ಆಕರ್ಷಣೆ ಇಲ್ಲದ ಕ್ಷೇತ್ರ

7

ಆಕರ್ಷಣೆ ಇಲ್ಲದ ಕ್ಷೇತ್ರ

Published:
Updated:

‘ಅಂಚಿಗೆ ಸರಿದವರು, ಮುಂಚೂಣಿಗೆ ಬರದವರು’ (ಪ್ರ.ವಾ., ಮೇ 16) ಲೇಖನದಲ್ಲಿ ಸಿ.ಜಿ. ಮಂಜುಳಾ ಅವರು ‘ಈ ಸ್ಪರ್ಧಾತ್ಮಕ ರಾಜಕೀಯ ಪ್ರಕ್ರಿಯೆಯಲ್ಲಿ ಮಹಿಳೆ ಪಾಲ್ಗೊಳ್ಳಲು ಅವಕಾಶಗಳೇ ಇಲ್ಲ ಎನ್ನುವಷ್ಟು ಮಟ್ಟಿಗೆ ಈ ಕ್ಷೇತ್ರ ಪುರುಷಮಯವಾಗಿರುವುದು ಪ್ರಜಾಪ್ರಭುತ್ವದ ಅಣಕ’ ಎಂದಿದ್ದಾರೆ. ಇದು ವಾಸ್ತವ ಅಲ್ಲ. ರಾಜಕೀಯದಲ್ಲಿರುವಷ್ಟು ಅವಕಾಶ ಮಹಿಳೆಗೆ ಬೇರೆಲ್ಲೂ ಇಲ್ಲ. ಅವಕಾಶವಿದೆ, ಸ್ಪರ್ಧಿಗಳು ತೀರಾ ಕಡಿಮೆ.

ರಾಜಕೀಯದಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿದ್ದರೂ ಅರ್ಹತೆಯುಳ್ಳವರು ಕಡಿಮೆ ಇದ್ದಾರೆ. ಆದ್ದರಿಂದಲೇ ಅಲ್ಲಿ ಕೊಳಕು, ಅಸಹ್ಯಗಳು ಕಣ್ಣಿಗೆ ರಾಚುತ್ತಿವೆ. ಈ ಗಂಭೀರ ವಸ್ತುಸ್ಥಿತಿಯನ್ನು ಎಲ್ಲ ಪಕ್ಷಗಳೂ ಎದುರಿಸುತ್ತಿವೆ.

ಇತರ ಹಲವು ಕ್ಷೇತ್ರಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಅವಕಾಶಗಳಿರುವುದಕ್ಕೆ ಅಲ್ಲೆಲ್ಲ ಅರ್ಹತೆಗೆ ಮನ್ನಣೆ ಲಭಿಸುತ್ತಿರುವುದೇ ಕಾರಣ. ರಾಜಕೀಯದಲ್ಲಿ ಅವಕಾಶಗಳಿದ್ದರೂ ಅಲ್ಲಿಗೆ ಸಲ್ಲುವ ಮಾನಸಿಕ ದೃಢತೆಯೇ ಬೇರೆ.

ಸಾಮಾಜಿಕ ವಿಷಯಗಳ ಗ್ರಹಿಕೆ, ಮಾತನಾಡುವ ಮತ್ತು ವಿಷಯ ಮಂಡಿಸುವ ಕಲೆ, ಮುನ್ನುಗ್ಗುವಿಕೆ, ಸ್ನೇಹದ ನಡೆ–ನುಡಿ, ಪಕ್ಷದ ಸಿದ್ಧಾಂತಗಳನ್ನು ಅಳವಡಿಸುವುದು, ಸಮಾಜದ ಬೇಕು– ಬೇಡಗಳನ್ನು ಅರಿಯುವುದೇ ಇಲ್ಲಿನ ಮುಖ್ಯ ಅರ್ಹತೆ. ಇಷ್ಟೇ ಅಲ್ಲದೆ, ಪಕ್ಷದ ಹಿರಿಯರು ತಮ್ಮನ್ನು ಗುರುತಿಸುವಷ್ಟರ ಮಟ್ಟಿಗೆ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೂ ಮುಖ್ಯ.

ಪ್ರತಿಭಟನೆಗಳಲ್ಲಿ ಘೋಷಣೆ ಕೂಗುವುದು, ರಸ್ತೆಗಳಲ್ಲಿ ಮುನ್ನುಗ್ಗುವುದೇ ಮುಂತಾದವು ಹೆಚ್ಚಿನ ಮಹಿಳೆಯರಲ್ಲಿ ಮುಜುಗರ ಉಂಟುಮಾಡುತ್ತವೆ. ಪಕ್ಷಗಳ ಸಭೆಗಳಲ್ಲೇ ಮಹಿಳೆಯರಿಗಾಗಿ ಮೀಸಲಿರುವ ಕುರ್ಚಿಗಳು ಖಾಲಿ ಇರಬೇಕಾದರೆ, ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಾದರೂ ಹೇಗೆ?

ಹೆಚ್ಚು ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರ ವಿಶ್ವಾಸ ಗಳಿಸಿದರೆ ರಾಜಕೀಯದಲ್ಲಿ ಪುರುಷರಿಗಿಂತ ಹೆಚ್ಚು ಅವಕಾಶಗಳು ಮಹಿಳೆಯರಿಗೆ ಇವೆ. ಮಹಿಳೆಯರಿಗೆ ಈ ತಿಳಿವಳಿಕೆ ಇದ್ದಂತಿಲ್ಲ. ಆದ್ದರಿಂದ ಮಹಿಳೆಯರ ಹಿಂದುಳಿಯುವಿಕೆಗೆ ‘ಪುರುಷಪ್ರಧಾನ ವ್ಯವಸ್ಥೆ ಕಾರಣ’ ಎನ್ನುವುದು ತಪ್ಪಾದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry