ಜಾಗೃತಿಗಾಗಿ ಸೈಕಲ್‌ ಜಾಥಾ

7

ಜಾಗೃತಿಗಾಗಿ ಸೈಕಲ್‌ ಜಾಥಾ

Published:
Updated:
ಜಾಗೃತಿಗಾಗಿ ಸೈಕಲ್‌ ಜಾಥಾ

ಜಗತ್ತಿನ ಗಮನ ಸೆಳೆದ ಕಠುವಾ ಮತ್ತು ಉನ್ನಾವೋದಲ್ಲಿ ನಡೆದ ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಒಂದು ಹಂತದಲ್ಲಿ ವಿದೇಶದಲ್ಲಿಯೂ ಪ್ರತಿಭಟನೆಗೆ ಕಾರಣವಾಗಿತ್ತು. ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ನಿತ್ಯ ನಡೆಯುತ್ತಲೇ ಇದೆ.

ಇದನ್ನು ತಡೆಗಟ್ಟುವಲ್ಲಿ ಕಾನೂನು ಕೈ ಚೆಲ್ಲಿದೆ. ಯುವಕರಲ್ಲಿ ಮಾನಸಿಕ ಪರಿವರ್ತನೆಯಾಗಬೇಕು ಎಂಬುದು ಬಹುಜನರ ಅಭಿಪ್ರಾಯ. ಆದರೆ ವೈಯಕ್ತಿಕವಾಗಿ ಸಾಮಾಜಿಕ ಜಾಗೃತಿಗೆ ಮುಂದಾಗುವವರ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ, ಬೆಂಗಳೂರಿನ ಹದಿನೈದು ವರ್ಷದ ಬಾಲಕನೊಬ್ಬ ಅತ್ಯಾಚಾರದ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿದ್ದಾನೆ. ಮಕ್ಕಳಲ್ಲಿ ಭಯ ಹುಟ್ಟಿಸುವುದು ಮತ್ತು ಲೈಂಗಿಕ ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನಿಂದ ಮುಂಬೈವರೆಗೆ 1000 ಕಿಲೋ ಮೀಟರ್‌ ದೂರ ಸೈಕಲ್‌ ಯಾತ್ರೆ ಕೈಗೊಂಡಿದ್ದಾನೆ ಮಹರ್ಷಿ ಸಂಕೇತ್.

ಮೇ 21ರಂದು ಬೆಳಿಗ್ಗೆ 7ಕ್ಕೆ ಬೆಂಗಳೂರಿನಿಂದ ಸೈಕಲ್ ಏರಿ ಸಂಕೇತ್‌ ಹೊರಟಿದ್ದಾನೆ. ತುಮಕೂರು– ಸಿರಾ–ಚಿತ್ರದುರ್ಗ–ದಾವಣಗೆರೆ–ಬೆಳಗಾವಿ–ಕೊಲ್ಹಾಪುರ–ಸತಾರ–ಪುಣೆ–ಲೋನಾವಾಲಾ–ನವಿಮುಂಬೈ ಮಾರ್ಗದಲ್ಲಿ ಮುಂಬೈಗೆ ಸಾಗಿ ಅಲ್ಲಿ ಜಾಥಾ ಕೊನೆಗೊಳಿಸಲಿದ್ದಾನೆ. 

ಸಂಕೇತ್‌ ಚಿತ್ರ ಕಲಾವಿದ ಕೂಡಾ. ಚಿತ್ರಕಲೆಯ ಮೂಲಕವೂ ಜಾಗೃತಿ ಮೂಡಿಸುತ್ತಿದ್ದಾನೆ. ಏಳನೇ ತರಗತಿಯಲ್ಲಿರುವಾಗಲೇ ತನ್ನ ಚಿತ್ರಗಳ ಪ್ರದರ್ಶನ ನಡೆಸಿದ್ದಾನೆ.

‘ಮೊದಲಿನಿಂದಲೂ ನನಗೆ ಸೈಕ್ಲಿಂಗ್‌ ಇಷ್ಟ. ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್‌ನಲ್ಲಿಯೇ ಓಡಾಡುತ್ತೇನೆ. ನನಗೆ ನನ್ನ ಸೈಕಲ್‌ ಎಂದರೆ ಪ್ರೀತಿ. ಅದು ನನ್ನ ಆರೋಗ್ಯವನ್ನೂ ಕಾಪಾಡಿದೆ. ಹೀಗಾಗಿ ಸೈಕಲ್‌ ಜಾಗೃತಿಗೆ ಮುಂದಾದೆ. ನನ್ನ  ಸ್ನೇಹಿತರು ಕಾರಿನಲ್ಲಿ ಹಿಂಬಾಲಿಸಲಿದ್ದಾರೆ.

ಬೆಂಗಳೂರಿನಿಂದ ಮುಂಬೈ ತಲುಪುವರೆಗೂ ಮಾರ್ಗ ಮಧ್ಯೆ ಯುವಕರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಲಿದ್ದೇನೆ. ಇದರ ಜೊತೆ ಕರಪತ್ರ ಹಂಚುವುದು ಪೋಸ್ಟ್‌ರಗಳ ಪ್ರದರ್ಶನ ಮಾಡಲಿದ್ದೇನೆ’ ಎಂದು ಸಂಕೇತ್‌ ಹೇಳಿದ್ದಾನೆ.

ಈ ಅಭಿಯಾನ ಸೈಕಲ್‌ ಜಾಥಾದ ನಂತರವೂ ಮುಂದುವರಿಯಲಿದೆ ಎಂದಿರುವ ಸಂಕೇತ್‌, ಆಗಸ್ಟ್‌ನಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾನೆ. ಇಷ್ಟೇ ಅಲ್ಲ ಶಾಲೆ, ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಿದ್ದೇನೆ. ನನ್ನ ಈ ಕಾರ್ಯಕ್ಕೆ ಹಿರಿಯ ಕಲಾವಿದರಾದ ಎಂ.ಜಿ. ದೊಡ್ಡಮನಿ, ಶಾನ್‌ ರೇ, ಲೇಖಕಿ ಸಂಧ್ಯಾ ಮೆಂಡೋನ್ಸಾ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry