ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಯಾಳುಗಳ ಕೊರತೆ; ಯಂತ್ರಗಳ ಬಳಕೆ

ಅನಿವಾರ್ಯವಾಗಿ ಯಾಂತ್ರೀಕರಣದ ಮೊರೆ ಹೋಗುತ್ತಿರುವ ಮಲೆನಾಡಿನ ಅಡಿಕೆ ಬೆಳೆಗಾರು
Last Updated 21 ಮೇ 2018, 13:03 IST
ಅಕ್ಷರ ಗಾತ್ರ

ಸಿದ್ದಾಪುರ: ಈಗ ತಾಲ್ಲೂಕಿನಾದ್ಯಂತ ಚಾಲಿ ಅಡಿಕೆ ಸುಲಿಯುವ ಹಂಗಾಮು ಆರಂಭಗೊಂಡಿದೆ. ಅದರೊಂದಿಗೆ ಕೃಷಿ ಕೂಲಿಯಾಳುಗಳ ಸಮಸ್ಯೆಯೂ ಉಲ್ಬಣಗೊಂಡಿದೆ. ಹೀಗಾಗಿ ಈ ಕೆಲಸಕ್ಕೆ ಯಂತ್ರಗಳ ಬಳಕೆ ವ್ಯಾಪಕವಾಗ
ತೊಡಗಿದೆ.

ಹಣ್ಣಾದ ಅಡಿಕೆಯನ್ನು ಕೊಯ್ಲು ಮಾಡಿ, ಸಿಪ್ಪೆಯೊಂದಿಗೆ ಬಿಸಿಲಿನಲ್ಲಿ ಒಣಗಿಸಿದಾಗ ಚಾಲಿ ಅಡಿಕೆ ಸಿದ್ಧವಾಗುತ್ತದೆ. ಈ ರೀತಿ ಒಣಗಿದ ಅಡಿಕೆಯನ್ನು ಸುಲಿಯುವ ಕೆಲಸವನ್ನು ಬಹುತೇಕವಾಗಿ ಮಹಿಳೆಯರೇ ನಿಭಾಯಿಸುತ್ತಿದ್ದರು. ಕಡಿಮೆ ಜಮೀನು ಹೊಂದಿರುವರ ಕುಟುಂಬಗಳ ಮಹಿಳೆಯರು ಖುದ್ದು ಕೆಲಸ ಮಾಡಿದರೆ, ದೊಡ್ಡ ಹಿಡುವಳಿದಾರರು ಕೂಲಿಯಾಳುಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ.

ಕೃಷಿ ಕೂಲಿಕಾರರ ಕೊರತೆಯಿಂದ ಸಕಾಲದಲ್ಲಿ ಚಾಲಿ ಅಡಿಕೆ ಸಿದ್ಧಪಡಿಸಿ, ಮಾರುಕಟ್ಟೆಗೆ ಒಯ್ಯುವುದು ದಿನದಿಂದ ದಿನಕ್ಕೆ ಕಷ್ಟವಾಗತೊಡಗಿದೆ. ಇದರಿಂದ ಅಡಿಕೆ ಸುಲಿಯಲು ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿಯೂ ಚಾಲಿ ಅಡಿಕೆ ಸುಲಿಯುವುದಕ್ಕೆ ಹಲವು ಮಾದರಿಯ ಯಂತ್ರಗಳು ಲಭ್ಯ ಇವೆ. ಶುಲ್ಕ ಪಡೆದು ಚಾಲಿ ಅಡಿಕೆ ಸುಲಿದು ಕೊಡುವವರೂ ತಾಲ್ಲೂಕಿನಲ್ಲಿ ಇದ್ದಾರೆ. ರೈತರೇ ಮನೆಯಲ್ಲಿ ಇಟ್ಟುಕೊಳ್ಳಬಹುದಾದ ಯಂತ್ರಗಳೂ ಸಿಗುತ್ತವೆ.

‘ಮೂರರಿಂದ ಐದು ಎಕರೆ ಅಡಿಕೆ ತೋಟ ಹೊಂದಿರುವ ರೈತರಿಗೆ ಈ ಯಂತ್ರಗಳು ಸೂಕ್ತವಾಗುತ್ತವೆ’ ಎಂದು ತಮ್ಮ ಅನುಭವ ಹಂಚಿಕೊಂಡವರು ಹಣಜಿಬೈಲಿನ ರಾಜಾರಾಮ ಹೆಗಡೆ.

‘ಈ ಯಂತ್ರದಿಂದ ಒಂದು ತಾಸಿಗೆ 70 ಕೆ.ಜಿ ಚಾಲಿ ಅಡಿಕೆ ಸುಲಿಯಬಹುದು. ಮೂರು ಫೇಸ್ ವಿದ್ಯುತ್ ಸಂಪರ್ಕದಿಂದ ನಡೆಯುವ ಈ ಯಂತ್ರದಿಂದಾಗಿ ಕೂಲಿಯಾಳುಗಳ ಅವಶ್ಯಕತೆ ಇಲ್ಲ. ರೈತನೊಬ್ಬನೇ ಈ ಯಂತ್ರವನ್ನು ನಿಭಾಯಿಸಬಹುದು’ ಎನ್ನುತ್ತಾರೆ ಅವರು.

ಮೇಲಿನಿಂದ ಅಡಿಕೆ ಹಾಕಿದರೆ ಅದು ಸುಲಿದು, ಚೊಕ್ಕವಾಗಿ ಹೊರಬರುತ್ತದೆ. ಯಂತ್ರದ ಹಿಂಬದಿಯಲ್ಲಿ ಸಿಪ್ಪೆ ಬೀಳುತ್ತದೆ. ಸಣ್ಣ ಗಾತ್ರದ ಅಡಿಕೆಯನ್ನು ಮಾತ್ರ ಮತ್ತೊಮ್ಮೆ ಯಂತ್ರಕ್ಕೆ ಹಾಕಬೇಕಾಗುತ್ತದೆ. ಆ ಸಂದರ್ಭದಲ್ಲಿ ಸಣ್ಣ ಬ್ಲೇಡ್ ಅನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.

‘ಈ ಯಂತ್ರದಿಂದ (ಬಹುತೇಕ ಎಲ್ಲ ಮಾದರಿಯ ಯಂತ್ರಗಳಂತೆ) ಸುಲಿದ ಚಾಲಿ ಅಡಿಕೆಯಲ್ಲಿ ಬಿಳಿಗೋಟು ಮಾದರಿಯ ಅಡಿಕೆ ಇರುವುದಿಲ್ಲ. ಬಿಳಿಗೋಟಿನ ಮೇಲೆ ಇರುವ ಸಿಪ್ಪೆಯನ್ನು ಯಂತ್ರ ಸ್ವಚ್ಛಗೊಳಿಸುವುದರಿಂದ ಉತ್ತಮ ದರ್ಜೆಯ ಚಾಲಿ ಅಡಿಕೆಯ ಪ್ರಮಾಣ ಜಾಸ್ತಿ ದೊರೆಯುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ಇದರಲ್ಲಿ ಒಂದು ಕೆ.ಜಿ ಚಾಲಿ ಅಡಿಕೆ ಸುಲಿಯಲು ಸುಮಾರು ₹ 3ರಷ್ಟು ವಿದ್ಯುತ್ ವೆಚ್ಚವಾಗುತ್ತದೆ. ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕದಿಂದಲೂ ಚಾಲನೆಯಾಗುವಂತೆ ಯಂತ್ರವನ್ನು ಮಾರ್ಪಾಡು ಮಾಡಿಕೊಳ್ಳಬಹುದು. ಈ ಯಂತ್ರದ ಬೆಲೆ ₹ 85 ಸಾವಿರವಂತೆ.

ಯಂತ್ರದಿಂದ ಹೊರಬಂದ ಸಿಪ್ಪೆ ಪೂರ್ಣ ಪ್ರಮಾಣದಲ್ಲಿ ಪುಡಿಯಾಗಿರುವುದಿಲ್ಲ. ಆದ್ದರಿಂದ ಅದನ್ನು ಉರುವಲಾಗಿ ಉಪಯೋಗ ಮಾಡಬಹುದು. ಇಲ್ಲವಾದರೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೂ ಬಳಸಿಕೊಳ್ಳಬಹುದು. ಯಂತ್ರದ ಮೂಲಕ ಅಡಿಕೆ ಸುಲಿಯುವ ವಿಧಾನವನ್ನು ತಿಳಿದುಕೊಳ್ಳಲು ಆಸಕ್ತರು ತಮ್ಮನ್ನು ಮೊಬೈಲ್: 94812 76737 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

**
ಸ್ವಲ್ಪ ದೊಡ್ಡ ಜಮೀನು ಹೊಂದಿರುವ ಅಡಿಕೆ ಬೆಳೆಗಾರರಿಗೆ ಈ ಯಂತ್ರ ಹೆಚ್ಚು ಅನುಕೂಲಕರವಾಗಿದೆ. ಮನೆಯಲ್ಲಿರುವ ಮಹಿಳೆಯರಿಗೂ ಚಾಲನೆ ಮಾಡಲು ಸಾಧ್ಯವಿದೆ
-ಪ್ರಕಾಶ ಹೆಗಡೆ ಹಣಜಿಬೈಲ್, ಕೃಷಿಕ

ರವೀಂದ್ರ ಭಟ್ ಬಳಗುಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT