ಉಸಿರುಗಟ್ಟಿ ಕಾರ್ಮಿಕ ಸಾವು

7

ಉಸಿರುಗಟ್ಟಿ ಕಾರ್ಮಿಕ ಸಾವು

Published:
Updated:

ಬೆಂಗಳೂರು: ಮಲ್ಲೇಶ್ವರದಲ್ಲಿ ನೀರಿನ ಸಂಪ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಯಲ್ಲೋಜಿ ರಾವ್ (47) ಎಂಬುವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಸ್ಥಳೀಯ 18ನೇ ಅಡ್ಡರಸ್ತೆಯ ಈಸ್ಟ್‌ ಪಾರ್ಕ್ ನಿವಾಸಿಯಾಗಿದ್ದ ಅವರು, ರಜನಿ ಎಂಬುವರಿಗೆ ಸೇರಿದ್ದ ಚಾಟ್ಸ್‌ ಅಂಗಡಿಯಲ್ಲಿದ್ದ ಸಂಪ್ ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

‘ಅಂಗಡಿಯಲ್ಲಿ 10 ಅಡಿ ಆಳದ ಸಂಪು ಇದೆ. ಅದರಲ್ಲಿದ್ದ ನೀರು ಗಲೀಜಾಗಿದ್ದರಿಂದ ಸ್ವಚ್ಛಗೊಳಿಸಲೆಂದು ರಜನಿ, ಯಲ್ಲೋಜಿ ಅವರನ್ನು ಮೇ 19ರಂದು ಅಂಗಡಿಗೆ ಕರೆಸಿದ್ದರು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಸಂಪ್‌ಗೆ ಇಳಿದು ಯಲ್ಲೋಜಿ ಸ್ವಚ್ಛತೆಯಲ್ಲಿ ತೊಡಗಿದ್ದರು’ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದರು.

‘ಮುಚ್ಚಳ ಚಿಕ್ಕದಾಗಿದ್ದರಿಂದ, ಒಳಗೆ ಗಾಳಿಯೇ ಇರಲಿಲ್ಲ. ಯಲ್ಲೋಜಿಯವರು ಉಸಿರಾಡಲಾಗದೆ ಅಸ್ವಸ್ಥಗೊಂಡು ಸಂಪ್‌ನಲ್ಲೇ ಕುಸಿದು ಬಿದ್ದಿದ್ದರು. ಅದನ್ನು ಗಮನಿಸಿದ ರಜನಿ, ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು.  ಸ್ಥಳಕ್ಕೆ ಹೋಗಿದ್ದ ದಳದ ಸಿಬ್ಬಂದಿ, ಯಲ್ಲೋಜಿಯವರನ್ನು ಹೊರಗೆ ತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮೃತಪಟ್ಟಿರುವುದಾಗಿ ಹೇಳಿದರು’ ಎಂದರು.

‘ರಜನಿ ಹಾಗೂ ಕಟ್ಟಡದ ಮಾಲೀಕ ನೀಲಾ ಪಾರ್ಥಸಾರಥಿ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಅವರಿಬ್ಬರನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry