ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಗೆ ಬಾಯ್‌, ಸೇವೆಗೆ ಜೈ ಎಂದ ವೈದ್ಯ

Last Updated 21 ಮೇ 2018, 19:30 IST
ಅಕ್ಷರ ಗಾತ್ರ

‘ನಮ್ಮಲ್ಲಿ ಮಾಹಿತಿ ಹಕ್ಕು ಇದೆ. ಶಿಕ್ಷಣದ ಹಕ್ಕು ಇದೆ. ಆದರೆ ಆರೋಗ್ಯದ ಹಕ್ಕು ಎನ್ನುವ ಕಲ್ಪನೆಯೂ ಇಲ್ಲ. ದೇಶದ ಪ್ರತಿಯೊಬ್ಬರಿಗೂ ಕಡ್ಡಾಯ ಆರೋಗ್ಯದ ಹಕ್ಕಿರಬೇಕು. ಅದು ಕನಿಷ್ಠ ಪ್ರಾಥಮಿಕ ಆರೋಗ್ಯ ಕಾಪಾಡಿಕೊಳ್ಳಲಾದರೂ ಬೇಕಲ್ಲವೇ’...

ಹುಟ್ಟು ಬಡತನದಲ್ಲೇ ಬೆಳೆದ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಮಮದಾಪುರದವರಾದ ಡಾ.ಸುನೀಲ್ ಕುಮಾರ್ ಹೆಬ್ಬೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಬಿಟ್ಟು ತಮ್ಮದೇ ‘ಮಾತೃ ಸಿರಿ ಫೌಂಡೇಷನ್’ ಸಂಸ್ಥೆ ಸ್ಥಾಪಿಸಿಕೊಂಡು ಸಮಾಜಸೇವೆ ಮಾಡುತ್ತಿದ್ದಾರೆ. ಕಾರನ್ನು ತುಸು ಮಾಡಿಫೈ ಮಾಡಿಸಿಕೊಂಡು ಅದನ್ನೇ ಮೊಬೈಲ್ ಕ್ಲಿನಿಕ್ ಆಗಿ ಮಾಡಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಥಮ ಚಿಕಿತ್ಸೆಗೆ ಬೇಕಾಗುವ ಔಷಧಿ, ಕುರ್ಚಿ, ಟೇಬಲ್‌, ಥರ್ಮಾಮೀಟರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊಂದಿಸಿಕೊಂಡು ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ನಗರದ ಕೊಳೆಗೇರಿ ಪ್ರದೇಶಗಳು, ಅನಾಥ ಆಶ್ರಮ, ಸರ್ಕಾರಿ ಶಾಲೆಗಳು, ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೆ ಹೋಗಿ ವಾರದಲ್ಲಿ ಮೂರು ದಿನ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಅವರು 8 ವರ್ಷಗಳಿಂದ ಈ ಸೇವೆಯಲ್ಲಿ ತೊಡಗಿದ್ದಾರೆ.

ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೈತುಂಬ ಸಂಬಳ ಪಡೆದು ಕೆಲಸ ಮಾಡುತ್ತಿದ್ದೆ. ಅಲ್ಲಿಗಿಂತ ನೂರು ಪಟ್ಟು ಹೆಚ್ಚು ಖುಷಿ ಸಿಕ್ಕಿದ್ದು ಬಡವರು ‘ಥ್ಯಾಂಕ್ಸ್ ಡಾಕ್ಟರ್‌’ ಎಂದಾಗ ಎನ್ನುತ್ತಾರೆ ಸುನೀಲ್.

‘ಕೆಮ್ಮು, ನೆಗಡಿ, ಮೈಕೈನೋವು, ರಕ್ತದ ಏರೊತ್ತಡ, ಮಧುಮೇಹ ಮತ್ತು ಜ್ವರದ ಸಮಸ್ಯೆಗಳಿಗೆ ಉಚಿತ ತಪಾಸಣೆ, ಮಾತ್ರೆಗಳನ್ನು ನೀಡುತ್ತಿದ್ದೇನೆ. ಕ್ಯಾಂಪ್ ಪ್ರಾರಂಭಿಸಿದಾಗ ಎಲ್ಲರಿಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೆ. ಕ್ರಮೇಣ ಅದನ್ನು ದುರುಪಯೋಗಪಡಿಸಿಕೊಳ್ಳಲು ಶುರುಮಾಡಿದರು. ಹೀಗಾಗಿ, ವೈದ್ಯಕೀಯ ಸೇವೆ ಅವಶ್ಯಕತೆ ಇದೀಯೋ ಇಲ್ಲವೋ ಎಂಬುದನ್ನು ಖಾತರಿ ಮಾಡಿ ಬಳಿಕ ಸೇವೆ ನೀಡುತ್ತೇನೆ’.

‘ನಗರದೆಲ್ಲೆಡೆ 700ಕ್ಕೂ ಅಧಿಕ ಕ್ಯಾಂಪ್‍ಗಳನ್ನು ಆಯೋಜಿಸುವ ಮೂಲಕ ಉಚಿತವಾಗಿ ವೈದ್ಯಕೀಯ ಸೇವೆ ನೀಡಿದ್ದೇನೆ. ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇದು ನನಗೆ ಖುಷಿ ಕೊಟ್ಟಿದೆ. ತಿಂಗಳಿಗೆ ಬರುತ್ತಿದ್ದ ₹ 40 ಸಾವಿರ ರಿಂದ ₹50 ಸಾವಿರ ಸಂಬಳ ಬಿಟ್ಟು ಸಮಾಜ ಸೇವೆ ಮಾಡುತ್ತೇನೆ ಎಂದಾಗ ಆಪ್ತರಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ನನ್ನ ಮಾತು ಕೇಳಿ ಕೆಲವರು ವ್ಯಂಗ್ಯವಾಗಿ ನಕ್ಕಿದ್ದು ಉಂಟು. ಇಂದು ಅವರೆಲ್ಲರೂ ನನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಇದಕ್ಕಿಂತ ನನಗೆ ಬೇರೆ ಏನು ಬೇಕು’ ಎಂದರು ಸುನೀಲ್.

ಸುನೀಲ್ ಜತೆಗೆ 350ಕ್ಕೂ ಹೆಚ್ಚು ಸಮಾನ ಮನಸ್ಕ ವೈದ್ಯರು ತಮ್ಮ ಬಿಡುವಿನ ವೇಳೆ ಕ್ಯಾಂಪ್‍ಗಳಿಗೆ ಬಂದು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮತ್ತು ನರ್ಸ್‌ಗಳು ಸೇರಿ ವಿವಿಧ ವರ್ಗಗಳ 1,800 ಮಂದಿ ಸುನೀಲ್ ಅವರ ಕ್ಯಾಂಪ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ಇವರ ಸೇವಾ ಮನೋಭಾವಕ್ಕೆ ಮೆಚ್ಚಿ ಕೆಲ ಔಷಧ ಕಂಪನಿಗಳು ಉಚಿತವಾಗಿ ಔಷಧಿಗಳನ್ನು ಪೂರೈಸುತ್ತಿವೆ.

ಮೊದಲು ಒಮ್ಮೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೆವು. ಇದರಿಂದ ರೋಗಿಗಳ ಆರೋಗ್ಯದ ಬಗ್ಗೆ ನಿಗಾ ಇಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ರೋಗಿಗಳ ಆರೋಗ್ಯದ ಮೇಲೆ ನಿಗಾ ಇಡುವ ಉದ್ದೇಶದಿಂದ ನಮ್ಮಿಂದ ಚಿಕಿತ್ಸೆ ಪಡೆದವರಿಗೆ ‘ಆರೋಗ್ಯದ ಹಕ್ಕು’ ಕಾರ್ಡ್‌ಗಳನ್ನು ನೀಡಿದ್ದೇವೆ. ಆ ಕಾರ್ಡ್‌ಗಳಲ್ಲಿ ರೋಗಿಯ ಹೆಸರು, ರಕ್ತದ ಗುಂಪು, ಅವರಿಗಿರುವ ಸಮಸ್ಯೆಗಳ ಬಗ್ಗೆ ನಮೂದಿಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಅವು ಸಹಾಯಕ್ಕೆ ಬರುತ್ತವೆ’ ಎನ್ನುತ್ತಾರೆ ಸುನೀಲ್.

‘ನಾವು ಆರೋಗ್ಯ ಸೇವೆ ಒದಗಿಸಿದ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ. ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದ್ದು ಅಗತ್ಯ ಚಿಕಿತ್ಸೆ ನಿರಂತರವಾಗಿ ನೀಡುತ್ತಿದ್ದೇವೆ’ ಎಂದರು.

ಸಂಚಾರಿ ಆರೋಗ್ಯ ಸೇವೆ ಕ್ಯಾಂಪ್ ಮೂಲಕ ವರ್ಷಕ್ಕೆ 25 ಸಾವಿರ ಜನರಿಗೆ ಉಚಿತ ಪ್ರಥಮಿಕ ಚಿಕಿತ್ಸೆ ನೀಡುವ ಗುರಿ ಹೊಂದಿದ್ದೇವೆ. ಆ ಮೂಲಕ ಬಡವರಿಗೆ ಸಹಾಯಮಾಡುತ್ತಿದ್ದೇವೆ. ಇನ್ನು ಡಾಕ್ಟರ್‌ಗಳು ಮುಂದೆ ಬಂದು ಸಹಾಯ ಮಾಡಿದರೆ ಇನ್ನಷ್ಟು ಮಂದಿಗೆ ನೆರವಾಗಬಹುದು ಎನ್ನುತ್ತಾರೆ ಅವರು.

ಮೊಬೈಲ್ ಕ್ಲಿನಿಕ್ ಪರಿಕಲ್ಪನೆ ಹುಟ್ಟಿದ್ದು ಹೇಗೆ?
ಒಮ್ಮೆ ನಾನು ಹೊಸೂರು ರಸ್ತೆಯಲ್ಲಿ ಹೋಗುತ್ತಿದ್ದೆ. ಆಗ ಅಪಘಾತಕ್ಕೀಡಾದ ವ್ಯಕ್ತಿಯೊಬ್ಬ ರಸ್ತೆಯ ಮೇಲೆ ರಕ್ತಸ್ರಾವದಿಂದ ನರಳುತ್ತಿದ್ದ. ಆತನಿಗೆ ಕೂಡಲೇ ನಾನು ಪ್ರಥಮ ಚಿಕಿತ್ಸೆ ನೀಡಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದೆ. ಮೂರು ದಿನಗಳ ನಂತರ ವ್ಯಕ್ತಿಯೊಬ್ಬರು ಕರೆ ಮಾಡಿ, ‘ನೀವು ನನ್ನ ಮಗನ ಜೀವ ಉಳಿಸಿದ್ದೀರಿ ಸರ್. ನಿಮ್ಮನ್ನು ನೋಡಬೇಕು, ಮಾತನಾಡಬೇಕು’ ಎಂದು ಗೋಗರೆದರು. ವೈದ್ಯನಾದ ನಾನು ನನ್ನ ಕರ್ತವ್ಯ ಮಾತ್ರ ನಿರ್ವಹಿಸಿದ್ದೆ. ಅಷ್ಟಕ್ಕೆ ಅಪಘಾತಕ್ಕೀಡಾದ ವ್ಯಕ್ತಿಯ ಪೋಷಕರು ಮನೆಗೆ ಕರೆದು ನನಗೆ ಕೈ ಮುಗಿದು ಥ್ಯಾಂಕ್ಸ್ ಸಾರ್ ಅಂದರು. ಆ ಕ್ಷಣವೇ ನಾನು ಪ್ರತಿಷ್ಠಿತ ಕಂಪನಿಯ ಕೆಲಸ ಬಿಡುವ ನಿರ್ಧಾರಕ್ಕೆ ಬಂದೆ. ಆಗ ಪ್ರಾರಂಭವಾಗಿದ್ದೇ ಮೊಬೈಲ್ ಕ್ಲಿನಿಕ್ ಪರಿಕಲ್ಪನೆ ಎಂದರು ಸುನೀಲ್.

ಸಂಪರ್ಕ: 9741958428.

ಇಮೇಲ್‌: drsunilhebbi79@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT