ಕೇರಳ: ನಿಫಾ ವೈರಾಣು ಸೋಂಕಿಗೆ 9 ಮಂದಿ ಬಲಿ

7
ಸಾಕು ಪ್ರಾಣಿಗಳ ಮೇಲೂ ನಿಗಾ * ಬಾವಲಿಗಳ ಸಾಮೂಹಿಕ ಬೇಟೆ * ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರದ ವೈದ್ಯಕೀಯ ತಂಡ

ಕೇರಳ: ನಿಫಾ ವೈರಾಣು ಸೋಂಕಿಗೆ 9 ಮಂದಿ ಬಲಿ

Published:
Updated:
ಕೇರಳ: ನಿಫಾ ವೈರಾಣು ಸೋಂಕಿಗೆ 9 ಮಂದಿ ಬಲಿ

ಕೋಯಿಕ್ಕೋಡ್ (ಕೇರಳ): ಅಪರೂಪದ ನಿಫಾ ವೈರಾಣು ಸೋಂಕಿಗೆ ಕೇರಳದಲ್ಲಿ 9 ಮಂದಿ ಬಲಿಯಾಗಿದ್ದು, ಇನ್ನೂ ಹಲವರು ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ಶಂಕಿಸಲಾಗಿದೆ.

ವೈರಾಣುವಿಗೆ ಬಲಿಯಾದ ಹೆಚ್ಚಿನವರು ಕೋಯಿಕ್ಕೋಡ್ ಜಿಲ್ಲೆಯವರು ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.

ಸೋಮವಾರ ಇಬ್ಬರು ಕೊಯಿಕ್ಕೋಡ್‌ ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಇನ್ನಿಬ್ಬರು ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ವಿವಿಧ ಆಸ್ಪತ್ರೆಗಳಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇರುವ 12 ರೋಗಿಗಳು ದಾಖಲಾಗಿದ್ದಾರೆ. 20 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ.

ಮದ್ದಿಲ್ಲದ ರೋಗ: ಬಾವಲಿ, ಹಂದಿ ಹಾಗೂ ಇತರೆ ಪ್ರಾಣಿಗಳಿಂದ ಹರಡುವ ಈ ಸೋಂಕಿಗೆ ಇದುವರೆಗೂ ಯಾವುದೇ ಸಿದ್ಧ ಔಷಧ ಅಥವಾ ಲಸಿಕೆ ಲಭ್ಯವಿಲ್ಲ. ರೋಗ ಲಕ್ಷಣಗಳನ್ನು ನಿಯಂತ್ರಿಸಲು ಪೂರಕ ಹಾಗೂ ಉಪಶಮನಕಾರಿ ಚಿಕಿತ್ಸೆ ನೀಡಲಾಗುತ್ತದೆ.

‘ಕೇರಳದಲ್ಲಿ ಬಾವಲಿಗಳಿಂದ ಈ ಸೋಂಕು ಹರಡಿರುವ ಶಂಕೆ ಇದೆ’ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ಮೃತರ ಪೈಕಿ ಮೂವರಿಗೆ ನಿಫಾ ವೈರಾಣು ಸೋಂಕು ತಗುಲಿರುವುದನ್ನು ಮಣಿಪಾಲದ ವೈರಾಣು ಸಂಶೋಧನಾ ಕೇಂದ್ರ ದೃಢಪಡಿಸಿದೆ.ಇನ್ನುಳಿದವರ ಮಾದರಿಗಳನ್ನು ಪುಣೆಯ ವೈರಾಣು ರಾಷ್ಟ್ರೀಯ ಅಧ್ಯಯನ ಸಂಸ್ಥೆಗೆ ಕಳುಹಿಸಲಾಗಿದೆ. ವರದಿ ಕೈಸೇರಿದ ಬಳಿಕವಷ್ಟೆ ಸಾವಿನ ನಿಖರ ಕಾರಣ ತಿಳಿಯಬಹುದಾಗಿದೆ’ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ರಾಜೀವ್ ಸದಾನಂದನ್ ತಿಳಿಸಿದ್ದಾರೆ.

‘ಕೇಂದ್ರ ಆರೋಗ್ಯ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ತಂಡವನ್ನು ಕೋಯಿಕ್ಕೋಡ್‌ಗೆ ಕಳುಹಿಸಿದೆ. ಸೋಂಕು ಹರಡು ವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಎಲ್ಲರ ನೆರವು ಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ವಾರ್ಡ್: ನಿಫಾ ಸೋಂಕು ಪೀಡಿತರಿಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ‍ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ದಾದಿ ಸಾವು: ಮೃತಪಟ್ಟ ಇಬ್ಬರು ರೋಗಿಗಳ ನಿಗಾ ನೋಡಿಕೊಳ್ಳುತ್ತಿದ್ದ ದಾದಿ ಲಿನಿ ಎನ್ನುವವರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಒಂದು ವಾರದಿಂದಲೂ ಲಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೃತದೇಹ ಹಸ್ತಾಂತ ರಿಸದೆ ತಕ್ಷಣವೇ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದರಿಂದ ಸಂಬಂಧಿಕರು ‍ಪ್ರತಿಭಟನೆ ನಡೆಸಿದ್ದಾರೆ.

ಸೋಂಕು ಹರಡದಂತೆ ತಡೆಯಲು ವೇಲಾಯುಧನ್ (64) ಅಂತ್ಯಸಂಸ್ಕಾರವನ್ನು ಸಹ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗಿದೆ.

ಸೋಂಕು ಪೀಡಿತರ ಮನೆಗಳ ಸಮೀಪ ವಾಸಿಸುತ್ತಿದ್ದ ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಸಾಕುಪ್ರಾಣಿಗಳನ್ನು ಸಹ ನಿಗಾದಲ್ಲಿ ಇರಿಸಲಾಗಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಸೋಂಕಿನಿಂದ ರಕ್ಷಣೆ ಪಡೆಯುವ ವೈದ್ಯಕೀಯ ಸಾಧನಗಳನ್ನು ಇಲಾಖೆ ನೀಡಿಲ್ಲ ಎಂದು ಆರೋಗ್ಯ ಕಾರ್ಯಕರ್ತರು ದೂರಿದ್ದಾರೆ.

(ಬಾವಲಿಗಳ ಬೇಟೆ: ಪಶುಸಂಗೋಪನೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಪೆರಂಬರದ ಚಂಗರೊತ್ತುವಿನ ಮನೆಯೊಂದರ ಬಾವಿಯಿಂದ ಬಾವಲಿಗಳನ್ನು ಹಿಡಿದರು –ಪಿಟಿಐ ಚಿತ್ರ)

ಒಂದೇ ಕುಟುಂಬದ ಮೂವರ ಸಾವು

ಪೆರಂಬರದ ಚಂಗರೊತ್ತುವಿನ ಕುಟುಂಬವೊಂದರಲ್ಲಿಯೇ ಮೂರು ಮಂದಿ ಸಾವನ್ನಪ್ಪಿದಾಗ ಈ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು.

ಮೇ 5ರಿಂದ 18ರ ಅವಧಿಯಲ್ಲಿ ಕುಟುಂಬದ ಮರಿಯಮ್ (50), ಇವರ ಸಂಬಂಧಿ ಸಬೀದ್ (23) ಹಾಗೂ ಸಲೀಹ್ (26) ಮೃತಪಟ್ಟಿದ್ದಾರೆ.  ಇದೇ ಕುಟುಂಬದ ಇನ್ನೂ ನಾಲ್ವರು ಇದೇ ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಕೆಲವು ಸಾಕುಪ್ರಾಣಿಗಳು ಸಾವನ್ನಪ್ಪಿದಾಗ ಅಧಿಕಾರಿಗಳಿಗೆ ದೂರು ನೀಡಲಾಯಿತು. ಆದರೆ ಅವರು ಈ ಕುರಿತು ಗಮನಹರಿಸಲಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.

ಲಕ್ಷಣ‌ಗಳೇನು?

* ಜ್ವರ, ತಲೆನೋವು, ನಿದ್ದೆ ಮಂಪರು, ಭ್ರಮೆ

* ಗೊಂದಲಕಾರಿ ಮನಸ್ಥಿತಿ, ಉಸಿರಾಟದ ಸಮಸ್ಯೆ, ಕೋಮಾ, ಮಿದುಳು ಸೋಂಕು

ಮಲೇಷ್ಯಾ ಹಾಗೂ ಸಿಂಗಪುರದಲ್ಲಿ ಕ್ರಮವಾಗಿ 1998 ಹಾಗೂ 1999ರಲ್ಲಿ ಈ ನಿಫಾ ವೈರಾಣು ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಪತ್ತೆಯಾದವರಲ್ಲಿ ಶೇ 50ರಷ್ಟು ಮಂದಿ ಮೃತಪಟ್ಟಿದ್ದರು.

ಬಾವಲಿ ಮೂಲಕ ಮೊದಲಿಗೆ ಮಲೇಷ್ಯಾದ ಗದ್ದೆಗಳಲ್ಲಿರುವ ಹಂದಿಗಳಲ್ಲಿ ಹಾಗೂ ನಂತರದಲ್ಲಿ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಆಡು, ಕುದುರೆಗಳಲ್ಲಿಯೂ ಸೋಂಕು ಪತ್ತೆಯಾಯಿತು. ಬಳಿಕ ಮನುಷ್ಯರಿಗೂ ಹರಡಿರುವುದು ವರದಿಯಾಗಿತ್ತು.

ಬಾವಲಿಯ ಮೂತ್ರ, ಹಿಕ್ಕೆ ಹಾಗೂ ಜೊಲ್ಲು ಈ ವೈರಾಣು ಸೋಂಕಿನ ಮೂಲ

ಸೋಂಕು ಹರಡುವ ರೀತಿ

1. ಬಾವಲಿಗಳು ತಿಂದಿರುವ ಹಣ್ಣು ಸೇವನೆ

2. ಸೋಂಕಿರುವ ಬಾವುಲಿ, ಹಂದಿಗಳ ಜತೆಗಿನ ಸಂಪರ್ಕ

3. ಸೋಂಕು ಹೊಂದಿರುವ ಇತರೆ ವ್ಯಕ್ತಿಗಳೊಂದಿಗೆ ಸಂಪರ್ಕ, ಒಡನಾಟ

ಹಿಂದಿನ ಪ್ರಕರಣ

ಬಾಂಗ್ಲಾದೇಶದ ಮೆಹರ್‌ಪುರ ಜಿಲ್ಲೆಯಲ್ಲಿ 2001ರಲ್ಲಿ ಮೆದುಳಿನ ಉರಿಯೂತದ ಲಕ್ಷಣದೊಂದಿಗೆ ಈ ವೈರಾಣು ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿತ್ತು. ದಕ್ಷಿಣ ಏಷ್ಯಾದಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ.

ಬಾಂಗ್ಲಾದೇಶದಲ್ಲಿ ಹಾಗೂ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಎರಡು ಬಾರಿ ನಿಫಾ ಸೋಂಕು ಹರಡಿತ್ತು.

ಭಾರತದಲ್ಲಿ ನಿಫಾ ಹಾವಳಿ

ಪಶ್ಚಿಮ ಬಂಗಾಳ

2001–ಸಿಲಿಗುರಿ

ಪ್ರಕರಣ: 66

ಸಾವು: 45

2007–ನಾದಿಯಾ

ಪ್ರಕರಣ: 5

ಸಾವು: 5

ಅಂಕಿ ಅಂಶ

280

ದಕ್ಷಿಣ ಏಷ್ಯಾದಲ್ಲಿ ಒಟ್ಟು ಸೋಂಕಿತರು

211

ಸಾವು

ಶೇ 75

ಸಾವಿನ ಪ್ರಮಾಣ

17

ಸೋಂಕು ಪ್ರಕರಣಗಳ ವರದಿ

* ಕೇರಳಕ್ಕೆ ಅಗತ್ಯ ವೈದ್ಯಕೀಯ ನೆರವು ನೀಡಲು ತಜ್ಞರ ತಂಡ ರವಾನಿಸಲಾಗಿದೆ

-ಜೆ.ಪಿ. ನಡ್ಡಾ ಕೇಂದ್ರ ಆರೋಗ್ಯ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry