ಕೆರೆಯ ಒಡಲು ಸೇರುತ್ತಿರುವ ತ್ಯಾಜ್ಯ

7
ಕ್ರಮಕ್ಕೆ ಮುಂದಾಗದ ಪಂಚಾಯ್ತಿ

ಕೆರೆಯ ಒಡಲು ಸೇರುತ್ತಿರುವ ತ್ಯಾಜ್ಯ

Published:
Updated:
ಕೆರೆಯ ಒಡಲು ಸೇರುತ್ತಿರುವ ತ್ಯಾಜ್ಯ

ತಿಳವಳ್ಳಿ: ಕೆರೆಯ ನೀರಿನಲ್ಲಿ ತೇಲುವ ತ್ಯಾಜ್ಯ. ನೀರಿನಲ್ಲಿ ಕೊಳೆತ ತ್ಯಾಜ್ಯದಿಂದ ಇಡೀ ಪ್ರದೇಶದಲ್ಲಿ ಆವರಿಸಿರುವ ದುರ್ವಾಸನೆ. ಕೆರೆಯ ಏರಿಯ ಮೇಲೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ. ತಿಳಿವಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ದೊಡ್ಡಕೆರೆಯ ದುಸ್ಥಿತಿ ಇದು.

ಬ್ಯಾಡಗಿ ರಸ್ತೆಯಲ್ಲಿರುವ ದೊಡ್ಡಕೆರೆಯಲ್ಲಿ ಇಲ್ಲಿನ ಗ್ರಾಮ ಪಂಚಾಯ್ತಿಯವರು ಏಳು ವಾರ್ಡ್‌ಗಳಲ್ಲಿ ಸಂಗ್ರಹವಾಗುವ ಕಸವನ್ನು ಟ್ಯಾಕ್ಟರನಲ್ಲಿ ಹಾಗೂ ಕೆರೆ ಏರಿಯ ಬಳಿ ವಿಲೇವಾರಿ ಮಾಡುತ್ತಿದ್ದಾರೆ. ಜತೆಗೆ, ಸಮೀಪದಲ್ಲೇ ಇರುವ ಮದ್ಯದ ಅಂಗಡಿಯವರು ಸಹ ಕಸವನ್ನು ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಇದರಿಂದಾಗಿ, ಕೆರೆಯ ಅಂದಕ್ಕೆ ದಕ್ಕೆಯಾಗಿದೆ.

ಹೋಟೆಲ್‌ಗಳ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು, ಹಳೆಯ ಬಟ್ಟೆಗಳು, ಪ್ಲಾಸ್ಟಿಕ್ ಲೋಟಾ, ಕವರ್‌ಗಳು, ಅನುಪಯುಕ್ತ ಬಾಕ್ಸ್‌ಗಳು ಸೇರಿದಂತೆ ವಿವಿಧ ಬಗೆಯ ಕಸವನ್ನು ತಂದು ಸುರಿಯಲಾಗುತ್ತಿದೆ. ಮಳೆಗಾಲದಲ್ಲಿ ಈ ತ್ಯಾಜ್ಯ ಗಾಳಿ ಹಾಗೂ ಮಳೆಗೆ ಹರಿದುಕೊಂಡು ಕೆರೆಯನ್ನು ಸೇರಿ, ನೀರು ಮಲಿನಗೊಂಡು ದುರ್ವಾಸನೆ ಬೀರುತ್ತದೆ.

ಪಾದಚಾರಿಗಳ ಸಂಕಷ್ಟ:

ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಕೆರೆಯ ಬಳಿ ಬರುವ ಸಾರ್ವಜನಿಕರು, ಕಲುಷಿತ ಗಾಳಿ ಸೇವಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಕೆರೆ ಏರಿ ಮೇಲಿನ ರಸ್ತೆ ವಿಶಾಲವಾಗಿರುವುದರಿಂದ ಇದೇ ಮಾರ್ಗದಲ್ಲಿ ವಾಯು ವಿಹಾರಕ್ಕೆ ಬರುತ್ತೇವೆ. ಕೆರೆಯನ್ನು ದಾಟಿ ಮುಂದೆ ಒಂದೆರಡು ಕಿಲೋಮೀಟರ್‌ವರೆಗೂ ಹೋಗಿ ಬರುತ್ತೇವೆ. ಅಲ್ಲಿಂದ ಗ್ರಾಮಕ್ಕೆ ಬರಲು ಬೇರೆ ಮಾರ್ಗಗಳಿಲ್ಲ. ಅನಿವಾರ್ಯವಾಗಿ ಕೆರೆಯ ಏರಿಯ ಮೇಲೆಯೇ ಬರಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಹುಚ್ಚಪ್ಪ ವಡೆಯರ ಹೇಳಿದರು.

‘ಏರಿಯ ಮೇಲೆ ಸಾಗುವಾಗ ಮೂಗು ಮುಚ್ಚಿಕೊಂಡು ನಡೆಯಬೆಕು. ಕೆರೆ ದಾಟುವ ಹೊತ್ತಿಗೆ ಹೊಟ್ಟೆಯಲ್ಲಾ ತೊಳೆಸಿದಂತಾಗಿ, ವಾಂತಿ ಬಂದಂತಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ತಿಳವಳ್ಳಿ ಗ್ರಾಮ ಪಂಚಾಯ್ತಿ ಇದೀಗ ನೀರಿನ ಮೂಲಗಳಾದ ಕೆರೆ– ಹೊಂಡಗಳಿಗೆ ತ್ಯಾಜ್ಯಗಳನ್ನು ಎಸೆದು ಮಾಲಿನ್ಯ ಮಾಡುತ್ತಿದೆ. ಗ್ರಾಮದ ಸಿದ್ಧನ ಹೊಂಡಕ್ಕೆ ಗ್ರಾಮದ ಚರಂಡಿ ನೀರನ್ನು ಬಿಡಲಾಗುತ್ತಿದೆ. ಇದರಿಂದ ಹೊಂಡದ ನೀರನ್ನು ಯಾರು ಬಳಸದಂತಾಗಿದೆ. ಗ್ರಾಮದ ಮಧ್ಯ ಭಾಗದಲ್ಲಿರುವ ತಾವರೆ ಹೊಂಡಕ್ಕೂ ಕಳೆದ ವರ್ಷದಿಂದ ಚರಂಡಿ ನೀರನ್ನು ಹರಿಸಲಾಗುತ್ತಿದೆ’ ಎಂದು ದೊಡ್ಡಕೆರೆಯ ನಿವಾಸಿ ಮಧುಕರ ಹುನಗುಂದ ದೂರಿದರು.

‘ದೊಡ್ಡಕೆರೆಗೆ ಪಂಚಾಯ್ತಿ ಸೇರಿದಂತೆ, ಯಾರೂ ಕಸ ತಂದು ಹಾಕಬಾರದು. ಮೊದಲು ಪಂಚಾಯ್ತಿಯವರು ನಿಲ್ಲಿಸಬೇಕು. ಆನಂತರ, ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

**

ತಿಳಿವಳ್ಳಿ ಗ್ರಾಮದ ದೊಡ್ಡಕೆರೆಯ ಏರಿಯ ಮೇಲೆ ಕಸ ಹಾಕುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು

ಕುಮಾರ ಮಕರವಳ್ಳಿ, ಪಿಡಿಓ, ತಿಳವಳ್ಳಿ ಗ್ರಾಮ ಪಂಚಾಯ್ತಿ

- ಮಾಲತೇಶ ಆರ್. ಮಡಿವಾಳರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry