ಸಚಿವ ಸ್ಥಾನದ ಮೇಲೆ ಘಟಾನುಘಟಿಗಳ ಕಣ್ಣು

7
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ: ಇಬ್ಬರು ಶಾಸಕರಿಗೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು

ಸಚಿವ ಸ್ಥಾನದ ಮೇಲೆ ಘಟಾನುಘಟಿಗಳ ಕಣ್ಣು

Published:
Updated:

ಕೋಲಾರ: ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯ ಸಮ್ಮಿಶ್ರ ಸರ್ಕಾರ ರಚನೆ ಖಚಿತವಾದ ಬೆನ್ನಲ್ಲೇ ಜಿಲ್ಲೆಯಲ್ಲಿ ಎರಡೂ ಪಕ್ಷಗಳ ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್‌, ತಲಾ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದು, ಉಭಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಜಿಲ್ಲೆಗೆ ಈ ಬಾರಿ ಕನಿಷ್ಠ ಎರಡು ಸಚಿವ ಸ್ಥಾನ ಸಿಗಬಹುದೆಂದು ನಿರೀಕ್ಷಿಸಿದ್ದಾರೆ.

ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌, ಬಂಗಾರಪೇಟೆ ಮೀಸಲು ಕ್ಷೇತ್ರದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಶಾಸಕ ಎಚ್‌.ನಾಗೇಶ್ ಅವರ ಹೆಸರುಗಳು ಸಚಿವ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬರುತ್ತಿವೆ.

ನಾಗೇಶ್‌ ಅವರು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರಿಗೆ ದೂರದ ಸಂಬಂಧಿ. ಬೆಸ್ಕಾಂನಲ್ಲಿ ತಾಂತ್ರಿಕ ನಿರ್ದೇ

ಶಕರಾಗಿದ್ದ ಅವರು ‘ಕೈ’ ಪಾಳಯದ ಪ್ರಭಾವಿ ಶಾಸಕ ಡಿ.ಕೆ.ಶಿವಕುಮಾರ್‌ಗೆ ಪರಮಾಪ್ತರು. ಕಷ್ಟ ಕಾಲದಲ್ಲಿ ಬಿಜೆಪಿ ಜತೆ ಗುರುತಿಸಿಕೊಳ್ಳದೆ ಕೈ ಪಾಳಯದಲ್ಲಿ ಉಳಿದುಕೊಂಡು ಮೈತ್ರಿ ಸರ್ಕಾರ ರಚನೆಗೆ ನೆರವಾಗಿರುವ ನಾಗೇಶ್‌ ಅವರಿಗೆ ಸಚಿವ ಸ್ಥಾನ ಕೊಡಲು ವರಿಷ್ಠರು ಸಮ್ಮತಿಸಿದ್ದಾರೆ. ಇದಕ್ಕೆ ಜೆಡಿಎಸ್‌ ಪಾಳಯದಿಂದಲೂ ಸಹಮತ ವ್ಯಕ್ತವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಸಭಾಪತಿ ಸ್ಥಾನ?: ಪ್ರಸಕ್ತ ಚುನಾವಣೆಯು ಸೇರಿದಂತೆ ಶ್ರೀನಿವಾಸಪುರ ಕ್ಷೇತ್ರದಲ್ಲಿ ಆರು ಬಾರಿ ಗೆಲುವು ಸಾಧಿಸಿರುವ ರಮೇಶ್‌ಕುಮಾರ್‌, ಹಿಂದಿನ ಅವಧಿಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಅಲ್ಲದೇ, ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಭಾಗ್ಯವು ಒಲಿದಿತ್ತು. ಜಿಲ್ಲೆಯಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿರುವ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾರ್ಯಕರ್ತರು ಹಾಗೂ ಮುಖಂಡರು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.

ಆದರೆ, ರಮೇಶ್‌ಕುಮಾರ್‌ ಮತ್ತು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಸಂಬಂಧ ಉತ್ತಮವಾಗಿಲ್ಲ. ಹೀಗಾಗಿ ರಮೇಶ್‌ಕುಮಾರ್‌ಗೆ ಸಚಿವ ಸ್ಥಾನ ನೀಡಲು ಜೆಡಿಎಸ್‌ನಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಇದನ್ನು ಅರಿತಿರುವ ಕಾಂಗ್ರೆಸ್‌ ಪಾಳಯವು ರಮೇಶ್‌ಕುಮಾರ್‌ ಅವರನ್ನು ವಿಧಾನಸಭೆಯ ಸಭಾಪತಿ

ಯಾಗಿ (ಸ್ಪೀಕರ್‌) ಮಾಡುವಂತೆ ಜೆಡಿಎಸ್‌ ಮುಂದೆ ಹಕ್ಕೊತ್ತಾಯ ಮಂಡಿಸಲಿದೆ ಎಂದು ಗೊತ್ತಾಗಿದೆ. ರಮೇಶ್‌ಕುಮಾರ್ ಈ ಹಿಂದೆಯೂ ಸ್ಪೀಕರ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ತೀವ್ರ ಲಾಬಿ: ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಎಸ್‌.ಎನ್‌.ನಾರಾಯಣಸ್ವಾಮಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಘಟಕವು ಅವರ ಬೆನ್ನಿಗೆ ನಿಂತಿದ್ದು, ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದರೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷಗಾದಿ ಕೊಡುವಂತೆ ಪಟ್ಟು ಹಿಡಿದಿದೆ.

ಮುನಿಯಪ್ಪ ಲಾಬಿ: ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಮತ್ತು ಕೆಜಿಎಫ್‌ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಎಂ.ರೂಪಕಲಾ ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರು ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ರೂಪಕಲಾ ಅವರು ಸಂಸದ ಕೆ.ಎಚ್‌.ಮುನಿಯಪ್ಪರ ಪುತ್ರಿ.

ಕಾಂಗ್ರೆಸ್‌ ಹೈಕಮಾಂಡ್‌ಗೆ ಹತ್ತಿರದಲ್ಲಿರುವ ಮುನಿಯಪ್ಪ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಜತೆಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲೂ ಮೇಲುಗೈ ಸಾಧಿಸಿದ್ದ ಮುನಿಯಪ್ಪ ದೆಹಲಿ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಮಗಳಿಗೆ ಸಚಿವ ಸ್ಥಾನ ಕೊಡಿಸಲು ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್‌ನ ಮಹಿಳಾ ಕೋಟಾದಲ್ಲಿ ರೂಪಕಲಾ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಯಿದೆ.

ಕ್ಷಿಣಿಸಿದ ಸಾಧ್ಯತೆ: ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿರುವ ಏಕೈಕ ಶಾಸಕ ಕೆ.ಶ್ರೀನಿವಾಸಗೌಡರು ಸಹ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಅವರು ಈ ಹಿಂದೆ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯ ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಜತೆಗಿನ ಶ್ರೀನಿವಾಸಗೌಡರ ಸಂಬಂಧ ಹಳಸಿದ್ದು, ಅವರಿಗೆ ವರಿಷ್ಠರು ಮಣೆ ಹಾಕುವ ಸಾಧ್ಯತೆ ಕ್ಷಿಣಿಸಿದೆ.

**

ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5ರಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಕೊಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇವೆ

–ಕೆ.ಚಂದ್ರಾರೆಡ್ಡಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry