ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇಯಿಂದ ಮಂಗಳೂರು ತಲುಪಿದ 20 ಲಕ್ಷ ಬ್ಯಾರೆಲ್ ಕಚ್ಚಾತೈಲ

‘ಅಂತಿಮ ಹಂತದಲ್ಲಿ ಪಾದೂರು ಸಂಗ್ರಹಾಗಾರ ಕಾಮಗಾರಿ’
Last Updated 21 ಮೇ 2018, 13:15 IST
ಅಕ್ಷರ ಗಾತ್ರ

ಮಂಗಳೂರು: ಯುಎಇ ಅಬುದಾಬಿ ನ್ಯಾಶನಲ್ ಆಯಿಲ್ ಕಂಪನಿಯ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತ ಹಡಗು ಸೋಮವಾರ ಮಂಗಳೂರಿಗೆ ಬಂದಿದೆ. ತೈಲವನ್ನು ನಗರದಲ್ಲಿರುವ ಭೂಗತ ಕಚ್ಚಾತೈಲ ಸಂಗ್ರಹಾಗಾರದಲ್ಲಿ ಶೇಖರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ ಸುಧೀರ, ‘ಒಟ್ಟು 58.6 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಅಬುದಾಬಿ ಕಂಪನಿ ಇಲ್ಲಿ ಸಂಗ್ರಹಿಸಲಿದೆ. ಸೋಮವಾರ 20 ಲಕ್ಷ ಬ್ಯಾರೆಲ್ ಕಚ್ಚಾತೈಲ ಇಲ್ಲಿಗೆ ಬಂದಿದೆ. ಉಳಿದ ಕಚ್ಚಾತೈಲವನ್ನು ಮಳೆಗಾಲದ ನಂತರ ಪೂರೈಸಲು ಕಂಪನಿ ನಿರ್ಧರಿಸಿದೆ’ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಸಂಗ್ರಹಿಸಿದ ಕಚ್ಚಾತೈಲದ ಶೇ 30ರಷ್ಟನ್ನು ಅಬುದಾಬಿ ಕಂಪನಿಯು ಭಾರತೀಯ ತೈಲ ಸಂಸ್ಕರಣಾ ಘಟಕಗಳಿಗೆ ಮಾರಾಟ ಮಾಡಲಿದೆ. ಒಂದು ವೇಳೆ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾದಲ್ಲಿ ಈ ಕಚ್ಚಾತೈಲವನ್ನು ಭಾರತ ಸರ್ಕಾರ ಬಳಕೆ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮಂಗಳೂರಿನ ತೈಲ ಸಂಗ್ರಹಾಗಾರದಲ್ಲಿ ತಲಾ 7.5 ಲಕ್ಷ ಟನ್ ಸಾಮರ್ಥ್ಯದ ಎರಡು ಕೋಣೆಗಳಿದ್ದು, ಒಂದು ಕೋಣೆಯಲ್ಲಿ 7.5 ಲಕ್ಷ ಟನ್ ಕಚ್ಚಾತೈಲ ಸಂಗ್ರಹವಾಗಿದೆ. ಇನ್ನೊಂದು ಕೋಣೆಯಲ್ಲಿ ಅಬುದಾಬಿ ಕಂಪನಿಯ ತೈಲವನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಮೊದಲ ಹಂತದಲ್ಲಿ ವಿಶಾಖಪಟ್ಟಣ, ಮಂಗಳೂರು ಹಾಗೂ ಉಡುಪಿ ಪಾದೂರಿನಲ್ಲಿ ತೈಲ ಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದೆ. ವಿಶಾಖಪಟ್ಟಣ ಮತ್ತು ಮಂಗಳೂರಿನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಕಚ್ಚಾ ತೈಲ ಸಂಗ್ರಹಿಸಲಾಗುತ್ತಿದೆ. ಪಾದೂರಿನಲ್ಲಿ 25 ಲಕ್ಷ ಟನ್ ಸಾಮರ್ಥ್ಯದ ಸಂಗ್ರಹಾಗಾರದ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಸುಧೀರ ತಿಳಿಸಿದರು.

ಎರಡನೇ ಹಂತದಲ್ಲಿ ಪಾದೂರಿನಲ್ಲಿ ಹೆಚ್ಚುವರಿ 25 ಲಕ್ಷ ಟನ್ ಸಾಮರ್ಥ್ಯದ ಮತ್ತೊಂದು ಸಂಗ್ರಹಾಗಾರ ಹಾಗೂ ಒಡಿಶಾದ ಚಾಂಡಿಕೋಲನಲ್ಲಿ 40 ಲಕ್ಷ ಟನ್ ಸಾಮರ್ಥ್ಯದ ತೈಲ ಸಂಗ್ರಹಾಗಾರ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸರ್ಕಾರದ ಒಪ್ಪಿಗೆಗೆ ಕಾಯಲಾಗಿತ್ತಿದೆ ಎಂದು ಅವರು ತಿಳಿಸಿದರು.

ಅಬುದಾಬಿ ನ್ಯಾಶನಲ್ ಆಯಿಲ್ ಕಂಪನಿಯ ಮಾರುಕಟ್ಟೆ ನಿರ್ದೇಶಕ ಅಬ್ದುಲ್ಲಾ ಸಲೀಂ ಅಲ್ ದಹೇರಿ ಮಾತನಾಡಿ, ಸದ್ಯಕ್ಕೆ ಮಂಗಳೂರಿನಲ್ಲಿ ಕಚ್ಚಾತೈಲ ಸಂಗ್ರಹಿಸಲು ಕಂಪನಿ ನಿರ್ಧರಿಸಿದೆ. ಪಾದೂರು ಸಂಗ್ರಹಾಗಾರವನ್ನು ಇನ್ನಷ್ಟೇ ವೀಕ್ಷಿಸಲಿದ್ದು, ಭಾರತ ಸರ್ಕಾರ ಹಾಗೂ ಯುಎಇ ಸರ್ಕಾರಗಳು ನಿರ್ಧರಿಸಿದಲ್ಲಿ ಅಲ್ಲಿಯೂ ತೈಲ‌ ಸಂಗ್ರಹಣೆ ಮಾಡಬಹುದಾಗಿದೆ. ಈ ಕುರಿತು ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT