ್ದರು. ಸಂಪನ್ಮೂಲ ವ್ಯಕ್ತಿಗಳು ನಿಬ್ಬೆರಗಾಗುವಂತೆ ಮಾಡಿದ್ದರು.

ಚಿಣ್ಣರಲ್ಲಿ ಅಡಗಿದ ಸುಪ್ತ ಕಲೆಗೆ ಹೊಸ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ಕಲಾವಿದರ ಬಳಗವು ಮಕ್ಕಳಿಗಾಗಿಯೇ ಉಚಿತವಾಗಿ ಆಯೋಜಿಸಿದ್ದ ಶಿಬಿರದಲ್ಲಿ ಕಂಡು ಬಂದ ದೃಶ್ಯವಿದು. ಎರಡನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿ ಗಳು ಆಸಕ್ತಿಯಿಂದ ಪಾಲ್ಗೊಂಡು ಯಕ್ಷಗಾನ, ನೃತ್ಯ, ಗಾಯನ ಹಾಗೂ ಕುಶಲ ಕಲೆಯ ಮೂಲಕ ಪ್ರತಿಭೆ ಅನಾವರಣಗೊಳಿಸಿದರು. ಆಯೋಜಕರು ಅಭಿನಯಕ್ಕೆ ಮುಕ್ತವಾಗಿಯೇ ಅವಕಾಶ ಕೊಟ್ಟಿದ್ದರಿಂದ ಮಕ್ಕಳ ಅಭಿನಯ ನಾವಿಣ್ಯ ರೂಪ ಪಡೆದುಕೊಂಡಿತ್ತು.

ಶಿಬಿರದಲ್ಲಿ 35 ಮಕ್ಕಳು ಪಾಲ್ಗೊಂಡಿದ್ದರು. ನಿರ್ದೇಶಕ ಡಿಂಗ್ರಿ ನರೇಶ ಹಾಗೂ ಹಾಗೂ ನರಸಿಂಹಯ್ಯ ಜಿ ಅವರು ಪ್ರಾತ್ಯಕ್ಷಿಕೆ ಮೂಲಕ ರಂಗ ಶಿಕ್ಷಣದ ವಿವಿಧ ಮಜಲುಗಳನ್ನು ಪರಿಚಯಿಸಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದ್ದು ಕಂಡು ಬಂದಿತು.

ಶೋಭಾ ಸಾಲಮಂಟಪ ಹಾಗೂ ಪಾರ್ವತಿ ಸೋನಾರೆ ರಚಿತ ‘ಅಕ್ಷರದ ನಕ್ಷತ್ರ’ ನಾಟಕ ನಿರ್ದೇಶನ ಮಾಡಿದ ಡಿಂಗ್ರಿ ನರೇಶ ಅವರು ಮಕ್ಕಳ ಹಾವಭಾವ, ದೈಹಿಕ ಭಾಷೆ, ವಾಕ್‌ಚಾತುರ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿ ಪಾತ್ರಗಳನ್ನು ವಹಿಸಿಕೊಟ್ಟಿದ್ದರು.

ಅಕ್ಷರ ಜಾಗೃತಿ, ಶಿಕ್ಷಣದ ಮಹತ್ವ, ಸಾಮಾಜಿಕ ವ್ಯವಸ್ಥೆ, ಲಿಂಗ ತಾರತಮ್ಯ, ಗ್ರಾಮ ಸಂಸ್ಕೃತಿ ಹಾಗೂ ಪರಿಸರ ಮಹತ್ವ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಲು ಪ್ರಯತ್ನಿಸಿದರು.

ಬಾಲಕಿಗೆ ಅಕ್ಷರ ಕಲಿಯಬೇಕು ಎನ್ನುವ ತವಕ. ತಂದೆಗೆ ಮಗಳನ್ನು ಶಾಲೆಗೆ ಕಳಿಸಿದರೆ ಏನು ಪ್ರಯೋಜನ ಎನ್ನುವ ಭಾವನೆ. ಬಾಲಕಿಯ ಮನದಾಳವನ್ನು ಕೇಳುವ ಒಬ್ಬ ವ್ಯಕ್ತಿಯೂ ಊರಲ್ಲಿ ಇಲ್ಲ. ಬಾಲಕಿ ಗುಬ್ಬಿ ಮರಿಯ ಮಳಿ ತನ್ನ ದುಃಖವನ್ನು ತೋಡಿಕೊಳ್ಳುತ್ತಾಳೆ. ಗುಬ್ಬಿಯಲ್ಲಿರುವ ಮಾನವೀಯತೆ ಯಾರೊಬ್ಬರಲ್ಲೂ ಕಾಣಸಿಗುವುದಿಲ್ಲ. ಶಾಲೆಯ ಶಿಕ್ಷಕ ಪಾಲಕರ ಒಪ್ಪಿಗೆ ಇಲ್ಲದೆ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ. ಒಮ್ಮೆ ಶಿಕ್ಷಕನ ಪತ್ನಿ ಅಸ್ವಸ್ಥಗೊಂಡಾಗ ಬಾಲಕಿ ಅವರ ನೆರವಿಗೆ ಬರುತ್ತಾಳೆ. ಇದರಿಂದ ಶಿಕ್ಷಕನ ಮನಸ್ಸು ಕರಗಿ ಬಾಲಕಿಯ ಮನೆಗೆ ಬಂದು ಮಗಳನ್ನು ಶಾಲೆಗೆ ಕಳಿಸುವಂತೆ ಪಾಲಕರ ಮನವೊಲಿಸುತ್ತಾರೆ. ಬಾಲಕಿಯ ಹಠಕ್ಕೆ ಮಣಿದು ತಂದೆ ಕೊನೆಗೂ ಶಾಲೆಗೆ ಕಳಿಸುತ್ತಾರೆ. ಇದು ಕಥಾ ಹಂದರ. ನಾಟಕದಲ್ಲಿ ಪ್ರಮುಖ ನಾಯಕಿಯಾಗಿ ನಗರದ ಸರಸ್ವತಿ ಶಾಲೆಯ ವಿದ್ಯಾರ್ಥಿನಿ ವಚನಾಂಬಿಕಾ ಗುರುಪಾದಪ್ಪ, ತಂದೆ ಪಾತ್ರದಲ್ಲಿ ನಾವದಗೇರಿ ಸಪ್ತಗಿರಿಯ ಜಾನ್ಸ್‌ನ್‌ ಮಾರುತಿ, ತಾಯಿ ಪಾತ್ರದಲ್ಲಿ ಅಮೂಲ್ಯ ಬಿರಾದಾರ, ಶಿಕ್ಷಕನ ಪಾತ್ರದಲ್ಲಿ ಯುನಿಕ್‌ ಪಬ್ಲಿಕ್‌ ಶಾಲೆಯ ಸುಮಿತ್‌ ಮುದಾಳೆ, ಸೂತ್ರಧಾರರಾಗಿ ಸಾಕ್ಷಿ

ದತ್ತಕುಮಾರ ಹಾಗೂ ನೀಲವೀರ್ ಬಲ್ಲೂರ್ ಮನೋಜ್ಞವಾಗಿ ಅಭಿನಯಿಸಿದರು.

ಕುಶಲ ಕಲೆಯ ಪರಿಚಯ

ನರಸಿಂಹಯ್ಯ ಜಿ ಅವರು ಮಕ್ಕಳಿಗೆ ನೈಸರ್ಗಿಕ ಬಣ್ಣ ಬಳಸುವಿಕೆ, ಮರಳಿನ ಕಲೆ, ಕೋಲಾಜ್ ಕಟಿಂಗ್, ಪೇಂಟಿಂಗ್, ಮುಖವಾಡ ತಯಾರಿಕೆ ಇತ್ಯಾದಿ ಕಲಾ ಪ್ರಕಾರಗಳಲ್ಲಿಯ ಸೃಜನಶೀಲತೆ ಪರಿಚಯಿಸಿದರು. ಮಕ್ಕಳ ಆಸಕ್ತಿ ಕೆರಳಿಸುವಂತೆ ಮಾಡಲು ಸ್ಥಳದಲ್ಲೇ ಇಲಿ ಮುಖವಾಡ, ಎತ್ತಿನ ಮುಖವಾಡ, ರಾಜನ ಕಿರೀಟ ತಯಾರಿಸಿದರು. ಅವುಗಳನ್ನು ಮಕ್ಕಳಿಗೆ ಹಾಕಿಕೊಳ್ಳಲು ಕೊಟ್ಟ ನಂತರವಂತೂ ಮಕ್ಕಳ ಖುಷಿಗೆ ಮಿತಿಯೇ ಇರಲಿಲ್ಲ.

**

ಮಾನವೀಯತೆಯನ್ನು ಜಾಗೃತಗೊಳಿಸುವುದು ನಾಟಕದ ಮೂಲ ಉದ್ದೇಶವಾಗಿದ್ದು, ಮಕ್ಕಳು ಅಭಿನಯದ ಮೂಲಕ ಅತ್ಯುತ್ತಮವಾಗಿ ನಿರೂಪಿಸಿದ್ದಾರೆ

ಡಿಂಗ್ರಿ ನರೇಶ ನಿರ್ದೇಶಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry