ಲಾರಿ ಹೊತ್ತ ರೆಕ್ಕೆ; ನೋಡಿದಿರೇನು ಪಕ್ಕ?

7

ಲಾರಿ ಹೊತ್ತ ರೆಕ್ಕೆ; ನೋಡಿದಿರೇನು ಪಕ್ಕ?

Published:
Updated:
ಲಾರಿ ಹೊತ್ತ ರೆಕ್ಕೆ; ನೋಡಿದಿರೇನು ಪಕ್ಕ?

ಬಸ್ಸಿನಲ್ಲಿ ಪ್ರಯಾಣಿಸುವಾಗ ಮಾರ್ಗದಲ್ಲಿ ಆಗಾಗ ಹಸ್ತಿ ದಂತದಂತೆ ತೋರುವ ಉದ್ದನೆಯ ಬೆಳ್ಳಗಿನ ವಸ್ತುವನ್ನು ಹೇರಿಕೊಂಡು ಸಾಗುವ ಲಾರಿಗಳನ್ನು ಕಂಡು ಅವು ಏನಿರಬಹುದು? ಎಲ್ಲಿಂದ ಬರುತ್ತವೆ? ಎಲ್ಲಿಗೆ ಸಾಗುತ್ತಿವೆ? ಎಂದು ಬಹುತೇಕರು ತಲೆ ಕೆಡಿಸಿಕೊಂಡು ಏನೂ ಅರ್ಥವಾಗದೇ ಸುಮ್ಮನಿದ್ದು ಬಿಟ್ಟಿರುತ್ತಾರೆ. ಅಂದಹಾಗೆ, ಅವುಗಳು ಬೇರೇನೂ ಅಲ್ಲ. ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸುವ ಪವನ ಯಂತ್ರದ ರೆಕ್ಕೆಗಳು.

ಈ ರೆಕ್ಕೆಗಳನ್ನು ಹೊತ್ತೊಯ್ಯುವ ಲಾರಿಗಳು ಬೇರಾವ ಮಾರ್ಗಗಳಲ್ಲಿಯೂ ಗೋಚರಿಸಲಾರವು. ಅವು ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಪ್ರಯಾಣಿಸುವಾಗ, ಅಂಕೋಲಾದಿಂದ ಹುಬ್ಬಳ್ಳಿಗೆ ಪ್ರಯಾಣಿಸುವಾಗ ಹಾಗೂ ಹುಬ್ಬಳ್ಳಿಯಿಂದ ದಾವಣಗೆರೆ ಮಾರ್ಗವಾಗಿ ಬೆಂಗಳೂರು ಪ್ರಯಾಣಿಸುವಾಗ ಮಾತ್ರ ಗೋಚರಿಸುತ್ತವೆ. ಏಕೆಂದರೆ ಈ ರೆಕ್ಕೆಗಳು ದಕ್ಷಿಣಕನ್ನಡ ಜಿಲ್ಲೆಯ ಪಡುಬಿದ್ರಿಯಲ್ಲಿ ತಯಾರಾಗುತ್ತವೆ. ಪಡುಬಿದ್ರಿಯಿಂದ ಈ ರೆಕ್ಕೆಗಳು ಅಂಕೋಲಾ, ಹುಬ್ಬಳ್ಳಿ, ಬೆಂಗಳೂರು ಮಾರ್ಗವಾಗಿ ತಮಿಳುನಾಡಿಗೆ ಸಾಗುತ್ತಿರುತ್ತವೆ. ರೆಕ್ಕೆಗಳನ್ನು ಹೊತ್ತು ಸಾಗುವ ಲಾರಿಯ ಚಾಲಕರಲ್ಲಿ ಅವುಗಳ ಕುರಿತು ವಿಚಾರಿಸಿದಾಗ ರಸವತ್ತಾದ ಮಾಹಿತಿ ಸಿಕ್ಕಿತು. ಅವು 40 ಮೀಟರ್‌, 42, 47, 53 ಹಾಗೂ ಒಮ್ಮೊಮ್ಮೆ 60 ಮೀಟರಿನಷ್ಟೂ ಉದ್ದವಿರುತ್ತವೆ. ಒಂದೊಂದು ರೆಕ್ಕೆಯೂ ಹತ್ತು ಟನ್‌ಗಳಷ್ಟು ತೂಗುತ್ತವೆ.

ಕಡಿದಾದ ತಿರುವು ಹಾಗೂ ಘಟ್ಟದ ವಲಯಗಳು ಬಂದಾಗ ಅಲ್ಲಿ ಈ ವಾಹನಗಳಿಗೆ ಸಾಗಲು ಆಗುವುದಿಲ್ಲ. ಆಗ ರೆಕ್ಕೆಗಳನ್ನು ಈ ಲಾರಿಯಿಂದ ಕೆಳಗಿಳಿಸಿ ಓರೆಯಾಗಿ ನಿಲ್ಲಿಸಿಕೊಂಡು ಕಡಿದಾದ ತಿರುವು, ಘಟ್ಟ ಇರುವಲ್ಲಿ ಸಾಗಿಸುವ ಸಲುವಾಗಿಯೇ ಇರುವ ವಿಶೇಷ ಯಂತ್ರ ಜೋಡಿಸಿರುವ ಇನ್ನೊಂದು ಲಾರಿಗೆ ಸಾಗಿಸಲಾಗುತ್ತದೆ. ಆ ಲಾರಿ ರೆಕ್ಕೆಯ ತುದಿಯನ್ನು ಮೇಲಕ್ಕೆತ್ತಿ ಜೋಡಿಸಿಕೊಂಡು ಎಲ್ಲಾ ಕಡಿದಾದ ತಿರುವು, ಘಟ್ಟಗಳನ್ನು ದಾಟಿದ ನಂತರ ಮತ್ತೆ ಕಳಚಿ ಮೊದಲಿನಂತೆ ಬೇರೆ ಲಾರಿಯಲ್ಲಿ ಅಡ್ಡ ಮಲಗಿಸಿ ಸಾಗಿಸುತ್ತಾರೆ. ಒಂದು ಪವನ ಯಂತ್ರಕ್ಕೆ ಮೂರು ರೆಕ್ಕೆಗಳು ಬೇಕಾಗುವುದರಿಂದ ಒಂದರ ಹಿಂದೆ ಒಂದರಂತೆ ಒಂದೇ ಅಳತೆಯ ರೆಕ್ಕೆಗಳನ್ನು ಹೊತ್ತ ಮೂರು ಮೂರು ಲಾರಿಗಳು ಒಟ್ಟೊಟ್ಟಾಗಿ ಸಾಗುತ್ತಿರುತ್ತೇವೆ.

ಹಗಲಿನಲ್ಲಿ ವಾಹನ ಸಂದಣಿ ಇರುವುದರಿಂದ ಏನಿದ್ದರೂ ಇವುಗಳ ಸವಾರಿ ರಾತ್ರಿಯಲ್ಲೇ ಆರಂಭವಾಗಿ ಬೆಳಗಾಗುತ್ತಲೇ ಸುರಕ್ಷಿತ ಸ್ಥಳದಲ್ಲಿ ನಿಂತು ಬಿಡುತ್ತವೆ. ಅವುಗಳ ಮುಂದಿನ ಪ್ರಯಾಣ ಪುನಃ ರಾತ್ರಿಯಾದಾಗಲೇ ಆರಂಭವಾಗುತ್ತದೆ. ರಾತ್ರಿ ಸಾಗುವಾಗ ಎದುರಿನಿಂದ ಬರುವ ವಾಹನಗಳಿಗೆ ಇದು ಪವನ ಯಂತ್ರದ ರೆಕ್ಕೆ ಹೊತ್ತ ಲಾರಿ ಎಂದು ಸುಲಭವಾಗಿ ಗುರುತಿಸುವಂತಾಗಲು ರೆಕ್ಕೆಯ ಆರಂಭದಿಂದ ಕೊನೆಯವರೆಗೂ ಬೆಳಗುವ ಬಲ್ಬಿನ ಸರ ಹಾಕಿ ಸಿಂಗರಿಸಿಕೊಂಡು ಸಾಗುತ್ತಿರುತ್ತವೆ.

ಪಡುಬಿದ್ರಿಯಿಂದ ತಮಿಳುನಾಡಿಗೆ ಸಾಗಲು ಸುಮಾರು 15 ದಿನಗಳು ಬೇಕಾಗುವುದರಿಂದ ಆ ವಾಹನದ ಚಾಲಕ ಸಿಬ್ಬಂದಿ ಲಾರಿಗಳು ನಿಂತಲ್ಲೇ ಅಡುಗೆ ತಯಾರಿಸಿ ಉಂಡು ಅದೇ ಲಾರಿಯ ಕೆಳಗಡೆ ತಾವೇ ನಿರ್ಮಿಸಿಕೊಂಡ ತೂಗು ಮಂಚದ ಮೇಲೆ ವಿಶ್ರಮಿಸಿಕೊಳ್ಳುತ್ತ ರಾತ್ರಿಯಾದದ್ದೇ ಮುಂದಿನ ಪ್ರಯಾಣಕ್ಕೆ ಅಣಿಯಾಗುತ್ತಾರೆ. ಪವನ ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗುವ ಈ ರೆಕ್ಕೆಗಳ ಯಾತ್ರೆಯ ಕಥೆ ಕೇಳಿದಾಗ ನಮ್ಮಲ್ಲೂ ವಿದ್ಯುತ್‌ ಸಂಚಾರವಾದಂತಹ ಅನುಭವವಾಯ್ತು! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry