ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರದಲ್ಲಿ ‘ಮಹಾರಾಷ್ಟ್ರ ಸೂತ್ರ’ ಪಾಲನೆ

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಈ ಹಿಂದೆ ಎನ್‌ಸಿಪಿ– ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚಿಸಿದ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್‌ ಹೈಕಮಾಂಡ್‌ ಉದ್ದೇಶಿಸಿದೆ.

ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ) ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್‌, ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು, ಪ್ರಮುಖ ಖಾತೆಗಳನ್ನು ಪಡೆದುಕೊಂಡಿತ್ತು. ಇದೇ ಸೂತ್ರವನ್ನು ಕರ್ನಾಟಕದಲ್ಲೂ ಪಾಲಿಸುವ ಬಗ್ಗೆ ಜೆಡಿಎಸ್‌ ನಾಯಕರ ಜೊತೆ ಕಾಂಗ್ರೆಸ್‌ ವರಿಷ್ಠರು ಮಾತುಕತೆ ನಡೆಸಲಿದ್ದಾರೆ.

‘ಪ್ರಜಾವಾಣಿ’ ಜೊತೆ ಸೋಮವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಈ ಸುಳಿವು ನೀಡಿದರು.

‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿ ಸಂಬಂಧ ಎರಡೂ ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ. ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ಗೆ ಸಿಗಲಿದೆ’ ಎಂದು ಅವರು ಹೇಳಿದರು.

‘ಶಾಸಕರ ಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಸಚಿವ ಸ್ಥಾನ ಹಂಚಿಕೆ ಆಗಲಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ’ ಎಂದರು.

ಸಮನ್ವಯ ಸಮಿತಿ: ‘ಸರ್ಕಾರದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ, ಎರಡೂ ಪಕ್ಷಗಳ ಹಿರಿಯ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ತೀರ್ಮಾನಿಸಲಿದೆ. ಹೀಗಾಗಿ, ಯೋಜನೆಗಳ ರೂಪುರೇಷೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೈತ್ರಿಕೂಟದಲ್ಲಿ ಯಾವುದೇ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಉಂಟಾಗುವ ಪ್ರಮೇಯವೇ ಬರುವುದಿಲ್ಲ’ ಎಂದು ಅವರು ವಿವರಿಸಿದರು.

‘ಪಕ್ಷದ ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಿದ ನಂತರವೇ ಸಚಿವ ಸಂಪುಟ ರಚನೆಯ ಬಗ್ಗೆ ಹೈಕಮಾಂಡ್‌ ಒಂದು ತೀರ್ಮಾನಕ್ಕೆ ಬರಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ, ಸದನದಲ್ಲಿ ಬಹುಮತ ಸಾಬೀತು ಪಡಿಸಲಿದ್ದಾರೆ. ನಂತರ ಎರಡೂ ಪಕ್ಷಗಳ ಪರಸ್ಪರ ಹೊಂದಾಣಿಕೆಯಲ್ಲಿ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ’ ಎಂದರು.

ಉಪ ಮುಖ್ಯಮಂತ್ರಿ ಹುದ್ದೆ:

ಉತ್ತರ ಕರ್ನಾಟಕ ಭಾಗದ ಶಾಸಕರು ಉಪ ಮುಖ್ಯಮಂತ್ರಿ ಹುದ್ದೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮಗೂ ಪ್ರಾತಿನಿಧ್ಯ ನೀಡಿ ಎಂದು ಅವರು ಆಗ್ರಹಿಸಿದ್ದಾರೆ. ಅದು ಸಹಜ. ಪಕ್ಷದ ಹೈಕಮಾಂಡ್‌ ಈ ಬಗ್ಗೆ ಚರ್ಚೆ ನಡೆಸಲಿದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಎಂಟು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸಂಪುಟ ಸೇರಿದ ತಕ್ಷಣ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತೇನೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ‌ ಬರುವುದು ಬೇಡ ಎಂಬ ಕಾರಣಕ್ಕೆ ಮೈತ್ರಿ ಮಾಡಿಕೊಳ್ಳಲಾಗಿದೆ. ನಮಗೆ‌ ಇದು ಸ್ವಲ್ಪ ಕಷ್ಟವಾಗಬಹುದು. ಆದರೆ, ಎಲ್ಲವನ್ನೂ ಮೆಟ್ಟಿನಿಂತು ಪಕ್ಷ ಕಟ್ಟಬೇಕಿದೆ’ ಎಂದರು.

ಸಚಿವ ಸ್ಥಾನ ಕೊಟ್ಟಿಲ್ಲ:

‘ರಾಜ್ಯವನ್ನು ಪ‍್ರತಿನಿಧಿಸುವ ಲೋಕಸಭಾ ಸದಸ್ಯರಲ್ಲಿ ಲಿಂಗಾಯತರು ಇದ್ದರೂ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಿಲ್ಲ. ಹೀಗಿರುವಾಗ ಬಿಜೆಪಿಯವರು ಲಿಂಗಾಯತರ ಬಗ್ಗೆ ಯಾವ ಆಧಾರದಲ್ಲಿ ಮಾತನಾಡುತ್ತಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್‌ ಪ್ರಶ್ನಿಸಿದರು.

ಆಡಿಯೊ ಪ್ರಕರಣ–ತನಿಖೆಗೆ ಮನವಿ

‘ವಿಶ್ವಾಸಮತ ಯಾಚನೆ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸುವಂತೆ ‘ಆಪರೇಷನ್ ಕಮಲ’ಕ್ಕೆ ಯತ್ನಿಸಿದ ಬಿಜೆಪಿ ನಾಯಕರ ಆಡಿಯೊ ಬಿಡುಗಡೆ ಬಿಜೆಪಿಯ ನಿಜಬಣ್ಣ ಬಯಲು ಮಾಡಿದೆ. ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀರಿಸುತ್ತಿದ್ದಂತೆಯೇ ಈ ಬಗ್ಗೆ ತನಿಖೆ ನಡೆಸಲು ಮನವಿ ಮಾಡಲಾಗುವುದು’ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ಕೆಪಿಸಿಸಿ‌ ಕಚೇರಿಯಲ್ಲಿ ಸೋಮವಾರ ನಡೆದ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಪರೇಷನ್ ಕಮಲದ ಆಡಿಯೊ ನಕಲಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಬಿಜೆಪಿಯವರು ಏನು ಸತ್ಯ ಹರಿಶ್ಚಂದ್ರರಾ’ ಎಂದು ಪ್ರಶ್ನಿಸಿದರು.

‘ಜಯನಗರದಲ್ಲಿ ಸೌಮ್ಯಾ ರೆಡ್ಡಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್– ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT