ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳ್ಳರು ಎಲ್ಲಿದ್ದಾರೆ?

Last Updated 21 ಮೇ 2018, 19:30 IST
ಅಕ್ಷರ ಗಾತ್ರ

‘ಮಕ್ಕಳ ಕಳ್ಳರು ಬಂದಿದ್ದಾರೆ’ ಎಂಬ ವದಂತಿ ರಾಜ್ಯದ ಎಲ್ಲೆಡೆ ಹಬ್ಬುತ್ತಿದೆ. ಅದಕ್ಕೆ ಅಮಾಯಕ ಭಿಕ್ಷುಕರು ಮತ್ತು ಅಲೆಮಾರಿಗಳು ಬಲಿಯಾಗುತ್ತಿದ್ದಾರೆ ಎಂಬುದೇ ಸದ್ಯದ ಅಸಂಗತ ಸಂಗತಿ.

ಈ ಬಗ್ಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಜನ ಹಂಚಿಕೊಳ್ಳುತ್ತಿರುವ ಫೋಟೊಗಳು ಮತ್ತು ವಿಡಿಯೊಗಳ ಸಾಚಾತನವನ್ನು ಮತ್ತು ಸ್ಥಳೀಯತೆಯನ್ನು ದೃಢೀಕರಿಸುವವರಿಲ್ಲ. ಆದರೆ ಅದು ‘ನಮ್ಮ ಊರಿನಲ್ಲೇ, ನಮ್ಮ ಓಣಿಯಲ್ಲೇ ನಡೆದಿದೆ’ ಎಂದು ಬಲವಾಗಿ ನಂಬುತ್ತಿರುವ ಜನ ಮಾತ್ರ, ಕಣ್ಣಿಗೆ ಬೀಳುವ ಅಪರಿಚಿತರನ್ನು, ಭಿಕ್ಷುಕರನ್ನು, ಅಲೆಮಾರಿ ವ್ಯಾಪಾರಿಗಳನ್ನು ಕನ್ನಡಿಗರಲ್ಲದ ಅನ್ಯರಾಜ್ಯದವರನ್ನು ಹುಚ್ಚಾಪಟ್ಟೆ ಬಡಿಯುತ್ತಿದ್ದಾರೆ.

ಬಡಿಯುತ್ತಿರುವವರು ಹೊಣೆಗಾರಿಕೆ ಹೊರುತ್ತಿಲ್ಲ. ಠಾಣೆಗೆ ಕರೆದೊಯ್ದ ಮೇಲೆ, ಬಡಿಸಿಕೊಂಡವರ ಮೇಲೆ ಸಿಆರ್‌ಪಿಸಿ 109 (ಅನುಮಾನಾಸ್ಪದ ಓಡಾಟ, ಅಪರಾಧ ಎಸಗುವ ಸಾಧ್ಯತೆ) ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲಾಗುತ್ತಿದೆ ಅಥವಾ ದೂರು ಕೊಡುವವರು ಇಲ್ಲ ಎಂದು ಪೊಲೀಸರು ಬಿಟ್ಟುಕಳಿಸುತ್ತಿದ್ದಾರೆ. ಬಡಿಸಿಕೊಂಡವರೂ ಏನು ಮಾಡಬೇಕು ಎಂದು ತೋಚದೆ, ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಲು ಧೈರ್ಯ ಸಾಲದೆ, ಇದ್ದ ಊರು– ಜಾಗ ಖಾಲಿ ಮಾಡುತ್ತಿದ್ದಾರೆ.

ಈ ವಿಸಂಗತಿಯನ್ನು ತಡೆಯಬೇಕಾದ ಸ್ಥಳೀಯ ಆಡಳಿತಗಳು, ಅದರಲ್ಲೂ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಾಲಿಕೆ, ಸ್ಥಳೀಯ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಮಾತ್ರ ಸಂವೇದನೆ ಇಲ್ಲದವರಂತೆ ವರ್ತಿಸುತ್ತಿದ್ದಾರೆ.

ತಿಪಟೂರಿನಿಂದ ಬೀದರ್‌ವರೆಗೆ, ಬಳ್ಳಾರಿಯಿಂದ ದೊಡ್ಡಬಳ್ಳಾಪುರದವರೆಗೆ ಯಾವ ಯಾವುದೋ ವಿಡಿಯೊಗಳು ಹರಿದಾಡುತ್ತಿವೆ.

ವ್ಯಕ್ತಿಯೊಬ್ಬನ ಕೈಕಾಲು ಕಟ್ಟಿ ಹಾಕಿ ಕಿವಿ, ಕತ್ತು ಕತ್ತರಿಸುವ ವೀಡಿಯೊ, ವ್ಯಕ್ತಿಯೊಬ್ಬನ ಎದೆ ಬಗೆಯುವ ವಿಡಿಯೊ, ‘ಇವರೇ ಮಕ್ಕಳ ಕಳ್ಳರು ನೋಡಿ’ ಎಂಬ ಅಡಿ ಸಾಲು ಹೊತ್ತ ನಾಲ್ವರು ಮುದುಕ– ಮುದುಕಿಯರ ಫೋಟೊ, ಅವರಲ್ಲಿ ಇಬ್ಬರು ಕೋಲೂರಿ ನಿಂತವರು... ಇವೆಲ್ಲ ಕೆಲವು ಉದಾಹರಣೆಗಳಷ್ಟೇ.

‘ಅಮಾಯಕರೊಬ್ಬರು ಸಿಕ್ಕರೆ ನಮ್ಮದೂ ಎರಡು ಗುದ್ದು ಇರಲಿ’ ಎಂಬ ನೀಚ ಭಾವನೆ ಸಮೂಹಸನ್ನಿಯಾಗಿ ಮಾರ್ಪಟ್ಟಿದೆ. ಎಷ್ಟರಮಟ್ಟಿಗೆ ಎಂದರೆ, ‘ಕೈಗೆ ಸಿಕ್ಕ ವ್ಯಕ್ತಿ ಎಲ್ಲಿಯವರು ಎಂಬುದನ್ನು ಸರಿಯಾಗಿ ವಿಚಾರಿಸಿ’ ಎಂಬ ಸ್ಥಳೀಯರ ಮಾತನ್ನೂ ಕೇಳದ ಜನ, ಎದುರಿನ ವ್ಯಕ್ತಿಗೆ ಮನಸೋ ಇಚ್ಛೆ ಹೊಡೆಯುತ್ತಿದ್ದಾರೆ. ಅದಕ್ಕೆ ‘ಮಕ್ಕಳ ಕಳ್ಳರು ಬಂದಿದ್ದಾರೆ’ ಎಂಬ ವದಂತಿಯೇ ಕುಮ್ಮಕ್ಕು ನೀಡುತ್ತಿದೆ.

ಈ ವದಂತಿ ಹುಟ್ಟಿದ್ದಾದರೂ ಎಲ್ಲಿಂದ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಆದರೆ ಅದು ಯಾವುದೋ ಊರು, ಹಳ್ಳಿಯ ಮೂಲೆಯಿಂದ ಹುಟ್ಟಿ, ಯಾರದೋ ವಾಟ್ಸ್‌ಆ್ಯಪ್‌ನಿಂದ ಫಾರ್ವರ್ಡ್‌ ಆಗಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿರುವುದಂತೂ ನಿಜ.

ಮಕ್ಕಳನ್ನು ಹೆತ್ತವರ ಆತಂಕ ಪ್ರಶ್ನಾತೀತ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ತಮ್ಮ ಮಗುವನ್ನು ಯಾವನೋ ವ್ಯಕ್ತಿ ಕದ್ದೊಯ್ಯಲು ಬಂದಿದ್ದಾನೆ ಎಂದು ಯಾರೋ ಹೇಳಿದರೆ ಅದನ್ನು ಸುಮ್ಮನೆ ನಂಬಿಬಿಡಬಹುದೇ? ಕಣ್ಗಾವಲಿನಲ್ಲಿ ಇರುವ ನಮ್ಮ ಎಳೆಯ ಮಕ್ಕಳನ್ನು ಇನ್ನಷ್ಟು ಭದ್ರಪಡಿಸುವ ಅವಕಾಶವೂ ನಮ್ಮ ಮುಂದೆ ಇದೆಯಲ್ಲವೇ ಎಂದು ಯಾವ ಪೋಷಕರೂ ಯೋಚಿಸುತ್ತಿಲ್ಲವೇ?

ಇರಲಿ, ಇಂಥ ಸನ್ನಿವೇಶದಲ್ಲಿ ಬಹುಸೂಕ್ಷ್ಮವಾಗಿಕಾರ್ಯಚಟುವಟಿಕೆ, ತಂತ್ರಗಾರಿಕೆಗಳನ್ನು ರೂಪಿಸಬೇಕಾದ ಪೊಲೀಸರು ಮಾತ್ರ ‘ಮಕ್ಕಳ ಕಳ್ಳರು ಬಂದಿಲ್ಲ. ಜನ ಭಯ ಬೀಳಬಾರದು’ ಎಂದು ಪ್ರಕಟಣೆ ನೀಡಿ, ದೂರವಾಣಿ ಸಂಖ್ಯೆಗಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತ ಪೊಲೀಸರೊಂದಿಗೆ ಸೇರಿ ಕಾರ್ಯಾಚರಣೆ ರೂಪಿಸಬೇಕಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕಿ ನೋಡಬೇಕಾಗಿದೆ.

ಏಕೆಂದರೆ, ರಾಜ್ಯದ ಹಲವು ಹಳ್ಳಿ, ಪಟ್ಟಣ, ನಗರಗಳಲ್ಲಿ ಇಂಥದ್ದೊಂದು ಸುಳ್ಳು ಸುದ್ದಿ ಜ್ವಾಲೆಯಂತೆ ಹಬ್ಬುತ್ತಿರುವಾಗ, ಅದು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿರುವಾಗ, ಅದಕ್ಕೆ ಅಮಾಯಕರು ಬಲಿಯಾಗುತ್ತಿರುವಾಗ ಅವರ ಉಪಸ್ಥಿತಿ, ತಂತ್ರಗಾರಿಕೆಯ ಅಗತ್ಯ ಬಹಳವಿದೆ.

ಸಮುದಾಯದ ನಡುವೆ ತೂರಿ ನಿಂತು ಸಮಾಧಾನ ಮಾಡುವವರಿಲ್ಲದ ಪರಿಸ್ಥಿತಿಯಲ್ಲಿ ಜನ ಹುಚ್ಚೆದ್ದು ಹಿಂಸೆ ತಾಂಡವವಾಡುತ್ತಿರುವ ಹೊತ್ತಿನಲ್ಲಿ ಪೊಲೀಸರು ದೂರವಾಣಿ ಸಂಖ್ಯೆ ಕೊಟ್ಟು ಸುಮ್ಮನಿರಬಹುದೇ? ಸ್ಥಳೀಯ ಆಡಳಿತಗಳಿಗೆ ಇದು ತಕ್ಷಣ ಪರಿಹಾರ ಹುಡುಕಬೇಕಾದ ಆದ್ಯತೆಯ ವಿಷಯ ಏಕೆ ಆಗಿಲ್ಲ?

ಜೀವನದಲ್ಲಿ ಎಲ್ಲ ರೀತಿಯಲ್ಲೂ ನೆಲೆಯೂರಿದ ಜನ ಹಾಗೂ ಸ್ಥಳೀಯರಾದ ಜನ ಮಾತ್ರ ಗೌರವಕ್ಕೆ ಅರ್ಹರು ಎಂಬುದು ಎಲ್ಲ ಸಮಾಜಗಳಲ್ಲಿರುವ ನಂಬಿಕೆ. ಆದರೆ ಆ ನಂಬಿಕೆಯನ್ನು ಒಡೆದು ಹಾಕುವ ರೀತಿಯ ಜನಸಮುದಾಯವೂ ಸಮಾಜದಲ್ಲಿರುತ್ತದೆ.

ಗುರಿ ಇಲ್ಲದೆ ತಿರುಗುವ ಭಿಕ್ಷುಕರು, ಸದಾ ಟೆಂಟ್‌ ಬದಲಿಸುವ ಅಲೆಮಾರಿಗಳು, ಊರಿನಿಂದ ಊರಿಗೆ ಬಂದು ವ್ಯಾಪಾರ ಮಾಡುವವರು... ಇಂಥವರೆಲ್ಲರಿಗೂ ಸ್ಥಳೀಯ ಚಹರೆಗಳು ಇರುವುದಿಲ್ಲ. ಸ್ಥಳೀಯ ಭಾಷೆಯ ಸಹಜ ಉಚ್ಚಾರಣೆಯೂ ಬರುವುದಿಲ್ಲ. ಅವರೆಲ್ಲ ಅನ್ಯರು. ಅಭದ್ರ ಸ್ಥಿತಿಯಲ್ಲಿರುವ ಅನ್ಯರೆಲ್ಲರೂ ಅನುಮಾನಕ್ಕೆ ಅರ್ಹರು. ಅಗೌರವಕ್ಕೆ ಅರ್ಹರು ಎಂಬ ಸಂಕುಚಿತ ಮನಸ್ಥಿತಿಯ ಅತಿರೇಕವೇ ಇಂದಿನ ‘ಮಕ್ಕಳ ಕಳ್ಳರು ಬಂದಿದ್ದಾರೆ’ ಎಂಬ ವದಂತಿ ಹಾಗೂ ಆನಂತರದ ಹಲ್ಲೆಗಳಿಗೆ ಪ್ರೇರಣೆ ನೀಡಿದಂತಿದೆ. ಅವರಲ್ಲಿ ಕೆಲವರು ಕಳ್ಳರಿರಬಹುದು. ಅಂಥವರನ್ನು ಪೊಲೀಸರಿಗೆ ಹಿಡಿದುಕೊಟ್ಟರಾಯಿತು. ಆದರೆ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ.

ಸಮಾಜದಲ್ಲಿ ಜನರಿಗೆ ಎಲ್ಲ ನಿರ್ಗತಿಕರೂ ಕಳ್ಳರಂತೆ ಕಂಡರೆ, ಅವರನ್ನು ಕಂಡಾಗ, ‘ಕಳ್ಳರು ಬಂದಿದ್ದಾರೆ’ ಎಂಬ ವದಂತಿ ನೆನಪಾದರೆ ಅನಾಹುತವೇ ಆಗುವುದು. ಈಗ ಅಂಥ ಅನಾಹುತ ಆಗುತ್ತಿದೆ. ಅದನ್ನು ತಡೆಯದೇ ಇದ್ದರೆ, ಮಕ್ಕಳ ಕಳ್ಳರು ನಿಜವಾಗಲೂ ಬಂದುಬಿಡ ಬಹುದು. ಕಿಂದರಿಜೋಗಿಯ ಹಾಡಿನಲ್ಲಿ ಬರುವ ಜೋಗಿ ಮತ್ತೆ ಬಂದು ಎಲ್ಲ ಮಕ್ಕಳನ್ನು ತನ್ನ ಕಿನ್ನರಿಯ ಮೋಡಿಯಿಂದಲೇ ಸ್ವರ್ಗಲೋಕಕ್ಕೆ ಕರೆದೊಯ್ದುಬಿಡಬಹುದು. ಪೋಷಕರು, ಪೊಲೀಸರು, ಸ್ಥಳೀಯ ಆಡಳಿತ ಅದಕ್ಕೂ ಮುಂಚೆ ಎಲ್ಲ ಮಕ್ಕಳನ್ನು ಅದ್ಭುತವಾಗಿ ಪ್ರೀತಿಸಬೇಕು. ಆಗ ಯಾವ ಕಳ್ಳನ ನೆರಳೂ ಬೀಳುವುದಿಲ್ಲ.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT