ಬೆಟ್ಟದಷ್ಟು ಆರ್ಥಿಕ ಸವಾಲು

7
ಸಂಪನ್ಮೂಲ ಕ್ರೋಡೀಕರಣದ ಸಂಕಷ್ಟ: ವರ್ಷಾಂತ್ಯಕ್ಕೆ ಸಾಲಮೊತ್ತ ₹ 2.86 ಲಕ್ಷ ಕೋಟಿ!

ಬೆಟ್ಟದಷ್ಟು ಆರ್ಥಿಕ ಸವಾಲು

Published:
Updated:
ಬೆಟ್ಟದಷ್ಟು ಆರ್ಥಿಕ ಸವಾಲು

ಬೆಂಗಳೂರು: ಚುನಾವಣೆಗೆ ಮುನ್ನ ಜನರಿಗೆ ಭರಪೂರ ಭರವಸೆ ನೀಡಿರುವ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಅವೆಲ್ಲವನ್ನೂ ಈಡೇರಿಸಲು ಬೆಟ್ಟದಂತಹ ಸವಾಲುಗಳನ್ನು ಎದುರಿಸಬೇಕಾಗಿದೆ.

ಹಿಂದೆ ಆಡಳಿತ ನಡೆಸಿದ್ದ, ಈಗಿನ ಪಾಲುದಾರ ಪಕ್ಷ ಕಾಂಗ್ರೆಸ್‌ ಬಿಟ್ಟು ಹೋಗಿರುವ ಹೊರೆ ಕೂಡ ಅವರ ಹೆಗಲ ಮೇಲೇರಲಿದೆ. ತಮ್ಮ ಪಕ್ಷದ ಪ್ರಣಾಳಿಕೆಯ ಭರವಸೆಗಳನ್ನು ಮಾತ್ರವಲ್ಲದೇ, ಜತೆಗಾರ ಪಕ್ಷದ ಆಶ್ವಾಸನೆಗಳನ್ನೂ ಅನುಷ್ಠಾನ ಮಾಡಬೇಕಾದ ಅನಿವಾರ್ಯಕ್ಕೆ ಅವರು ಸಿಲುಕಲಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೆಲ್ಲವನ್ನೂ ಈಡೇರಿಸಲು ಮುಂದಾದರೆ ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಸಂಗ್ರಹಿಸುತ್ತಿರುವ ತೆರಿಗೆ ವರಮಾನ ಕೂಡ ಸಾಕಾಗುವುದಿಲ್ಲ! ಅಷ್ಟರಮಟ್ಟಿಗೆ ಸಂಪನ್ಮೂಲದ ಬಲ ಯೋಜನೆಗಳ ಅನುಷ್ಠಾನಕ್ಕೆ ಬೇಕಾಗಲಿದೆ. ಈ ಸವಾಲುಗಳ ತಂತಿಬೇಲಿಯನ್ನು ಅವರು ಹೇಗೆ ದಾಟಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

ಸಾಲ ಮಾಡುವುದು ಅನಿವಾರ್ಯ

‘ಸ್ವಂತ ತೆರಿಗೆ ಆದಾಯವೊಂದನ್ನೇ ಆಧರಿಸಿ ಇಷ್ಟೆಲ್ಲ ಭರವಸೆಗಳನ್ನು ಈಡೇರಿಸುವುದು ಕಷ್ಟ. ಇದಕ್ಕೆ ಕೇಂದ್ರ ಸರ್ಕಾರ, ಮುಕ್ತ ಮಾರುಕಟ್ಟೆ ಅಥವಾ ಖಾಸಗಿ ವಲಯದಿಂದ ಸಾಲ ಎತ್ತುವುದು ಅನಿವಾರ್ಯ’ ಎಂದು ಐಸೆಕ್‌ನ ಮಾಜಿ ನಿರ್ದೇಶಕ ಪ್ರೊ. ಆರ್.ಎಸ್‌.ದೇಶಪಾಂಡೆ ಪ‍್ರತಿಪಾದಿಸಿದರು.

‘ಕೇಂದ್ರ ಸರ್ಕಾರ ಅಪೇಕ್ಷಿತ ಮಟ್ಟದಲ್ಲಿ ಸಾಲ ನೀಡುವುದಿಲ್ಲ ಎಂದು ಹೇಳಿದರೆ ಅದು ರಾಜಕೀಯ ವಿಷಯವಾಗುತ್ತದೆ. ನೀರಾವರಿ ಯೋಜನೆಗಳಿಗೆ ಸಾರ್ವಜನಿಕ ಬಾಂಡ್ ಮೂಲಕ ಹಣ ಸಂಗ್ರಹಿಸಬಹುದು. ಆದರೆ, ಸಾಲಮನ್ನಾವನ್ನು ಸ್ವಂತ ಸಂಪನ್ಮೂಲದಿಂದಲೇ ಮಾಡಬೇಕಾಗುತ್ತದೆ. ಈಗಾಗಲೇ ಕರ್ನಾಟಕ ಸರ್ಕಾರ ಸಾಕಷ್ಟು ಸಾಲ ಮಾಡಿದೆ. ಇನ್ನೂ ಸಾಲ ಮಾಡುವುದು ರಾಜ್ಯದ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಸಮಂಜಸವಲ್ಲ. ಇಂತಹ ನಡೆ ಮತ್ತೊಂದು ಆರ್ಥಿಕ ಬಿಕ್ಕಟ್ಟಿಗೆ ದೂಡಬಹುದು’ ಎಂದು ಹೇಳಿದ್ದಾರೆ.

ಸಾಲದ ಹೊನ್ನ ಶೂಲ?: ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ₹ 53,000 ಕೋಟಿ ಸಾಲವನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಕೇವಲ 55 ಗಂಟೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಕೂಡ ₹ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿ, ರೈತರ ‘ವಿಶ್ವಾಸ’ ಗಳಿಸುವ ಯತ್ನ ಮಾಡಿದ್ದರು. ಹೀಗಾಗಿ, ಅಂತಹ ಭರವಸೆಯಿಂದ ಕುಮಾರಸ್ವಾಮಿ ಹಿಂದೆ ಸರಿಯುವ ಪರಿಸ್ಥಿತಿ ಕೂಡ ಈಗ ಇಲ್ಲವಾಗಿದೆ.

ಸಾಲಮನ್ನಾಕ್ಕೆ ಬೇಕಾಗುವ ಮೊತ್ತದ ಜತೆಗೆ, ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ಹೆಚ್ಚುವರಿಯಾಗಿ ₹ 10,508 ಕೋಟಿ ಹೊರೆ ಬೊಕ್ಕಸದ ಮೇಲೆ ಬೀಳಲಿದೆ.

ನೀರಾವರಿ ಯೋಜನೆಗಳಿಗೆ ₹ 1.5 ಲಕ್ಷ ಕೋಟಿ ಹಣ ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದು, ಪ್ರತಿವರ್ಷ ₹ 30,000 ಕೋಟಿ ನೀಡಬೇಕಾಗುತ್ತದೆ.

ಆರ್ಥಿಕತೆಯ ಲೆಕ್ಕವೇನು?: ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ 2018–19ರ ಆರ್ಥಿಕ ವರ್ಷದಲ್ಲಿ ಯಾವ ಮೂಲದಿಂದ ಎಷ್ಟು ಸಂಪನ್ಮೂಲ ಸಂಗ್ರಹವಾಗಲಿದೆ (ಪಟ್ಟಿಯಲ್ಲಿದೆ) ಎಂದು ವಿವರಿಸಿದ್ದರು.

ಈ ವೇಳೆ ಸದನದಲ್ಲಿ ಮಂಡಿಸಿದ್ದ ‘ಮಧ್ಯಮಾವಧಿ ವಿತ್ತೀಯ ಯೋಜನೆ’ ಯಲ್ಲಿ ಸರ್ಕಾರ ಮಾಡಲೇಬೇಕಾದ (ಬದ್ಧ) ವೆಚ್ಚಗಳೆಷ್ಟು ಎಂಬ ಮಾಹಿತಿಯನ್ನೂ ನೀಡಿದ್ದರು.

ಕೇಂದ್ರದ ತೆರಿಗೆಯಲ್ಲಿ ಸಿಗುವ ಪಾಲು, ಅನುದಾನ ಸೇರಿ ಆದಾಯದ ಮೊತ್ತ ₹ 1.62 ಲಕ್ಷ ಕೋಟಿಯಷ್ಟಾಗುತ್ತದೆ. ಖರ್ಚು ಕೂಡ ಅಷ್ಟೇ ಸರಿಸುಮಾರು ಇದೆ.

ರಾಜ್ಯ ಸರ್ಕಾರ ವಿಧಿಸುವ ಒಟ್ಟು ತೆರಿಗೆ (ವಾಣಿಜ್ಯ, ಅಬಕಾರಿ, ನೋಂದಣಿ, ಮೋಟಾರು ವಾಹನ) ₹ 1.03 ಲಕ್ಷ ಕೋಟಿಯಷ್ಟಿದೆ. ಏನೇ ಕಸರತ್ತು ಮಾಡಿದರೂ ಇದಕ್ಕಿಂತ ಹೆಚ್ಚಿನ ಹಣ ಹೊಂದಿಸಲು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ಇದೆ.

ಅನಿವಾರ್ಯವಾಗಿ ಮಾಡಲೇಬೇಕಾದ ವೇತನ ಪರಿಷ್ಕರಣೆ, ಕುಮಾರಸ್ವಾಮಿ ಭರವಸೆ ಕೊಟ್ಟಂತೆ ಸಾಲ ಮನ್ನಾ, ನೀರಾವರಿ ಯೋಜನೆಗೆ ಬೇಕಾಗುವ ಒಟ್ಟು ಮೊತ್ತವೇ ₹1 ಲಕ್ಷ ಕೋಟಿಗೆ ತಲು‍ಪಲಿದೆ. ಪೂರ್ಣ ಪ್ರಮಾಣದ ಸಾಲಮನ್ನಾ ಮಾಡಬೇಕಾದರೆ ಬೇರೆ ಆದಾಯ ಮೂಲವನ್ನು ಹುಡುಕಬೇಕಾದ ಇಕ್ಕಟ್ಟು ಸೃಷ್ಟಿಯಾಗಲಿದೆ.

ಈ ವರ್ಷ ಸ್ವಂತ ತೆರಿಗೆಯ ಒಟ್ಟು ಪ್ರಮಾಣದ ₹ 65,000 ಕೋಟಿಯಷ್ಟಿದೆ. ಹಿಂದೆ ಇದ್ದ ಪದ್ಧತಿಯಲ್ಲಿ ಶೇ 1ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಹೆಚ್ಚಿಸಿದರೂ ₹ 6,500 ಸಾವಿರ ಕೋಟಿ ನಿರೀಕ್ಷೆ ಮಾಡಬಹುದಿತ್ತು. ಆದರೆ, ಈಗ ಜಿಎಸ್‌ಟಿ ಬಂದಿರುವುದರಿಂದ ವ್ಯಾಟ್‌ ಹೆಚ್ಚಿಸುವಂತೆ ಇಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್‌ ರಾಜ್ಯದಲ್ಲಿ ಈಗಲೇ ದುಬಾರಿಯಾಗಿದೆ. ಮದ್ಯದ ಮೇಲೆಯೂ ದುಬಾರಿ ತೆರಿಗೆ ವಿಧಿಸಲಾಗುತ್ತಿದೆ. ಇವೆರಡನ್ನೂ ಹೆಚ್ಚಿಸಿದರೆ ಮತ್ತೆ ಜನವಿರೋಧ ಎದುರಿಸಬೇಕಾಗುತ್ತದೆ.

ಇನ್ನೊಂದು ಮೂಲ, ನೋಂದಣಿ ಮತ್ತು ಮುದ್ರಾಂಕ. ಈ ಶುಲ್ಕ ಕೂಡ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಧಿಕವಾಗಿಯೇ ಇದೆ. ಈಗಲೇ ರಿಯಲ್ ಎಸ್ಟೇಟ್‌ ಮಾರುಕಟ್ಟೆ ಕಷ್ಟಕ್ಕೆ ಸಿಲುಕಿದೆ. ಇನ್ನೂ ಹೆಚ್ಚಿಸಿದರೆ ಈ ಕ್ಷೇತ್ರದ ಸಂಕಷ್ಟ ಹಿಗ್ಗಿ ಹಣ ಹರಿಯುವಿಕೆ ಕಡಿಮೆಯಾಗಲಿದೆ.

ತಜ್ಞರು ಹೇಳುವುದೇನು?: ‘ಹಣ ಹೊಂದಿಸುವುದು ಕಷ್ಟ. ಆದರೆ, ಅಸಾಧ್ಯವಾದುದಲ್ಲ’ ಎಂದು ಹಣಕಾಸು ಇಲಾಖೆಯಲ್ಲಿ ಬಹಳಷ್ಟು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿರುವ, ಹೆಸರು ಹೇಳಲು ಇಚ್ಛಿಸದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ನೀರಾವರಿಗೆ ಖರ್ಚು ಮಾಡುವುದು ಬಂಡವಾಳ ವೆಚ್ಚವಾಗುವುದರಿಂದ ಅದನ್ನು ಸಾಲದ ರೂಪದಲ್ಲಿ ಪಡೆಯಬಹುದು. ಬೇರೆ ಜನಪ್ರಿಯ ಕಾರ್ಯಕ್ರಮಗಳ ಅನುದಾನ ಹಾಗೂ ಅನುತ್ಪಾದಕ ವೆಚ್ಚಗಳನ್ನು ಕಡಿತ ಮಾಡುವುದರಿಂದ ವೇತನ ಪರಿಷ್ಕರಣೆ ಹೊರೆ ಇಳಿಸಬಹುದು’ ಎನ್ನುತ್ತಾರೆ ಅವರು.

‘ಸಾಲಮನ್ನಾ ಮಾಡಲೇಬೇಕು ಎಂದು ನಿಶ್ಚಯಿಸಿದರೆ ನಿಜಕ್ಕೂ ಅದು ಕಷ್ಟದ ಹಾದಿ. ಸರ್ಕಾರದ ಬೇರೆ ಬೇರೆ ಸಂಸ್ಥೆಗಳಿಗೆ ಸಾಲ ಪಡೆದು ಅದನ್ನು ಹೊಂದಿಸಬಹುದು. ಪ್ರತಿ ವರ್ಷ ಇಂತಿಷ್ಟು ಮೊತ್ತ ಎಂದು ಅನುದಾನ ಒದಗಿಸಿ ಸಾಲವನ್ನು ತೀರಿಸಲು ಸಾಧ್ಯ. ಒಂದೇ ಬಾರಿ ಮನ್ನಾ ಮಾಡದೇ ಪ್ರತಿ ವರ್ಷವೂ ಒಂದಿಷ್ಟು ಪ್ರಮಾಣದಲ್ಲಿ ಮನ್ನಾ ಮಾಡುವ ದಾರಿಯನ್ನೂ ಅನುಸರಿಸಬಹುದು’ ಎಂಬುದು ಅವರ ಅಭಿಪ್ರಾಯ.

ಜೆಡಿಎಸ್ ಭರವಸೆ

* ಸಸಿ ನೆಟ್ಟು ಬೆಳೆಸುವ ಯೋಜನೆಯಡಿ ಗ್ರಾಮೀಣ ಯುವಕರಿಗೆ ತಿಂಗಳಿಗೆ ₹ 7–8 ಸಾವಿರ ಆದಾಯ ಸೃಜನೆ

* ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರಿದ ಮಹಿಳೆಯರಿಗೆ ತಿಂಗಳಿಗೆ ₹ 2,000 ಕುಟುಂಬ ನಿರ್ವಹಣಾ ವೆಚ್ಚ

* 65 ವರ್ಷ ಮೇಲಿನವರಿಗೆ ಈಗ ನೀಡುತ್ತಿರುವ ₹ 500 ಮಾಸಾಶನವನ್ನು ₹ 6,500 ಏರಿಸಲಾಗುವುದು

ಕಾಂಗ್ರೆಸ್ ಭರವಸೆ

* ಬಡ ಕುಟುಂಬದ ಯುವತಿ ಮದುವೆಯಾದರೆ 3 ಗ್ರಾಂ ತಾಳಿ

* 18–23ರ ವಯೋಮಾನದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್‌

ಆದಾಯದ ಮೂಲ (₹ ಕೋಟಿಗಳಲ್ಲಿ)

ರಾಜ್ಯದ ಸ್ವಂತ ಆದಾಯ;1,03,444

ಕೇಂದ್ರದ ತೆರಿಗೆಯಲ್ಲಿ ಪಾಲು;36,216

ಕೇಂದ್ರದ ಅನುದಾನ;14,942 ಕೋಟಿ

ತೆರಿಗೆಯೇತರ ಆದಾಯ;8,162

ಸಾಲದ ಮೂಲ;16,760 ಕೋಟಿ

......

ವಿವಿಧ ಮೂಲಗಳಿಗೆ ವೆಚ್ಚ (₹ ಕೋಟಿಗಳಲ್ಲಿ)

ಸಾಮಾಜಿಕ ಸೇವೆ; 64,193

ಆರ್ಥಿಕ ಸೇವೆ; 47,477

ಸಾಮಾನ್ಯ ಸೇವೆ; 44,932

ಸಹಾಯಧನ; 20,958

ನಗರ ಸ್ಥಳೀಯ ಸಂಸ್ಥೆಗಳಿಗೆ ಸಹಾಯಧನ; 8,212

ಸರ್ಕಾರ ಮಾಡಿದ ಸಾಲಕ್ಕೆ ಬಡ್ಡಿ ಪಾವತಿ; 11,086

......

ಈ ವರ್ಷದ ವೇತನ ವೆಚ್ಚ (₹ ಕೋಟಿಗಳಲ್ಲಿ)

ವೇತನ; 28,674 ಕೋಟಿ

ನಿವೃತ್ತಿ ವೇತನ:15,169

ಪರಿಷ್ಕರಣೆ ಬಳಿಕ ಹೆಚ್ಚುವರಿ; 10,508

ಒಟ್ಟು; 54,343

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry