ಹೊಸ ಸರ್ಕಾರ: ಬೆಂಗಳೂರಿಗರ ನಿರೀಕ್ಷೆಗಳೇನು?

7

ಹೊಸ ಸರ್ಕಾರ: ಬೆಂಗಳೂರಿಗರ ನಿರೀಕ್ಷೆಗಳೇನು?

Published:
Updated:
ಹೊಸ ಸರ್ಕಾರ: ಬೆಂಗಳೂರಿಗರ ನಿರೀಕ್ಷೆಗಳೇನು?

ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ವಾರವಾಗಿದೆ. ಅಷ್ಟರಲ್ಲಿಯೇ 55 ಗಂಟೆ ಮಟ್ಟಿಗೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯೂ ಆಗಿದ್ದರು. ಅವರ ರಾಜೀನಾಮೆ ನಂತರ, ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಒಗ್ಗೂಡಿ ಸಮ್ಮಿಶ್ರ ಸರ್ಕಾರ ರಚಿಸುತ್ತಿವೆ. ಬುಧವಾರ ಪ್ರಮಾಣ ವಚನ ಸ್ವೀಕರಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಮತ ಚಲಾಯಿಸಿರುವ ನಗರದ ಜನರು ಹೊಸ ಸರ್ಕಾರದಿಂದ ಏನು ಬಯಸುತ್ತಿದ್ದಾರೆ?

ಸುಗಮ ಸಂಚಾರಕ್ಕೆ ಒತ್ತು ನೀಡಿ

ನಗರದಲ್ಲಿ ಸಂಚಾರ ಒತ್ತಡ ಅತಿಯಾಗಿದೆ. ಅದಕ್ಕೆ ಮೊದಲು ಪರಿಹಾರ ಹುಡುಕಿ, ಸುಗಮ ಸಂಚಾರಕ್ಕೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬೆಂಗಳೂರನ್ನು ಕಾಡದಂತೆ ಎಚ್ಚರವಹಿಸಬೇಕು. ಬೆಂಗಳೂರಿನ ಎಲ್ಲ ಭಾಗಕ್ಕೂ ಕಾವೇರಿ ನೀರು ಪೂರೈಸಬೇಕು. ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ ದೊರೆಯಬೇಕು. ಉದ್ಯೋಗದ ವಿಷಯದಲ್ಲಿ ಹೊರ ರಾಜ್ಯದ ವಲಸಿಗರಿಗೆ ಮಣೆ ಹಾಕವುದನ್ನು ನಿಲ್ಲಿಸಲು ಸರ್ಕಾರ ನೀತಿ ರೂಪಿಸಬೇಕು. ವಿದ್ಯುತ್‌ ಶುಲ್ಕ ಹೆಚ್ಚಿಸುವ ಸರ್ಕಾರ, ಅದಕ್ಕೆ ತಕ್ಕಂತೆ ತಡೆಯಿಲ್ಲದೆ, ನಿರಂತರ ವಿದ್ಯುತ್‌ ಪೂರೈಸಬೇಕು.

-ಭರತ್‌ ಕುಮಾರ್‌, ಸ್ವಉದ್ಯೋಗಿ, ಕಾಡುಗೋಡಿ

*

ಸ್ಥಿರ ಸರ್ಕಾರ ಬೇಕು

ನಮಗೆ ಐದು ವರ್ಷ ಪಾರದರ್ಶಕವಾಗಿ ಆಡಳಿತ ನಡೆಸುವ ಸ್ಥಿರ ಸರ್ಕಾರ ಬೇಕು. ಮತ್ತೊಂದು ಚುನಾವಣೆ ಎದುರಾಗಬಾರದು. ನಮ್ಮ ತೆರಿಗೆ ಹಣ ಸದ್ಬಳಕೆ ಆಗಬೇಕು. ಚುನಾವಣೆ ಹೆಸರಿನಲ್ಲಿ ನಮ್ಮ ತೆರಿಗೆ ಹಣ ಪೋಲಾಗಬಾರದು. ಬೆಂಗಳೂರಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂರಕ್ಷಿಸುವ ಕೆಲಸ ಆಗಬೇಕು. ರಸ್ತೆ ಅಗಲೀಕರಣ, ಮೆಟ್ರೊ ರೈಲು ಮಾರ್ಗ, ಮೇಲ್ಸುತುವೆ ನಿರ್ಮಾಣದ ಹೆಸರಿನಲ್ಲಿ ಪಾರಂಪರಿಕ ಕಟ್ಟಡ, ಸ್ಥಳಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು.

–ಸಿ.ರಂಗಸ್ವಾಮಿ,ಸಹಾಯಕ ಪ್ರಾಧ್ಯಾ‍ಪಕ

*

ಮಹಿಳಾ ಸಬಲೀಕರಣವಾಗಬೇಕು

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು. ಮಹಿಳಾ ಶೋಷಣೆ, ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ಬಲಿಷ್ಠಗೊಳಿಸಬೇಕು. ಮಹಿಳೆಯರಿಗೆ ಹೆಚ್ಚಿನ ಭದ್ರತೆ ಒದಗಿಸಿ, ಸುರಕ್ಷಿತವಾದ ವಾತಾವರಣ ಸೃಷ್ಟಿಸಬೇಕು. ಬಡತನದ ಕಾರಣದಿಂದ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸಾಹಿತ್ಯ, ಸಂಸ್ಕೃತಿ ಕಾರ್ಯಕ್ರಮಗಳಿಗೆ, ರಂಗಭೂಮಿ ಕಲಾವಿದರಿಗೆ ನಗರದ ಕಲಾಮಂದಿರಗಳು ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು. ಹಳೇ ಕಲಾಮಂದಿರಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಬೇಕು. ಹೊಸ ರಂಗಮಂದಿರಗಳನ್ನು ನಿರ್ಮಿಸಿ, ಕಲಾವಿದರ ಮತ್ತು ಕಲಾ ತಂಡಗಳ ತರಬೇತಿಗೆ ಸುಲಭವಾಗಿ ದೊರೆಯುವಂತೆ ವ್ಯವಸ್ಥೆ ರೂಪಿಸಬೇಕು.

-ನಯನಾ ಸೂಡ, ರಂಗಕರ್ಮಿ, ನಾಗರಬಾವಿ

*

ಉದ್ಯೋಗಾವಕಾಶ ಹೆಚ್ಚಿಸಿ

ಸರ್ಕಾರದ ಎಲ್ಲ ಇಲಾಖೆಗಳಲ್ಲೂ ತ್ವರಿತವಾಗಿ ನೇಮಕಾತಿಗಳು ಆಗಬೇಕು. ಈ ಮೂಲಕ ಯುವ ಸಮುದಾಯ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಖಾಸಗಿ ಉದ್ಯೋಗದಲ್ಲಿ ಹೆಚ್ಚಿನ ಸೇವಾ ಭದ್ರತೆಗೆ ಹೊಸ ನೀತಿಗಳನ್ನು ರೂಪಿಸಬೇಕು. ಉತ್ತಮ ರಸ್ತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡಬೆಕು. ಮಳೆ ಬಂದಾಗ ಅವಾಂತರಗಳು ಆಗದಂತೆ ನೋಡಿಕೊಳ್ಳಬೇಕು.

-ಎಲ್‌.ಎನ್‌.ನೇತ್ರಾ, ಉಪನ್ಯಾಸಕಿ, ಕೆ.ಆರ್‌.ಪುರ

*

ನೀರು ಶುದ್ಧೀಕರಣ ಘಟಕ ಸ್ಥಾಪಿಸಿ

ಮಳೆ ನೀರು ಕಾಲುವೆಗಳಲ್ಲಿ ಕಲುಷಿತ ಅಥವಾ ತ್ಯಾಜ್ಯದ ನೀರು ಹರಿಯದಂತೆ ನೋಡಿಕೊಳ್ಳಬೇಕು. ನಗರದ ಒಳಚರಂಡಿ ನೀರನ್ನು ವಿವಿಧೆಡೆ ಶುದ್ಧೀಕರಿಸಬೇಕು. ಇದಕ್ಕಾಗಿ ಹೆಚ್ಚಿನ ಕಡೆ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಬೇಕು. ಮಲಿನವಾಗಿರುವ ವೃಷಭಾವತಿಯಿಂದ ಶುದ್ಧಗೊಳಿಸಿ, ಪುನಶ್ಚೇತನಗೊಳಿಸಬೇಕು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಮಾಳ, ಗೋಕಟ್ಟೆ, ಕಲ್ಯಾಣಿಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ, ಅವುಗಳನ್ನು ಸಂರಕ್ಷಿಸುವ ಕೆಲಸ ತ್ವರಿತವಾಗಿ ಆಗಬೇಕು. ವಿಸ್ತಾರವಾಗಿ ನಗರೀಕರಣ ಆಗುವುದನ್ನು ತಪ್ಪಿಸಲು, ಬಹುಮಹಡಿ ವಸತಿ ಯೋಜನೆಗಳಿಗೆ ಹೆಚ್ಚು ಉತ್ತೇಜನ ನೀಡಬೇಕು. ಬೆಂಗಳೂರು ಕಾಂಕ್ರಿಟ್‌ ಕಾಡಾಗಿ ಬೆಳೆಯಲು ಬಿಡಬಾರದು.

-ಡಾ.ರೇಣುಕಾ ಪ್ರಸಾದ್‌, ಭೂಗರ್ಭಶಾಸ್ತ್ರಜ್ಞ, ಜ್ಞಾನಭಾರತಿ

*

ಬೇರೆ ನಗರಗಳನ್ನು ಬೆಳೆಸಿ

ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಯಾರಿಗೂ ನಿರಾಸೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಸ ಸರ್ಕಾರದ್ದು. ಇದರ ಜತೆಗೆ ಬೆಂಗಳೂರಿನ ಸಮೀಪದ ಜಿಲ್ಲೆಗಳನ್ನು ಹಾಗೂ ಉತ್ತರ ಕರ್ನಾಟಕದ ಕೆಲ ನಗರಗಳನ್ನು ಎರಡನೇ ಹಂತದ ನಗರಗಳಂತೆ ಅಭಿವೃದ್ಧಿಪಡಿಸಬೇಕು. ಬೆಂಗಳೂರಿನ ಮೆಟ್ರೊ ಮಾರ್ಗವನ್ನು ಇನ್ನಷ್ಟು ವಿಸ್ತರಿಸಬೇಕು. ಜತೆಗೆ ಹೆಚ್ಚು ಬೋಗಿಗಳನ್ನು ಅಳವಡಿಸಿ, ರಸ್ತೆ ಮೇಲಿನ ಒತ್ತಡವನ್ನು ತಗ್ಗಿಸಬೇಕು. ಮೆಟ್ರೊ ನಿಲ್ದಾಣಗಳಲ್ಲಿನ ಪಾರ್ಕಿಂಗ್‌ ಶುಲ್ಕ ದುಬಾರಿಯಾಗಿದ್ದು, ಅದನ್ನು ಕಡಿಮೆಗೊಳಿಸಲು ಹೊಸ ಸರ್ಕಾರ ನಿರ್ಧರಿಸಬೇಕು.

-ದರ್ಶನ್‌ ಜೈನ್‌, ಉದ್ಯಮಿ, ಜಯನಗರ

*

ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಿ

ಉತ್ತಮ ಸಾರಿಗೆ ಸೌಕರ್ಯ, ಒಳಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯ ವಿಲೇವಾರಿಗೆ ಹೊಸ ಸರ್ಕಾರ ಆದ್ಯತೆ ಕೊಡಬೇಕು. ನಗರದ ಅಂತರ್ಜಲ ಮಟ್ಟ ವೃದ್ಧಿಯಾಗುವಂತೆ ಕಾರ್ಯಕ್ರಮ ರೂಪಿಸಬೇಕು. ಶಾಲಾ ಮತ್ತು ಕಾಲೇಜು ಶಿಕ್ಷಣದ ಶುಲ್ಕ ಪೋಷಕರಿಗೆ ಹೊರೆಯಾಗದಂತೆ ನಿಗದಿಯಾಗಬೇಕು.

-ಕೆ.ಆರ್‌.ಮಂಜುನಾಥ್‌, ಪ್ರಾಂಶುಪಾಲರು, ಎಂಇಎಸ್‌ ಪಿಯು ಕಾಲೇಜು 

*

ನವೋದ್ಯಮಕ್ಕೆ ಉತ್ತೇಜನ ಬೇಕು

ಯಾವುದೇ ಸರ್ಕಾರ ಬರಲಿ, ನವೋದ್ಯಮಗಳ ಅಭಿವೃದ್ಧಿ ಕಡೆಗೆ ಗಮನ ಕೊಡಲಿ. ಇಲ್ಲಿನ ತೆರಿಗೆ ಹೊರೆ ಮತ್ತು ಕೆಲ ಕಾನೂನುಗಳಿಂದಾಗಿ ಹಲವು ಕಂಪನಿಗಳು ಬೇರೆ ದೇಶಗಳ ಕಡೆಗೆ ಗಮನ ಹರಿಸುತ್ತಿವೆ. ಬೆಂಗಳೂರು ದೇಶದ ಐಟಿ ರಾಜಧಾನಿ. ಹಾಗಾಗಿ ಇಲ್ಲಿ ನವೋದ್ಯಮಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸ್ಟಾರ್ಟ್‌ಅಪ್‌ಗಳು ದೇಶದ ಆರ್ಥಿಕ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಬೇಕು. ಅಗತ್ಯ ಮೂಲ ಸೌಕರ್ಯ ಒದಗಿಸಬೇಕು.

-ಹರ್ಷ್‌ದಂಧ್‌, ರೆಂಟ್‌ಷೇರ್‌ಡಾಟ್‌ಕಾಮ್‌ನ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry