‘ಮೊಬೈಲ್ ಲರ್ನಿಂಗ್ ವೀಕ್‌’ನಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು

7

‘ಮೊಬೈಲ್ ಲರ್ನಿಂಗ್ ವೀಕ್‌’ನಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು

Published:
Updated:
‘ಮೊಬೈಲ್ ಲರ್ನಿಂಗ್ ವೀಕ್‌’ನಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು

ಯುನೆಸ್ಕೊವು ಪ್ಯಾರಿಸ್‌ನ ತನ್ನ ಪ್ರಧಾನ ಕಚೇರಿಯಲ್ಲಿ ಈಚೆಗೆ ಆಯೋಜಿಸಿದ್ದ ‘ಮೊಬೈಲ್ ಲರ್ನಿಂಗ್ ವೀಕ್’ ಕಾರ್ಯಾಗಾರದಲ್ಲಿ ಬೆಂಗಳೂರಿನ ಸಹಕಾರನಗರದ ಟ್ರಿಯೊ ವರ್ಲ್ಡ್‌ ಅಕಾಡೆಮಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಈ ಮೂಲಕ ಪ್ರತಿಷ್ಠಿತ ಈ ಕಾರ್ಯಾಗಾರದಲ್ಲಿ ಮೊದಲ ಬಾರಿಗೆ ಪಾಲ್ಗೊಂಡ ವಿದ್ಯಾರ್ಥಿಗಳು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

‘ಸ್ಕಿಲ್ಸ್ ಫಾರ್ ಎ ಕನೆಕ್ಟೆಡ್ ವರ್ಲ್ಡ್’ ಎಂಬ ಘೋಷವಾಕ್ಯದಡಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು. ಆರ್ಥಿಕ ಮತ್ತು ಸಾಮಾಜಿಕ ಪ್ರಸಂಗಗಳಲ್ಲಿ ಡಿಜಿಟಲ್ ಕೌಶಲಗಳ ಪಾತ್ರ ಏನು ಎಂಬುದರ ಬಗ್ಗೆ ಇಲ್ಲಿ ಚರ್ಚಿಸಲಾಯಿತು. ವಿಶ್ವದ ನಾನಾ ದೇಶಗಳ ತಜ್ಞರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಾಗೂ ಈ ಕ್ಷೇತ್ರದಲ್ಲಿನ ತಮ್ಮ ಹೊಸ ಆವಿಷ್ಕಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ತಮ್ಮಲ್ಲಿನ ಹಲವಾರು ಗೊಂದಲಗಳ ಬಗ್ಗೆ ತಜ್ಞರ ಬಳಿ ಹೇಳಿಕೊಂಡು ಅವುಗಳನ್ನು ನಿವಾರಿಸಿಕೊಂಡಿದ್ದಾರೆ ನಮ್ಮ ವಿದ್ಯಾರ್ಥಿಗಳು. ಅಲ್ಲಿ ಅರಿತ ವಿಷಯಗಳ ಬಗ್ಗೆ ದೇಶಕ್ಕೆ ಹಿಂದಿರುಗಿ ತಮ್ಮ ಸಹಪಾಠಿಗಳಿಗೆ ತಿಳಿಸಿಕೊಟ್ಟಿದ್ದಾರೆ.

ಸಿಇಯುಪಿ ಎಂಬ ಸಂಸ್ಥೆಯು ಪ್ಯಾರೀಸ್‌ನಲ್ಲಿ ಏರ್ಪಡಿಸಿದ್ದ ಶಾಂತಿ ವಿಶ್ವವಿದ್ಯಾಲಯ ಸಮಾವೇಶದಲ್ಲೂ (ಶಾಂತಿ ಸಂದೇಶಗಳನ್ನು ವಿಶ್ವಕ್ಕೆ ಸಾರುವ ಕಾರ್ಯಕ್ರಮ) ಭಾಗಿಯಾಗಿದ್ದ ವಿದ್ಯಾರ್ಥಿಗಳು, ಪ್ರಸ್ತುತ ಸನ್ನಿವೇಶದಲ್ಲಿ ಜಗತ್ತಿಗೆ ಶಾಂತಿಯ ಅವಶ್ಯಕತೆ ಹಾಗೂ ಅನಿವಾರ್ಯತೆ ಎಷ್ಟರಮಟ್ಟಿಗೆ ಇದೆ ಎಂಬುದರ ಬಗ್ಗೆ ತಿಳಿದುಕೊಂಡಿದ್ದಾರೆ.

ಸಮಾವೇಶದ ಸಂಯೋಜಕ ಬ್ಯಾರಿಸ್ ವೈಸ್‌ಮೆನ್ ಅವರನ್ನು ವಿದ್ಯಾರ್ಥಿಗಳು ವೈಯಕ್ತಿಕವಾಗಿ ಸಂದರ್ಶನ ಮಾಡಿದ್ದಾರೆ. ಪ್ಯಾರೀಸ್‌ ಚೀಸ್‌ಗೆ ಖ್ಯಾತಿಯಾಗಿದ್ದು, ಅಲ್ಲಿ 400 ಬಗೆಯ ಚೀಸ್‌ಗಳನ್ನು ತಯಾರಿಸಲಾಗುತ್ತದೆ. ಚೀಸ್‌ ತಯಾರಿಕೆ ಸ್ಥಳಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಅವುಗಳ ತಯಾರಿಕೆ ಹಾಗೂ ವೈಶಿಷ್ಟ್ಯದ ಬಗ್ಗೆ ಅಧ್ಯಯನ ಮಾಡಿದ್ದಾರೆ. ತಾಂತ್ರಿಕ ಯುಗ ಮತ್ತು ತಂತ್ರಜ್ಞಾನಗಳ ಕ್ರಾಂತಿ ನಡುವೆ ಪ್ರಜಾತಂತ್ರಕ್ಕಿರುವ ವ್ಯಾಪ್ತಿ ಎಷ್ಟು ಹಾಗೂ ಅವುಗಳ ಧ್ಯೇಯೋದ್ದೇಶಗಳೇನು ಎಂಬ ವಿಚಾರವಾಗಿ ಏರ್ಪಡಿಸಲಾಗಿದ್ದ ಕಮ್ಮಟದಲ್ಲಿ, ಪ್ರಚಲಿತ ಪಠ್ಯೇತರ ವಿಚಾರಗಳನ್ನು ವಿದ್ಯಾರ್ಥಿಗಳು ಅರಿತುಕೊಂಡರು.

‘ಇಂಟರ್‌ನ್ಯಾಷನಲ್ ಬಾಕಾಲೋರಿಯೆಟ್’ (ಅಂತರರಾಷ್ಟ್ರೀಯ ಮಟ್ಟದ ಉನ್ನತ ಪಠ್ಯಕ್ರಮ) ಪಠ್ಯಕ್ರಮದ, ಸೃಜನಶೀಲ ಕ್ರೀಡಾ ಹಾಗೂ ಸೇವಾ ಚಟುವಟಿಕೆಗಳ ವಿಷಯಕ್ಕೆ ಸಂಬಂಧಪಟ್ಟಂತೆ ‘ಕ್ಯಾಸ್’ (ಕ್ರಿಯೆಟಿವಿಟಿ, ಆ್ಯಕ್ಟಿವಿಟಿ, ಸರ್ವೀಸ್) ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಪಠ್ಯದ ಬಗ್ಗೆ ತಿಳಿದುಕೊಂಡ ವಿದ್ಯಾರ್ಥಿಗಳು ದೇಶಕ್ಕೂ ಇಂತಹ ಪಠ್ಯಕ್ರಮ ಬೇಕು ಎಂದು ಅಭಿಪ್ರಾಯಪಟ್ಟರು.

ಫ್ರಾನ್ಸ್‌ನ ಕ್ಯಾಲೆ ನಗರದಲ್ಲಿರುವ ‘ಒಬೆಝ್ ದೇ ಮಿಗ್ರೋಂ’ ನಿರಾಶ್ರಿತರ ಸಹಾಯ ಕೇಂದ್ರಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ‘ಯೂಟೋಪಿಯಾ 56’ ಎಂಬ ಎನ್‌ಜಿಒ ಜೊತೆಗೂಡಿ ಸೇವಾ ಕಾರ್ಯಗಳಲ್ಲಿಯೂ ತೊಡಗಿ ಮಾನವೀಯತೆ ಮೆರೆದಿದ್ದಾರೆ.

ಅಮೃತಾಂಶು ರಾಮರತ್ನಂ, ‘ಪೂರ್ವಪ್ರಾಚ್ಯ, ಮಧ್ಯಪ್ರಾಚ್ಯ, ಆಫ್ರಿಕಾ, ಟರ್ಕಿ, ಆಫ್ಘಾನಿಸ್ತಾನ್ ಮತ್ತಿತರ ದೇಶಗಳ ನಿರಾಶ್ರಿತರು ಆ ಸಹಾಯ ಕೇಂದ್ರದಲ್ಲಿದ್ದರು. ಅವರ ಪರಿಸ್ಥಿತಿ ಕಂಡು ನೋವಾಯಿತು. ಅವರನ್ನು ಕಂಡ ಕೂಡಲೇ ನಮ್ಮಲ್ಲಿನ ಸೇವಾ ಮನೋಭಾವ ಜಾಗೃತಗೊಂಡಿತು. ಎನ್‌ಜಿಒ ಜತೆಗೂಡಿ ಸಹಾಯಕ್ಕೆ ನೆರವಾದೆವು’ ಎಂದರು.

ತುಷಾರ ಉರುಳ, ‘ನಿರಾಶ್ರಿತರ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಅವರ ಹಿನ್ನೆಲೆ ಕೆದುಕುತ್ತಾ ಹೋದಾಗ ಅವರ ಸ್ಥಿತಿಗತಿಯ ಬಗ್ಗೆ ಅರಿವಾಯಿತು. ಅಂಥವರ ಸೇವೆಗೆ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಚಾರ ಎಂದರು. ಅರ್ಜುನ್ ಹೆಗಡೆ, ‘ಯುನೆಸ್ಕೊ ಶೈಕ್ಷಣಿಕ ಹಾಗೂ ತಾಂತ್ರಿಕ ಕಮ್ಮಟಗಳಲ್ಲಿ ಭಾಗವಹಿಸಿದ್ದು ಅತ್ಯಂತ ಪ್ರಯೋಜನಕಾರಿಯಾಯಿತು. ಅಲ್ಲಿ ಪಡೆದ ಜ್ಞಾನವನ್ನು ಶಾಲೆಯ ಇತರ ವಿದ್ಯಾರ್ಥಿಗಳಿಗೂ ತಿಳಿಸಿಕೊಟ್ಟೆವು’ ಎಂದರು. 

ಕಾರ್ಯಾಗಾರದ ವಿಶೇಷ

ಯುನೆಸ್ಕೊವು ಅನೇಕ ವರ್ಷಗಳಿಂದ ಈ ಕಾರ್ಯಾಗಾರ ಆಯೋಜಿಸುತ್ತಾ ಬಂದಿದೆ. ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ನುರಿತ ತಜ್ಞರು ಪ್ರತಿವರ್ಷ ಈ ಕಾರ್ಯಗಾರದಲ್ಲಿ ಭಾಗಿಯಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಈ ಕ್ಷೇತ್ರಗಳಿಗೆ ಸಂಬಂಧಪಟ್ಟ ಪ್ರಸ್ತುತ ಸವಾಲುಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಹಾರಗಳನ್ನೂ ಕಂಡುಕೊಳ್ಳಲಾಗುತ್ತದೆ.

ಇದುವರೆಗೆ ತಜ್ಞರು ಹಾಗೂ ಎಲ್ಲ ದೇಶಗಳ ಅಧಿಕಾರಿಗಳಿಗೆ ಮಾತ್ರ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಮೂಡಿಸಲು ವಿದ್ಯಾರ್ಥಿಗಳಿಗೂ ಈ ಬಾರಿ ಅವಕಾಶ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುನೆಸ್ಕೊವು ಅರ್ಜಿ ಆಹ್ವಾನಿಸಿತ್ತು. ಆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ನಮಗೆ ಅವಕಾಶ ಸಿಕ್ಕಿತು.

*

ಸಂವಹನ, ತಾಂತ್ರಿಕ, ರಾಜತಾಂತ್ರಿಕ ವಿಷಯಗಳ ಹಾಗೂ ನಿರಾಶ್ರಿತರ ಬಗ್ಗೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪಠ್ಯಕ್ರಮದಲ್ಲಿ ಓದಿ ತಿಳಿಯುತ್ತಾರೆ. ಅದನ್ನು ಮರೆತುಬಿಡುವ ಸಾಧ್ಯತೆಯೂ ಇರುತ್ತದೆ. ಆದರೆ, ಪ್ರತ್ಯಕ್ಷ ಅನುಭವದ ಮೂಲಕ ತಿಳಿದರೆ ಅದು ವಿದ್ಯಾರ್ಥಿಗಳ ಜೀವನದಲ್ಲಿ ಕೊನೆಯವರೆಗೂ ಉಳಿದುಕೊಳ್ಳುತ್ತದೆ. ಹೀಗಾಗಿ, ಈ ಪ್ರವಾಸ ಕೈಗೊಂಡೆವು. ಕಲಿಕೆ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು ಎಂಬುದು ಅಕಾಡೆಮಿಯ ಉದ್ದೇಶ.

-ಚಾಂದನೀ, ಶಿಕ್ಷಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry