ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ನತ್ತ ಉಭಯ ತಂಡಗಳ ಚಿತ್ತ

ಚೆನ್ನೈ ಸೂಪರ್‌ ಕಿಂಗ್ಸ್‌–ಸನ್‌ರೈಸರ್ಸ್‌ ಹೈದರಾಬಾದ್‌ ನಡುವೆ ಮೊದಲ ಕ್ವಾಲಿಫೈಯರ್‌ ಪೈಪೋಟಿ
Last Updated 21 ಮೇ 2018, 19:44 IST
ಅಕ್ಷರ ಗಾತ್ರ

ಮುಂಬೈ: ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಐಪಿಎಲ್‌ 11ನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸುವತ್ತ ಚಿತ್ತ ನೆಟ್ಟಿವೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಮೊದಲ ಕ್ವಾಲಿಫೈಯರ್‌ ಹೋರಾಟ ದಲ್ಲಿ ಉಭಯ ತಂಡಗಳು ಸೆಣಸಲಿವೆ. ಈ ಬಾರಿಯ ಲೀಗ್‌ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿ ರುವ ಮಹೇಂದ್ರ ಸಿಂಗ್‌ ದೋನಿ ಮತ್ತು ಕೇನ್‌ ವಿಲಿಯಮ್ಸನ್‌ ಮುಖಾಮುಖಿಯಾಗುತ್ತಿರುವುದು ಪಂದ್ಯದ ಬಗೆಗಿನ ಕುತೂಹಲ ಹೆಚ್ಚುವಂತೆ ಮಾಡಿದೆ.

ಸನ್‌ರೈಸರ್ಸ್‌ ತಂಡ ಈ ಬಾರಿ ಅಮೋಘ ಆಟ ಆಡಿ ಅಭಿಮಾನಿಗಳ ಮನ ಗೆದ್ದಿದೆ. ನ್ಯೂಜಿಲೆಂಡ್‌ನ ವಿಲಿಯಮ್ಸನ್‌ ಸಾರಥ್ಯದ ತಂಡ ಈ ಬಾರಿ ಆಡಿದ 14 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಗೆದ್ದಿದೆ. ದೋನಿ ಮುಂದಾಳತ್ವದ ಸೂಪರ್‌ ಕಿಂಗ್ಸ್‌ ಕೂಡ ಇಷ್ಟೇ ಪಂದ್ಯಗಳಲ್ಲಿ ವಿಜಯಿಯಾಗಿದೆ. ಆದರೆ ಸನ್‌ರೈಸರ್ಸ್‌ ತಂಡ ಉತ್ತಮ ರನ್‌ ಸರಾಸರಿ ಆಧಾರದಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

ಹೈದರಾಬಾದ್‌ನ ತಂಡ ಬ್ಯಾಟಿಂಗ್‌ನಲ್ಲಿ ನಾಯಕ ವಿಲಿಯಮ್ಸನ್‌ ಮತ್ತು ಶಿಖರ್‌ ಧವನ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಬಾರಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಕೇನ್‌, ಎರಡನೇ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 661ರನ್‌ಗಳಿವೆ. ಧವನ್‌ 437ರನ್‌ ಗಳಿಸಿದ್ದಾರೆ. ಶಿಖರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಅವರು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಬೇಕಿದೆ.

ಇಂಗ್ಲೆಂಡ್‌ನ ಹೇಲ್ಸ್‌, ಡೆಲ್ಲಿ ಡೇರ್‌ ಡೆವಿಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯಗಳಲ್ಲಿ ಬೇಗನೆ ವಿಕೆಟ್‌ ಒಪ್ಪಿಸಿದ್ದರು. ಅವರು ಸೂಪರ್‌ ಕಿಂಗ್ಸ್‌ ವಿರುದ್ಧ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ಕರ್ನಾಟಕದ ಮನೀಷ್‌ ಪಾಂಡೆ, ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ, ದೀಪಕ್‌ ಹೂಡಾ, ಯೂಸುಫ್‌ ಪಠಾಣ್ ಮತ್ತು ಶ್ರೀವತ್ಸ ಗೋಸ್ವಾಮಿ ಅವರೂ ಬ್ಯಾಟಿಂಗ್‌ನಲ್ಲಿ ಮಿಂಚಬೇಕಿದೆ.

ಬೌಲಿಂಗ್‌ನಲ್ಲಿ ಕೇನ್‌ ಪಡೆ ಶಕ್ತಿಯುತವಾಗಿದೆ. ವೇಗದ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌, ಸಂದೀಪ್‌ ಶರ್ಮಾ ಸಿದ್ದಾರ್ಥ್‌ ಕೌಲ್‌ ಮತ್ತು ಕಾರ್ಲೊಸ್‌ ಬ್ರಾಥ್‌ವೇಟ್‌ ಅವರು ಚೆನ್ನೈ ಬ್ಯಾಟ್ಸ್‌ ಮನ್‌ಗಳನ್ನು ತಬ್ಬಿಬ್ಬುಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಫ್ಗಾನಿಸ್ತಾನದ ರಶೀದ್‌ ಖಾನ್‌ ಮತ್ತು ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ ಅವರು ಸ್ಪಿನ್‌ ವಿಭಾಗದಲ್ಲಿ ತಂಡದ ಬೆನ್ನೆಲುಬು ಆಗಿದ್ದಾರೆ.

ವಿಶ್ವಾಸದಲ್ಲಿ ಮಹಿ ಬಳಗ: ಚೆನ್ನೈ ಸೂಪರ್‌ ಕಿಂಗ್ಸ್‌ ಕೂಡ ಜಯದ ಕನವರಿಕೆಯಲ್ಲಿದೆ. ಈ ಬಾರಿ ಲೀಗ್‌ ಹಂತದಲ್ಲಿ ದೋನಿ ಬಳಗ ಸನ್‌ರೈಸರ್ಸ್ ವಿರುದ್ಧ ಆಡಿದ್ದ ಎರಡೂ ಪಂದ್ಯಗಳಲ್ಲಿ ಗೆದ್ದಿತ್ತು. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ದೋನಿ ಪಡೆ ಬ್ಯಾಟಿಂಗ್‌ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಬಲಿಷ್ಠವಾಗಿದೆ.

ಶೇನ್‌ ವಾಟ್ಸನ್‌ ಮತ್ತು ಅಂಬಟಿ ರಾಯುಡು ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರೆ, ಸುರೇಶ್‌ ರೈನಾ, ದೋನಿ, ಡೇವಿಡ್‌ ವಿಲ್ಲಿ ಮತ್ತು ಡ್ವೇನ್‌ ಬ್ರಾವೊ ಇದರ ಮೇಲೆ ರನ್‌ ಗೋಪುರ ಕಟ್ಟಬಲ್ಲರು.

ಅಮೋಘ ಲಯದಲ್ಲಿರುವ ರಾಯುಡು, ಈ ಬಾರಿ ಒಟ್ಟು 586 ರನ್‌ಗಳನ್ನು ದಾಖಲಿಸಿದ್ದಾರೆ.

ಆಸ್ಟ್ರೇಲಿಯಾದ ಆಲ್‌ರೌಂಡರ್‌ ವಾಟ್ಸನ್‌, 13 ಪಂದ್ಯಗಳಿಂದ 438ರನ್‌ ಕಲೆಹಾಕಿದ್ದಾರೆ.

ಬೌಲಿಂಗ್‌ನಲ್ಲೂ ಸೂಪರ್‌ಕಿಂಗ್ಸ್‌ ಬಲಶಾ ಲಿಯಾಗಿದೆ. ಲುಂಗಿಸಾನಿ ಗಿಡಿ ಈ ತಂಡದ ವೇಗದ ಅಸ್ತ್ರವಾಗಿದ್ದಾರೆ. ಭಾನುವಾರ ನಡೆದಿದ್ದ ಕಿಂಗ್ಸ್‌ ಇಲೆವನ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗಿಡಿ, 10ರನ್‌ ಕೊಟ್ಟು 4 ವಿಕೆಟ್‌ ಉರುಳಿಸಿದ್ದರು.

ಅವರು ಇನ್‌ಸ್ವಿಂಗ್‌ ಮತ್ತು ಔಟ್‌ ಸ್ವಿಂಗ್‌ ಎಸೆತಗಳ ಮೂಲಕ ಸನ್‌ರೈಸರ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಕಂಗೆ ಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ಶಾರ್ದೂಲ್‌ ಠಾಕೂರ್‌, ದೀಪಕ್‌ ಚಾಹರ್‌, ಬ್ರಾವೊ, ಹರಭಜನ್‌ ಸಿಂಗ್ ಮತ್ತು ರವೀಂದ್ರ ಜಡೇಜ ಅವರೂ ವಿಲಿಯಮ್ಸನ್‌ ಪಡೆಯ ಬ್ಯಾಟ್ಸ್‌ಮ ನ್‌ಗಳನ್ನು ಕಟ್ಟಿ ಹಾಕಲು ಕಾತರ ರಾಗಿದ್ದಾರೆ.

**

ಸೋತ ತಂಡಕ್ಕೆ ಮತ್ತೊಂದು ಅವಕಾಶ

ಸೂಪರ್‌ ಕಿಂಗ್ಸ್‌ ಮತ್ತು ಸನ್‌ರೈಸರ್ಸ್‌ ನಡುವಣ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡಕ್ಕೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡಲು ಮತ್ತೊಂದು ಅವಕಾಶ ಸಿಗಲಿದೆ.

ಈ ತಂಡ, ಮೇ 23ರಂದು ಕೋಲ್ಕತ್ತ ನೈಟ್‌ರೈಡರ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಣ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡದ ಜೊತೆ ಸೆಣಸಲಿದೆ. ಈ ಪಂದ್ಯ (ಕ್ವಾಲಿಫೈಯರ್‌–2) ಮೇ 25ರಂದು ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT