7

‘ಕಾಂಗ್ರೆಸ್‌ನಿಂದ ಅಧಿಕಾರಿಗಳ ದುರ್ಬಳಕೆ’

Published:
Updated:
‘ಕಾಂಗ್ರೆಸ್‌ನಿಂದ ಅಧಿಕಾರಿಗಳ ದುರ್ಬಳಕೆ’

ಮೈಸೂರು: ‘ರಾಷ್ಟ್ರ ಹಾಗೂ ರಾಜ್ಯದಲ್ಲಿರುವುದು ನಕಲಿ ಕಾಂಗ್ರೆಸ್‌. ಬಬಲೇಶ್ವರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಗೆದ್ದಿದ್ದು, ಈಗ ನಕಲಿ ಸಿ.ಡಿ ಮಾಡಿ ಸಿಕ್ಕಿಬಿದ್ದಿದ್ದಾರೆ’ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿ ಸೋಮವಾರ ಆರೋಪಿಸಿದರು.‌

‘ಶಾಸಕರಿಗೆ ಬಿಜೆಪಿ ಮುಖಂಡರು ಆಮಿಷವೊಡ್ಡಲು ಮುಂದಾಗಿದ್ದಾರೆ ಎಂಬ ಸುಳ್ಳು ಸಂಭಾಷಣೆಯ ಟೇಪ್‌ ಬಿಡುಗಡೆ ಮಾಡಿದ್ದಾರೆ. ರಾಹುಲ್‌ ಗಾಂಧಿ ಸೂಚನೆ ಮೇರೆಗೆ ಉಗ್ರಪ್ಪ ನಡೆಸಿರುವ ಕೃತ್ಯ ಇದು. ಇದು ನಕಲಿ ಎಂಬುದನ್ನು ಅವರದ್ದೇ ಪಕ್ಷದ ಶಾಸಕ ಶಿವರಾಮ ಹೆಬ್ಬಾರ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು? ಎಲ್ಲಾ ಟೇಪ್‌ಗಳು ಇದೇ ರೀತಿ ನಕಲಿಯಿಂದ ಕೂಡಿದ್ದು, ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಾಂಗ್ರೆಸ್‌ ಪಕ್ಷದವರು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮವೆಸಗಿದ್ದಾರೆ. ಭದ್ರತಾ ಕೊಠಡಿಯಲ್ಲಿ ಇರಬೇಕಿದ್ದ ವಿ.ವಿ ಪ್ಯಾಟ್‌ಗಳು ಬೇರೊಂದು ಜಾಗದಲ್ಲಿ ಸಿಗಲು ಹೇಗೆ ಸಾಧ್ಯ? ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದರು.

‘ಬಹುಮತ ಸಾಬೀತುಪಡಿಸಲು ಆತ್ಮಸಾಕ್ಷಿಯಾಗಿ ಮತ ಹಾಕುವಂತೆ ನಾವು ಎಲ್ಲಾ ಶಾಸಕರಿಗೆ ಮನವಿ ಮಾಡಿದ್ದು ನಿಜ. ಆದರೆ, ಕಾಂಗ್ರೆಸ್‌– ಜೆಡಿಎಸ್‌ ಮುಖಂಡರು ತಮ್ಮ ಪಕ್ಷಗಳ ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟು ದೌರ್ಜನ್ಯ ಎಸಗಿದ್ದಾರೆ. ಧಮಕಿ ಹಾಕಿ ಹಿಡಿತ ಸಾಧಿಸಿದ್ದಾರೆ’ ಎಂದು ಆರೋಪಿಸಿದರು.

ಮೈತ್ರಿ ಪತನಕ್ಕೆ ದಿನಗಣನೆ:

‘ಕಾಂಗ್ರೆಸ್‌ ಮುಳುಗುವ ಹಡಗಿನಂತಾಗಿದ್ದು, ಜೆಡಿಎಸ್‌ ಕೈ ಹಿಡಿದು ಅಲ್ಪಸ್ವಲ್ಪ ಉಸಿರಾಡುತ್ತಿದೆ’ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

‘ಜೆಡಿಎಸ್‌–ಕಾಂಗ್ರೆಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್‌ ಈಗ ಖಾತೆಗಳಿಗೆ ಕ್ಯಾತೆ ತೆಗೆಯುತ್ತಿದೆ. ಪ್ರಮಾಣವಚನ ಸ್ವೀಕಾರಕ್ಕೆ ಮುನ್ನವೇ ಗುದ್ದಾಟ ಶುರುವಾಗಿದ್ದು, ಮೈತ್ರಿ ಮುರಿದು ಬೀಳಲು ದಿನಗಣನೆ ಶುರುವಾಗಿದೆ’ ಎಂದರು.

‘ರಾಜ್ಯದಲ್ಲೂ ಕಾಂಗ್ರೆಸ್‌ ನಿರ್ನಾಮವಾಗಲಿದ್ದು, ಕೇವಲ ಮೂರು ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಪಕ್ಷದವರು ಬೇಕಾದರೆ ಜೆಡಿಎಸ್‌ನೊಳಗೆ ವಿಲೀನವಾಗಲಿ. ಅದನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳಿದರು.

ಮತ್ತೆ ‘ಆಪರೇಷನ್‌ ಕಮಲ’ ನಡೆಯುತ್ತದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವವರು, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಭಿಮಾನ ಇಟ್ಟು ಬೆಂಬಲ ನೀಡುವವರಿಗೆ ಸ್ವಾಗತವಿದೆ’ ಎಂದರು.

‘ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಅವಕಾಶವಾದಿಗಳು. ಬಿಜೆಪಿ ಬೆಂಬಲ ಇಲ್ಲದಿದ್ದರೆ ಸಿದ್ದರಾಮಯ್ಯನವರು ಮೊದಲ ಬಾರಿ ಮಂತ್ರಿಯೇ ಆಗುತ್ತಿರಲಿಲ್ಲ. ಬಿಜೆಪಿ ಕೋಮುವಾದಿ ಪಕ್ಷ ಎನ್ನುವ ಕುಮಾರಸ್ವಾಮಿ ಈ ಹಿಂದೆ ನಮ್ಮ ಬೆಂಬಲ ಇಲ್ಲದಿದ್ದರೆ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry