ಹಡಿಲು ಗದ್ದೆ ಅಗೆಯುವಾಗ ಪತ್ತೆಯಾದ ಗುಹಾ ಸಮಾಧಿ

7

ಹಡಿಲು ಗದ್ದೆ ಅಗೆಯುವಾಗ ಪತ್ತೆಯಾದ ಗುಹಾ ಸಮಾಧಿ

Published:
Updated:
ಹಡಿಲು ಗದ್ದೆ ಅಗೆಯುವಾಗ ಪತ್ತೆಯಾದ ಗುಹಾ ಸಮಾಧಿ

ಉಡುಪಿ: ಮೂಡು ಪೆರಂಪಳ್ಳಿಯ ಹಡಿಲು ಗದ್ದೆಯಲ್ಲಿ ಗುಹಾ ಸಮಾಧಿ ಹಾಗೂ ಮಣ್ಣಿನ ಮಡಿಕೆಗಳು ಪತ್ತೆಯಾಗಿವೆ.

ಹರಕೆ ಸೇವೆಯ ಯಕ್ಷಗಾನ ಪ್ರದರ್ಶನಕ್ಕಾಗಿ ಹರಿಕೃಷ್ಣ ಶಿವತ್ತಾಯ ಎಂಬುವರು ಹಡಿಲು ಗದ್ದೆ ಜಾಗವನ್ನು ಸಮತಟ್ಟು ಮಾಡಲು ಅಗೆದಾಗ ಸಣ್ಣ ಗುಹೆ ಆಕಾರದ ಗುಂಡಿ ಕಾಣಿಸಿಕೊಂಡಿದೆ. ಶಿವತ್ತಾಯ ಅವರ ಮಗ ಶಶಾಂಕ್ ಶಿವತ್ತಾಯ ಅವರು ಪುರಾತತ್ವ ಉಪನ್ಯಾಸಕ ಪ್ರೊ. ಟಿ. ಮುರುಗೇಶಿ ಅವರಿಗೆ ವಿಷಯ ತಿಳಿಸಿದ್ದಾರೆ. ಶಿರ್ವದ ಡಾ. ಸುಂದರರಾಮ ಶೆಟ್ಟಿ ಕಾಲೇಜಿನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ವಿದ್ಯಾರ್ಥಿಗಳ ತಂಡದೊಂದಿಗೆ ಆಗಮಿಸಿದ ಅವರು ಉತ್ಖನನ ನಡೆಸಿ, ಅದು ಶಿಲಾಯುಗ ಕಾಲದ ಗುಹಾ ಸಮಾಧಿ ಎಂದು ತಿಳಿಸಿದ್ದಾರೆ.

ಗುಂಡಿ ಬಿದ್ದ ಸ್ಥಳದಲ್ಲಿ ಮಣ್ಣನ್ನು ಅಗೆದಾಗ ಕೆಂಪು, ಕಪ್ಪು ಹಾಗೂ ಕೆಂಪು ಮತ್ತು ಕಪ್ಪು ಮಿಶ್ರಿತ ಮಣ್ಣಿನ ಮಡಿಕೆಯ ಚೂರುಗಳು ಸಿಕ್ಕವು. ಕಪ್ಪು ಮತ್ತು ಕೆಂಪು ಮಿಶ್ರಿತ ಮಣ್ಣಿನ ಮಡಿಕೆ ಬೃಹತ್ ಶಿಲಾಯುಗ ಕಾಲದ ಮಾದರಿ ಮಡಿಕೆ ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.

ಏಳು ಅಡಿ ಆಳದಲ್ಲಿ ಮಣ್ಣಿನ ಮಡಿಕೆಯಲ್ಲಿ ಹೂತಿದ್ದ ಮೃತರ ಅಸ್ಥಿ ಅವಶೇಷ ದೊರಕಿದೆ. ಮೇಲ್ಬಾಗದ ಮಣ್ಣಿನ ಒತ್ತಡದಿಂದ ಮಡಿಕೆ ದುರ್ಬಲವಾಗಿದ್ದು, ಇಡೀ ಮಡಿಕೆಯನ್ನು ಹೊರತೆಗೆಯಲು ಆಗಲಿಲ್ಲ. ಒಡೆದ ಮಡಿಕೆಯ ಚೂರುಗಳನ್ನು ಹೊರತೆಗೆದು ಹೆಚ್ಚಿನ ಅಧ್ಯಯನ ಮಾಡಲಾಗುವುದು. ಹಾಗೆಯೇ ಮಡಿಕೆಯ ಒಳಭಾಗದಲ್ಲಿ ಬೂದಿ ಮಿಶ್ರಿತ ಮಣ್ಣು ಸಿಕ್ಕಿದ್ದು, ಅದನ್ನು ಹೆಚ್ಚಿನ ಸಂಶೋಧನೆಗಾಗಿ ಪುಣೆಯ ಡೆಕ್ಕನ್ ಕಾಲೇಜಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry