7
ಲೈಂಗಿಕ ದೌರ್ಜನ್ಯದ ವಿಡಿಯೊ ತೆಗೆದುಹಾಕಲು ವಿಫಲ; ಸುಪ್ರೀಂಕೋರ್ಟ್‌ ಛೀಮಾರಿ

ಫೇಸ್‌ಬುಕ್‌, ಗೂಗಲ್‌ಗೆ ತಲಾ ₹1 ಲಕ್ಷ ದಂಡ

Published:
Updated:
ಫೇಸ್‌ಬುಕ್‌, ಗೂಗಲ್‌ಗೆ ತಲಾ ₹1 ಲಕ್ಷ ದಂಡ

ನವದೆಹಲಿ: ಲೈಂಗಿಕ ಹಿಂಸೆಯ ವಿಡಿಯೊಗಳನ್ನು ಜಾಲತಾಣಗಳಿಂದ ತೆಗೆದುಹಾಕಲು ವಿಫಲವಾಗಿರುವ ಫೇಸ್‌ಬುಕ್‌, ಗೂಗಲ್‌, ವಾಟ್ಸ್‌ ಆ್ಯಪ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದ್ದು, ತಲಾ ₹1 ಲಕ್ಷ ದಂಡ ವಿಧಿಸಿದೆ.

ಲೈಂಗಿಕ ದೌರ್ಜನ್ಯದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕಲು ಯಾವುದೇ ಕ್ರಮ ಕೈಗೊಂಡಿರದೇ ಇರುವ ಈ ಕಂಪನಿಗಳ ವಿರುದ್ಧ ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌ ಮತ್ತು ಯು.ಯು.ಲಲಿತ್‌ ಅವರಿದ್ದ ದ್ವಿಸದಸ್ಯ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಲೈಂಗಿಕ ಹಿಂಸೆಯ ದೃಶ್ಯಾವಳಿಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ತಾಕೀತು ಮಾಡಿ, ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಪ್ರಗತಿ ಬಗ್ಗೆಯೂ ಜೂನ್‌ 15ರೊಳಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಪೀಠ ನಿರ್ದೇಶನ ನೀಡಿತು.

‘ಸಮಿತಿಯ ವರದಿ ಅನುಸಾರ ಇಂಥ ವಿಡಿಯೊಗಳನ್ನು ತೆಗೆದು ಹಾಕಲು ಏನೆಲ್ಲ ಕ್ರಮ ಕೈಗೊಂಡಿವೆ ಎನ್ನುವುದರ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಕಳೆದ ಏಪ್ರಿಲ್‌ 16ರಂದೇ ಆದೇಶ ನೀಡಿದ್ದೆವು. ಆದರೆ, ಪ್ರತಿವಾದಿಗಳು (ಸಾಮಾಜಿಕ ಜಾಲತಾಣಗಳು) ಇದುವರೆಗೂ ಪ್ರಮಾಣ ಪತ್ರ ಸಲ್ಲಿಸಿಲ್ಲ’ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ಆನ್‌ಲೈನ್‌ನಲ್ಲಿ ನಡೆಯುವ ಅಪರಾಧ ತಡೆಯಲು ಮತ್ತು ಅಪರಾಧ ಚಟುವಟಿಕೆ ಮೇಲೆ ನಿಗಾ ಇಡಲು ಸಮಗ್ರವಾದ ‘ಪೋರ್ಟಲ್‌ ಬೀಟಾ ಆವೃತ್ತಿ’ ರೂಪಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಇದನ್ನು ಜುಲೈ 15ರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತು.

‘ಈ ಸವಾಲು ಸಾಧಿಸಲು ಬೇಕಾದರೆ ಇನ್ನಷ್ಟು ಸಮಯಾವಕಾಶ ತೆಗೆದುಕೊಳ್ಳಿ. ಆದರೆ, ಇದನ್ನು ಸರಿಯಾದ ರೀತಿಯಲ್ಲಿ ಸಂಪೂರ್ಣ ಜಾರಿಗೆ ತರಬೇಕು’ ಎಂದು ಸೂಚಿಸಿದ ಸುಪ್ರೀಂಕೋರ್ಟ್‌, ಪೋರ್ಟಲ್‌ ಬೀಟಾ ಆವೃತ್ತಿ ಬಿಡುಗಡೆಗೆ ಜುಲೈ 30ರವರೆಗೆ ಸಮಯಾವಕಾಶವನ್ನು ಕೇಂದ್ರ ಗೃಹ ವ್ಯವಹಾರ ಸಚಿವಾಲಯಕ್ಕೆ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry