ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ಗೆ ಸಿಗುವ ಸಾಧ್ಯತೆ

6
ಡಿ.ಕೆ.ಶಿ, ಎಂ.ಬಿ. ಪಾಟೀಲ್‌ಗೆ ಸಚಿವಸ್ಥಾನ: ದೇವೇಗೌಡರ ವಿರೋಧ

ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ಗೆ ಸಿಗುವ ಸಾಧ್ಯತೆ

Published:
Updated:
ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ಗೆ ಸಿಗುವ ಸಾಧ್ಯತೆ

ನವದೆಹಲಿ: ‘ಮೈತ್ರಿಕೂಟದ ಹೊಸ ಸರ್ಕಾರದಲ್ಲಿ ವಿಧಾನಸಭೆ ಸ್ಪೀಕರ್‌ ಸ್ಥಾನ ನಮಗೇ ಇರಲಿ’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೆರಡೂ ಪಟ್ಟು ಹಿಡಿದಿದ್ದು, ಕಾಂಗ್ರೆಸ್‌ಗೇ ಈ ಸ್ಥಾನ ಲಭಿಸುವ ಸಾಧ್ಯತೆಗಳಿವೆ.

ಆದರೆ, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಡಿ.ಕೆ. ಶಿವಕುಮಾರ್‌ ಮತ್ತು ಎಂ.ಬಿ. ಪಾಟೀಲ್‌ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬಾರದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ತಾಕೀತು ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

‘ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಕುರಿತ ಬೆಳವಣಿಗೆಗಳಲ್ಲಿ ಎಂ.ಬಿ. ಪಾಟೀಲ ಅವರ ನಡೆ ರಾಜ್ಯದ ವೀರಶೈವ ಸಮುದಾಯದ ಕಣ್ಣು ಕೆಂಪಗಾಗಿಸಿದೆ. ಮೊದಲೇ ನನ್ನನ್ನು ಲಿಂಗಾಯತ ವಿರೋಧಿ ಎಂದು ಬಣ್ಣಿಸಲಾಗಿದ್ದು, ಮತ್ತೆ ಆ ಕುರಿತ ಆರೋಪಗಳಿಗೆ ಎಡೆ ಮಾಡಿಕೊಡುವುದಕ್ಕೆ ಇಷ್ಟವಿಲ್ಲ’ ಎಂಬ ಕಾರಣದಿಂದ ದೇವೇಗೌಡರು ಎಂ.ಬಿ. ಪಾಟೀಲ ಅವರನ್ನು ಸಂಪುಟದಿಂದ ದೂರ ಇರಿಸುವಂತೆ ಬೇಡಿಕೆ ಇರಿಸಿದ್ದಾರೆ.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರನ್ನೂ ಸಂಪುಟಕ್ಕೆ ಸೇರಿಸಿಕೊಂಡರೆ, ಜೆಡಿಎಸ್‌ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ, ಅವರನ್ನೂ ಸಚಿವ ಸ್ಥಾನದಿಂದ ದೂರ ಇರಿಸುವಂತೆ ದೇವೇಗೌಡರು ಕಾಂಗ್ರೆಸ್‌ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಗಳ ಹಂಚಿಕೆಗೆ ಸಂಬಂಧಿಸಿದಂತೆ ಮಂಗಳವಾರ ಬೆಂಗಳೂರಿನಲ್ಲೇ ಅಂತಿಮ ಹಂತದ ಮಾತುಕತೆ ನಡೆಯಲಿದೆ. ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ನ ರಮೇಶಕುಮಾರ್‌ ಅವರಿಗೆ ಸಿಗಲಿದೆ. ಇದಕ್ಕೆ ಜೆಡಿಎಸ್‌ ಸಮ್ಮತಿಸಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ.

‘ಬುಧವಾರ ನಾನೊಬ್ಬನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಸಚಿವ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗಳ ಕುರಿತು ನಂತರವೇ ನಿರ್ಧಾರವಾಗಲಿದೆ’ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ಸಂಜೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಯಾರು ಸಚಿವರಾಗಲಿದ್ದಾರೆ ಎಂಬುದನ್ನು ಆಯಾ ಪಕ್ಷಗಳ ವರಿಷ್ಠರೇ ನಿರ್ಧರಿಸಲಿದ್ದಾರೆ. ಇದುವರೆಗೆ ಈ ಕುರಿತ ಚರ್ಚೆಗಳು ನಡೆದಿಲ್ಲ. ಸ್ಥಿರ ಸರ್ಕಾರ ರಚಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ’ ಎಂದು ಅವರು ಹೇಳಿದರು.

22 ರಾಜ್ಯಗಳ ಮುಖಂಡರಿಗೆ ಆಹ್ವಾನ: ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ದೆಹಲಿ, ಪಂಜಾಬ್‌ ಮುಖ್ಯಮಂತ್ರಿಗಳಾದ ಮಮತಾ ಬ್ಯಾಜರ್ಜಿ, ಪಿಣರಾಯಿ ವಿಜಯನ್‌, ಚಂದ್ರಬಾಬು ನಾಯ್ಡು, ಕೆ.ಚಂದ್ರಶೇಖರ ರಾವ್‌, ನಾರಾಯಣ ಸ್ವಾಮಿ, ಅರವಿಂದ್ ಕೇಜ್ರಿವಾಲ್, ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಗುಲಾಂ ನಬಿ ಆಜಾದ್‌, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ ಯಾದವ್‌, ಎನ್‌ಸಿಪಿಯ ಶರದ್‌ ಪವಾರ್‌ ಮತ್ತು ಶರದ್‌ ಯಾದವ್‌ ಸೇರಿದಂತೆ 22 ರಾಜ್ಯಗಳ ಮುಖಂಡರು ಬುಧವಾರ ವಿಧಾನಸೌಧದ ಎದುರು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry