ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

7
ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾದ ರೈತ l ಹರಪನಹಳ್ಳಿಯಲ್ಲಿ 80 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ

ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

Published:
Updated:
ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

ಹರಪನಹಳ್ಳಿ: ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ವರ್ಷ ಸೈನಿಕ ಹುಳು ದಾಳಿಯಿಂದ ಕಂಗೆಟ್ಟಿದ್ದ ಅನ್ನದಾತರು ಈಗ ನವ ಉಲ್ಲಾಸದೊಂದಿಗೆ ಕೃಷಿ ಚಟುವಟಿಕೆಯತ್ತ ಗಮನ ಹರಿಸಿದ್ದಾರೆ.

ಕಳೆದ ವರ್ಷ ಬೆಳೆದ ಬೆಳೆ ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ ಸೈನಿಕ ಹುಳಗಳ ದಾಳಿಯಿಂದಾಗಿ ರೈತ ಸಮುದಾಯ ಕಷ್ಟ ಎದುರಿಸುವಂತಾಯಿತು.

ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಕಿದ್ದ ರೈತರಿಗೆ ಬೆಳೆನಷ್ಟದಿಂದಾಗಿ ಸಾಲ ಮಾಡುವಂತಾಗಿತ್ತು. ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಮಳೆ ಸುರಿದಿರುವುದು ಕೃಷಿ ಕಾಯಕಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ತಾಲ್ಲೂಕಿನಲ್ಲಿ 80,230 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, 250 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ಚಿಗಟೇರಿ ಹೋಬಳಿಯ ಜಿ.ದಾದಾಪುರದಲ್ಲಿ ಈಗಾಗಲೇ ಮೆಕ್ಕೆಜೋಳದ 15 ದಿನಗಳ ಬೆಳೆಯಿದೆ. ಕಣವಿಹಳ್ಳಿ, ನಂದಿಬೇವೂರು, ಆಲದಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಶೇಂಗಾ, ಹೆಸರು ಬಿತ್ತನೆ ಮಾಡಲಾಗುತ್ತಿದೆ.

ಶೇ 70ರಷ್ಟು ಹೆಚ್ಚುವರಿ ಮಳೆ: ಜನವರಿ 1ರಿಂದ ಮೇ 15ರವರೆಗೆ ತಾಲ್ಲೂಕಿನಲ್ಲಿ 86 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 147 ಮಿ.ಮೀ. ಮಳೆಯಾಗಿದೆ. ಅಂದರೆ, ವಾಡಿಕೆಗಿಂತ ಶೇ 70ರಷ್ಟು ಹೆಚ್ಚು ಮಳೆ ಸುರಿದಿದೆ.

ಮೆಕ್ಕೆಜೋಳ 50 ಹೆಕ್ಟೇರ್, ಹೆಸರು 50 ಹೆಕ್ಟೇರ್‌, ಶೇಂಗಾ 150 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ತಾಲ್ಲೂಕಿನ ನಾಲ್ಕು ದಿಕ್ಕುಗಳಲ್ಲೂ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಬಿತ್ತನೆ ಪ್ರಮಾಣ ವಾರಾಂತ್ಯದಲ್ಲಿ ಹೆಚ್ಚವಾಗುವ ಸಾಧ್ಯತೆಯಿದೆ.

ರೈತರಿಗೆ ಅಗತ್ಯವಾಗಿರುವ ಬಿತ್ತನೆ ಬೀಜ, ಔಷೋಧೋಪಚಾರ, ಕೃಷಿ ಪರಿಕರ ಒದಗಿಸಲು ಕೃಷಿ ಇಲಾಖೆ ಸಿದ್ಧತೆ ನಡೆಸಿದೆ. ತಾಲ್ಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಎಂಟು ಕಡೆಗಳಲ್ಲಿ ಬಿತ್ತನೆ ಬೀಜ ವಿತರಣೆ

ಮಾಡಲಾಗುತ್ತಿದೆ. ಅಗತ್ಯ ಎಲ್ಲ ಕೃಷಿ ಪರಿಕರಗಳು ಸಂಗ್ರಹವಿದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ಎ.ನಾರನಗೌಡ

ತಿಳಿಸಿದ್ದಾರೆ.

**

ಉತ್ತಮ ಮಳೆ ಸುರಿದಿರುವುದರಿಂದ ಭೂಮಿ ಹದಗೊಂಡಿದ್ದು, ಊರಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಒಂದೆರಡು ವಾರದ ಬಳಿಕ ಬಿತ್ತನೆಗೆ ಮುಂದಾಗಲಿದ್ದೇವೆ

ಶಟ್ಯಾಳ್ ಸೋಮಪ್ಪ, ಅರಸನಾಳು ಗ್ರಾಮದ ಯುವ ರೈತ

**

ಸದ್ಯ ಭೂಮಿ ಹದಗೊಳಿಸುವ ಕೆಲಸ ನಡೆದಿದೆ. ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ವರ್ಷ ವರುಣದೇವ ನಮ್ಮ ಮೇಲೆ ಕರುಣೆ ತೋರಲಿ

- ಹೋಬ್ಯಾನಾಯ್ಕ, ಬಾಪೂಜಿ ನಗರ ಉದ್ದಗಟ್ಟಿ ದೊಡ್ಡ ತಾಂಡಾ ರೈತ

ಬರುವ ಸೋಮವಾರದ ವೇಳೆಗೆ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರಲಿವೆ. ಎಸ್ಸಿ-ಎಸ್ಟಿಯವರಿಗೆ ಶೇ 75 ಸಬ್ಸಿಡಿ ದರದಲ್ಲಿ ಹಾಗೂ ಇನ್ನುಳಿದ ಎಲ್ಲ ರೈತರಿಗೆ ಶೇ .50 ಸಬ್ಸಿಡಿ ದರದಲ್ಲಿ ಬೀತ್ತನೆ ಬೀಜ ವಿತರಿಸಲಾಗುತ್ತದೆ. ರೈತರು ಪ್ರಯೋಜನ ಪಡೆಯಲಿ

-ಎ.ನಾರನಗೌಡ, ತಾಲ್ಲೂಕು ಕೃಷಿ ಅಧಿಕಾರಿ (ಹರಪನಹಳ್ಳಿ)

–ಪ್ರಹ್ಲಾದಗೌಡ ಗೊಲ್ಲಗೌಡರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry