ಬಿರುಗಾಳಿ, ಮಳೆಗೆ ತತ್ತರಿಸಿದ ಜಿಲ್ಲೆ

7
ಜಿಲ್ಲೆಯಾದ್ಯಂತ ತಡರಾತ್ರಿ ಧಾರಾಕಾರ ಮಳೆ; ವಿದ್ಯುತ್‌ ವ್ಯತ್ಯಯ; ಜನಜೀವನ ಅಸ್ತವ್ಯಸ್ಥ

ಬಿರುಗಾಳಿ, ಮಳೆಗೆ ತತ್ತರಿಸಿದ ಜಿಲ್ಲೆ

Published:
Updated:
ಬಿರುಗಾಳಿ, ಮಳೆಗೆ ತತ್ತರಿಸಿದ ಜಿಲ್ಲೆ

ಗದಗ: ಶಿರಹಟ್ಟಿ, ಮುಳಗುಂದ, ಡಂಬಳ, ಮುಂಡರಗಿ, ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಬೆಳಗಿನ ಜಾವ 2 ಗಂಟೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಗಾಳಿಯ ಆರ್ಭಟಕ್ಕೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿದವು. ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ ವ್ಯಾಪ್ತಿಯಲ್ಲಿ ಮನೆಗಳಿಗೆ ಹೊದೆಸಲಾಗಿದ್ದ ತಗಡಿನ ಶೀಟ್‌ಗಳು ಹಾರಿಹೋಗಿವೆ. ಹಲವೆಡೆ ಮನೆಗಳಿಗೆ ಹಾನಿಯಾಗಿವೆ.

ಬೆಳಗಿನ ಜಾವ 3 ಗಂಟೆಗೆ ಗುಡುಗು ಸಿಡಿಲು ಸಹಿತ ಪ್ರಾರಂಭವಾದ ಮಳೆಯು 5 ಗಂಟೆಯವರೆಗೆ ಸುರಿಯಿತು. ಹುಲಕೋಟಿ, ಬಿಂಕದಕಟ್ಟಿ, ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಗಾಳಿಗೆ ಸಿಕ್ಕು ಕಟಾವಿಗೆ ಬಂದಿದ್ದ ಮಾವಿನ ಕಾಯಿಗಳು ನೆಲಕ್ಕುರುಳಿದ್ದು, ರೈತರಿಗೆ ತೀವ್ರ ಆರ್ಥಿಕ ಹಾನಿಯಾಗಿದೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದಿರುವುದರಿಂದ ಹೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೆಸ್ಕಾಂ ಸಿಬ್ಬಂದಿ ದಿನವಿಡೀ ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ವಿದ್ಯುತ್‌ ಪೂರೈಕೆ ವ್ಯತ್ಯಯಗೊಂಡು ಗ್ರಾಮಾಂತರ ಪ್ರದೇಶಗಳಲ್ಲಿ ಭಾನುವಾರ ಇಡೀ ದಿನ ಜನರು ತೊಂದರೆ ಅನುಭವಿಸಿದರು.

ಗದಗ: ಮಳೆಯಿಂದಾಗಿ ಗದಗ–ಲಕ್ಷ್ಮೇಶ್ವರ ರಸ್ತೆಯ ದೋಬಿಘಾಟ್ ಬಳಿ ರಸ್ತೆ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಭಾನುವಾರ ದುರಸ್ತಿ ಕಾರ್ಯ ಕೈಗೊಂಡರು.

ಮುಂಡರಗಿ: ಗಾಳಿಯ ರಭಸಕ್ಕೆ ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ವಸತಿ ನಿಲಯ ಸಮುಚ್ಛಯ, ತಾಲ್ಲೂಕು ಪಂಚಾಯ್ತಿ ಕಾರ್ಯಾಲಯ, ಬಿಎಸ್ಎನ್ಎಲ್ ಕಾರ್ಯಾಲಯದ ಹಿಂಭಾಗ, ಕೊಪ್ಪಳ ರಸ್ತೆ, ಹಳೆ ಎಪಿಎಂಸಿ ತರಕಾರಿ ಮಾರುಕಟ್ಟೆ ಪ್ರದೇಶಗಳಲ್ಲಿ 15ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

ಪಟ್ಟಣದ ಬಸವೇಶ್ವರ ನಗರದ ದುರುಗಪ್ಪ ರಾಮೇನಹಳ್ಳಿ ಅವರ ಮುನೆಯ ಮುಂದೆ, ಕೊಪ್ಪಳ ರಸ್ತೆಯ ಭೂಮರಡ್ಡಿ ಅವರ ಮನೆಯ ಸಮೀಪ ವಿದ್ಯುತ್ ಕಂಬ ನೆಲಕ್ಕುರುಳಿವೆ. ಅಶೋಕ ಹಂದ್ರಾಳ ಅವರ ಮನೆಯ ಮೇಲೆ ಬೇವಿನ ಗಿಡ ಬಿದ್ದಿದೆ. ಆದರೆ, ಗಾಳಿ, ಮಳೆ ಪ್ರಾರಂಭವಾಗುತ್ತಿದ್ದಂತೆ, ಮನೆಯ ಜನರೆಲ್ಲ ಮನೆಯ ಒಂದು ಬದಿಯಲ್ಲಿ ನಿಂತು, ಎಚ್ಚರಿಕೆ ವಹಿಸಿದ್ದರಿಂದ ಅನಾಹುತ ತಪ್ಪಿದೆ. ಕೋಟೆ ಭಾಗ, ಕಡ್ಲಿಪೇಟೆ, ಡಾ.ಬಿ.ಆರ್.ಅಂಬೇಡ್ಕರ್ ನಗರ, ಬ್ರಾಹ್ಮಣರ ಓಣಿ ಮೊದಲಾದ ಪ್ರದೇಶಗಳಲ್ಲಿ ಮನೆಗಳು ಜಖಂಡಗೊಂಡಿವೆ.

ತಾಲ್ಲೂಕಿನ ಹೆಸರೂರು, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳಿ, ಸಿಂಗಟಾಲೂರ, ಹಮ್ಮಿಗಿ ಮೊದಲಾದ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry