ನೌಕರರಿಗೆ ಮೇ ತಿಂಗಳಲ್ಲಿ ಸಿಗದು ಪರಿಷ್ಕೃತ ವೇತನ

7
ಹೊಸ ಸರ್ಕಾರ ರಚನೆಯಾದ ಬಳಿಕವೇ ತೀರ್ಮಾನ

ನೌಕರರಿಗೆ ಮೇ ತಿಂಗಳಲ್ಲಿ ಸಿಗದು ಪರಿಷ್ಕೃತ ವೇತನ

Published:
Updated:
ನೌಕರರಿಗೆ ಮೇ ತಿಂಗಳಲ್ಲಿ ಸಿಗದು ಪರಿಷ್ಕೃತ ವೇತನ

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸಿನ ಅನುಸಾರ ಸರ್ಕಾರಿ ನೌಕರರಿಗೆ ಪರಿಷ್ಕೃತ ಶ್ರೇಣಿಯ ಸಂಬಳ ಮೇ ತಿಂಗಳಿನಲ್ಲೂ ಸಿಗುವ ಸಾಧ್ಯತೆ ಇಲ್ಲ.

‘ವಿವಿಧ ಇಲಾಖೆಗಳ ನೌಕರರ ಎಚ್‌ಆರ್‌ಎಂಎಸ್‌  (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಯಲ್ಲಿ ಪರಿಷ್ಕೃತ ವೇತನ ಶ್ರೇಣಿಯ ವಿವರಗಳನ್ನು ಅಪ್‌ಡೇಟ್‌ ಮಾಡುವ ಕಾರ್ಯ ಬಹುತೇಕ ಮುಗಿಯುತ್ತಾ ಬಂದಿದೆ. ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸರ್ಕಾರಿ ನೌಕರರು ಪರಿಷ್ಕೃತ ವೇತನ ಪಡೆಯಲಿದ್ದಾರೆ’ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್ ಝಾ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ವೇತನವನ್ನು ಜೂನ್‌ 30 ರೊಳಗೆ ನಿಗದಿ ಪಡಿಸಬೇಕು. 2018 ರ ಪರಿಷ್ಕೃತ ವೇತನ ಶ್ರೇಣಿಗಳ ಹಾಗೂ ಪರಿಷ್ಕೃತ ಪಿಂಚಣಿಯ ಲಾಭವನ್ನು ಏಪ್ರಿಲ್‌ 1 ರಿಂದಲೇ ಪಾವತಿಸಬೇಕು ಎಂದು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌ ಸುತ್ತೋಲೆ ಹೊರಡಿಸಿದ್ದಾರೆ.

ಒಟ್ಟು 5.30 ಲಕ್ಷ ನೌಕರರು ವೇತನ ಪರಿಷ್ಕರಣೆಯ ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೆ, ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73,000 ಬೋಧಕೇತರ ಸಿಬ್ಬಂದಿಗೂ ಅನ್ವಯವಾಗಲಿದೆ.

ಸರ್ಕಾರಿ ನೌಕರರ ವೇತನವನ್ನು 2017ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಶೇ 30ರಷ್ಟು ಹೆಚ್ಚಿಸಲು ಆರನೇ ವೇತನ ಆಯೋಗ ಶಿಫಾರಸು ಮಾಡಿತ್ತು. ವಿಧಾನಸಭಾ ಚುನಾವಣೆಗೆ ಮೊದಲು ವೇತನ ಪರಿಷ್ಕರಿಸಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಜಾರಿಗೆ ಕೇಂದ್ರ ಚುನಾವಣಾ ಆಯೋಗದಿಂದ ಅನುಮೋದನೆ ಪಡೆಯಲಾಗಿತ್ತು.

ತುಟ್ಟಿಭತ್ಯೆಯೂ ವಿಳಂಬ

ಜನವರಿಯಿಂದ ಪೂರ್ವಾನ್ವಯವಾಗುವಂತೆ ಏಪ್ರಿಲ್ 1ರಿಂದ ಸರ್ಕಾರಿ ನೌಕರರಿಗೆ ನೀಡಬೇಕಾಗಿದ್ದ ತುಟ್ಟಿಭತ್ಯೆ ಕೂಡ ವಿಳಂಬವಾಗಲಿದೆ.

ವೇತನ ಪರಿಷ್ಕರಿಸುವಾಗ ಇದ್ದ ಶೇ 45.25ರಷ್ಟಿದ್ದ ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಲಾಗಿದೆ. ಪರಿಷ್ಕೃತ ವೇತನ ಶ್ರೇಣಿ ಅನ್ವಯಿ

ಸಿದ ಬಳಿಕ ತುಟ್ಟಿಭತ್ಯೆ ಇರುವುದಿಲ್ಲ. ಕೇಂದ್ರ ಸರ್ಕಾರ ಶೇ 2ರಷ್ಟು ತುಟ್ಟಿಭತ್ಯೆಯನ್ನು ಜನವರಿಯಿಂದ ಪೂರ್ವಾನ್ವಯವಾಗುವಂತೆ ಈಗಾಗಲೇ ಘೋಷಿಸಿದೆ. ಕೇಂದ್ರ ಘೋಷಿಸಿದ ಪ್ರಮಾಣಕ್ಕೆ ಶೇ 0.94ರಷ್ಟು ತುಟ್ಟಿಭತ್ಯೆಯನ್ನು ನಿಗದಿ ಮಾಡುವಂತೆ ವೇತನ ಆಯೋಗ ಶಿಫಾರಸು ಮಾಡಿದೆ. ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವೇ ತುಟ್ಟಿಭತ್ಯೆ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry