ವಾಹನ ನಿಲುಗಡೆಗಿಲ್ಲ ಸೂಕ್ತ ವ್ಯವಸ್ಥೆ

7
ತಲಕಾಡಿನ ನಿಸರ್ಗಧಾಮದಲ್ಲಿ ಪ್ರವಾಸಿಗರ ಪರದಾಟ; ಸ್ಥಳೀಯರ ಆಕ್ರೋಶ

ವಾಹನ ನಿಲುಗಡೆಗಿಲ್ಲ ಸೂಕ್ತ ವ್ಯವಸ್ಥೆ

Published:
Updated:
ವಾಹನ ನಿಲುಗಡೆಗಿಲ್ಲ ಸೂಕ್ತ ವ್ಯವಸ್ಥೆ

ತಲಕಾಡು: ತಿ.ನರಸೀಪುರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಲಕಾಡಿನಲ್ಲಿ ಪಾರ್ಕಿಂಗ್‌ ಸಮಸ್ಯೆ ಹೆಚ್ಚಾಗಿದ್ದು ಸ್ಥಳೀಯರು, ಪ್ರವಾಸಿಗರು ಪರದಾಡುವಂತಾಗಿದೆ.

ಕಾವೇರಿ ನದಿಯ ತಟದಲ್ಲಿರುವ ನಿಸರ್ಗಧಾಮ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ರಜಾ ದಿನಗಳಲ್ಲಿ ನೂರಾರು ವಾಹನಗಳಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ, ಅರಣ್ಯ ಇಲಾಖೆ ನಿಸರ್ಗಧಾಮದ ಒಳಗೆ ವಾಹನ ನಿಲುಗಡೆಗೆ ಅವಕಾಶ ನಿರ್ಬಂಧಿಸಿರುವುದರಿಂದ ಪ್ರವೇಶ ದ್ವಾರದ ಮುಂದಿನ ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾಗಿದೆ. ತಡವಾಗಿ ಬಂದವರು 1 ಕಿ.ಮೀ.ಗೂ ಹೆಚ್ಚು ದೂರದಲ್ಲೇ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಸಾಗಬೇಕಿದೆ.

ಈ ಹಿಂದೆ ಗ್ರಾಮ ಪಂಚಾಯಿತಿ ಯಿಂದ ಗ್ರಾಮದ ಪ್ರವೇಶದ ಬಳಿ ಹಾಗೂ ಅರಣ್ಯ ಇಲಾಖೆಯಿಂದ ನಿಸರ್ಗಧಾಮದ ಪ್ರವೇಶದ ಬಳಿ ಶುಲ್ಕ ವಸೂಲಿ ಮಾಡುತ್ತಿದ್ದರು. ಇದರಿಂದಾಗಿ ಪ್ರವಾಸಿಗರು ಎರಡು ಕಡೆ ಶುಲ್ಕ ಪಾವತಿಸಬೇಕಾಗಿತ್ತು. ಅದನ್ನು ‍ಪ್ರಶ್ನಿಸಿ ಗ್ರಾಮದವರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ಎಲ್ಲೂ ಶುಲ್ಕ ವಸೂಲಿ ಮಾಡದಂತೆ ಗ್ರಾಮ ಪಂಚಾಯಿತಿಗೆ ಹಾಗೂ ಅರಣ್ಯ ಇಲಾಖೆಗೆ ಸೂಚಿಸಿದೆ.

ಆದರೆ, ಅರಣ್ಯ ಇಲಾಖೆ ಶುಲ್ಕ ವಸೂಲಿಯನ್ನು ನಿಲ್ಲಿಸುವುದರ ಜೊತೆಗೆ ಪ್ರವೇಶ ದ್ವಾರವನ್ನೇ ಮುಚ್ಚಿದೆ. ನಿಸರ್ಗಧಾಮದೊಳಗೆ ಬೈಕ್‌ನಲ್ಲಿ ಹೋಗಲು ಸ್ಥಳೀಯರಿಗೆ ಅವಕಾಶವಿದೆ. ಆದರೆ, ಪ್ರವಾಸಿಗರ ವಾಹನವನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಹಲವು ಬಾರಿ ಅವರೂ ನಡೆದುಕೊಂಡೇ ಹೋಗಬೇಕಾಗುತ್ತದೆ. ಅಲ್ಲದೇ, ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ, ಅದರೊಳಗೆ ಬೆಲೆಬಾಳುವ ವಸ್ತುಗಳನ್ನು ಇಟ್ಟು ಅವುಗಳ ಸುರಕ್ಷತೆಯ ಆತಂಕದಲ್ಲೇ ಪ್ರವಾಸಿಗರು ನಿಸರ್ಗಧಾಮದ ಒಳಕ್ಕೆ ಹೋಗಬೇಕಾಗಿದೆ.

ಆದ್ದರಿಂದ ಕೂಡಲೇ, ಗ್ರಾಮ ಪಂಚಾಯಿತಿಯಿಂದ ಅಥವಾ ಅರಣ್ಯ ಇಲಾಖೆಯಿಂದ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಪ್ರವಾಸಿಗರು ವಾಹನ ನಿಲುಗಡೆ ಪ್ರದೇಶದಲ್ಲಿ ಅಪಾರ ಕಸವನ್ನು ಎಸೆಯುತ್ತಿದ್ದರು. ಅದರ ನಿರ್ವಹಣೆಗೆ ವಾಹನಗಳಿಗೆ ಶುಲ್ಕ ವಿಧಿಸುತ್ತಿದ್ದೆವು. ಆದಾಯದ ಕೊರತೆ ಇರುವುದರಿಂದ ಕಸ ನಿರ್ವಹಣೆ ಸಾಧ್ಯವಾಗದ ಕಾರಣ ಪ್ರವೇಶ ನಿರ್ಬಂಧಿಸಿದ್ದೇವೆ. ಅಲ್ಲದೇ, ನ್ಯಾಯಾಲಯದ ಸೂಚನೆ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದು ಆದೇಶ ಬರುವವರೆಗೂ ಕಾಯಬೇಕಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ ತಿಳಿಸಿದ್ದಾರೆ.

**

ನಿಸರ್ಗಧಾಮದ ಒಳಗೆ ಗ್ರಾಮ ಪಂಚಾಯಿತಿಗೆ ಸೇರಿದ ಜಾಗವಿದೆ. ಈ ಬಗ್ಗೆ ಅರಣ್ಯ ಇಲಾಖೆ ಪತ್ರ ಬರೆದಿದ್ದು, ಕೆಲ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ

ಅಮ್ಜದ್‌ ಪಾಷಾ, ಪಿ.ಡಿ.ಒ, ತಲಕಾಡು ಗ್ರಾಮ ಪಂಚಾಯಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry