ಸೊಪ್ಪು, ತರಕಾರಿ, ಹಣ್ಣು ದುಬಾರಿ

7
ಬಿರುಗಾಳಿ ಮಳೆಯ ಪರಿಣಾಮ; ಹೂವಿನ ಬೆಲೆಯಲ್ಲಿ ಇಳಿಕೆ

ಸೊಪ್ಪು, ತರಕಾರಿ, ಹಣ್ಣು ದುಬಾರಿ

Published:
Updated:
ಸೊಪ್ಪು, ತರಕಾರಿ, ಹಣ್ಣು ದುಬಾರಿ

ಮಂಡ್ಯ: ಬಿರುಗಾಳಿ ಮಳೆ ಹೆಚ್ಚಾಗುತ್ತಿದ್ದಂತೆ ತರಕಾರಿ, ಸೊಪ್ಪಿನ ಬೆಲೆ ಗಗನಮುಖಿಯಾಗಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಅಗ್ಗದ ಬೆಲೆಗೆ ತರಕಾರಿ ಕೊಳ್ಳುತ್ತಿದ್ದ ಜನರು ಈಗ ಹೆಚ್ಚು ಬೆಲೆ ತೆರಬೇಕಾಗಿದೆ.

ಕಳೆದ ತಿಂಗಳು ಕೆ.ಜಿ ನಾಟಿ ಬೀನ್ಸ್‌ಗೆ ₹ 30 ಇತ್ತು. ಆದರೆ ಈಗ ಬೀನ್ಸ್‌ ಬೆಲೆ ವಿಪರೀತ ಹೆಚ್ಚಳವಾಗಿದ್ದು ₹ 100ಕ್ಕೆ ಮಾರಾಟವಾಗುತ್ತಿದೆ. ಫಾರಂ ಬೀನ್ಸ್‌ ಕೆ.ಜಿಗೆ ₹ 80 ಇದೆ. ಕ್ಯಾರಟ್‌–ಬೀಟರೂಟ್‌ ಬೆಲೆಯೂ ಕೆ.ಜಿಯೊಂದಕ್ಕೆ 40ಕ್ಕೆ ಹೆಚ್ಚಳವಾಗಿದೆ. ಈಗ ಅಧಿಕ ಮಾಸದ ನಿಮಿತ್ತ ಮದುವೆಗಳು ನಡೆಯುತ್ತಿಲ್ಲ. ಮದುವೆಗಳು ಆರಂಭವಾದರೆ ತರಕಾರಿ ಬೆಲೆ ಇನ್ನೂ ಹೆಚ್ಚಳವಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕಳೆದ ತಿಂಗಳು ಗೆಡ್ಡೆ ಕೋಸಿನ ಬೆಲೆ ಕೆ.ಜಿಗೆ ₹ 10 ಇತ್ತು. ಆದರೆ ಈಗ ಮಾರುಕಟ್ಟೆಗೆ ಗೆಡ್ಡೆಕೋಸು ಬರುತ್ತಿಲ್ಲ. ಬೆಂಗಳೂರಿನ ಮಾರುಕಟ್ಟೆಯಿಂದ ತರಿಸಿ ವ್ಯಾಪಾರಿಗಳು ಮಾರುತ್ತಿದ್ದಾರೆ. ಹೀಗಾಗಿ ಬೆಲೆ ₹ 80ಕ್ಕೇರಿದೆ. ಹೀರೆಕಾಯಿ, ಬದನೆ, ನುಗ್ಗೆಕಾಯಿ ಕೆ.ಜಿಗೆ ₹ 40ರಂತೆ ಮಾರಾಟವಾಗುತ್ತಿವೆ. ಬೆಂಡೆಕಾಯಿ ಬೆಲೆ ₹ 30 ಇದೆ. ಟೊಮೆಟೊ ₹ 20 ಇದೆ. ಈರುಳ್ಳಿ ಕೆ.ಜಿಗೆ ₹ 20ರಂತೆ ಮಾರಾಟವಾಗುತ್ತಿದೆ.

‘ಮಳೆ ಬೀಳುತ್ತಿರುವುದರಿಂದ ತರಕಾರಿಗಳು ಕೊಳೆತು ಹೋಗುತ್ತಿವೆ. ಮಾರುಕಟ್ಟೆಗೆ ಬರುತ್ತಿರುವ ಮಾಲು ಕಡಿಮೆಯಾಗಿದೆ. ವ್ಯಾಪಾರಿಗಳು ಬೆಂಗಳೂರು ಮಾರುಕಟ್ಟೆಯಿಂದ ತರಕಾರಿ ತರಿಸುತ್ತಿದ್ದಾರೆ. ಹೀಗಾಗಿ ಬೆಲೆ ದುಬಾರಿಯಾಗಿದೆ. ಮುಂದೆ ಇನ್ನೂ ಹೆಚ್ಚಳವಾಗುವ ಮುನ್ಸೂಚನೆ ಇದೆ’ ಎಂದು ತರಕಾರಿ ವ್ಯಾಪಾರಿ ಲವ ಹೇಳಿದರು.

ಕಟ್ಟು ಕೊತ್ತಂಬರಿ ₹ 20: ಮಳೆಯ ಹಿನ್ನೆಲೆಯಲ್ಲಿ ಸೊಪ್ಪಿನ ಬೆಲೆಯಲ್ಲೂ ಹೆಚ್ಚಳವಾಗಿದೆ. ಕಟ್ಟು ಕೊತ್ತಂಬರಿ ಬೆಲೆ ₹ 20 ಇದೆ. ಸಬ್ಬಸಿಗೆ, ಮೆಂತೆ, ಪಾಲಕ್‌ ₹ 20ಕ್ಕೆ, ಕರಿಬೇವು ₹ 10ಕ್ಕೆ ಮಾರಾಟವಾಗುತ್ತಿದೆ. ‘ರೈತರ ಮನೆ ಬಾಗಿಲಿಗೆ ಹೋಗಿ ಸೊಪ್ಪು ಕೇಳಿದರೂ ಸಿಗುತ್ತಿಲ್ಲ. ಏಪ್ರಿಲ್‌ ತಿಂಗಳಲ್ಲಿ ವಿಪರೀತ ಸೊಪ್ಪು ಬರುತ್ತಿತ್ತು. ಈಗ ಸೊಪ್ಪಿನ ಕೊರತೆಯಾಗಿದೆ. ರಮ್ಜಾನ್‌ ತಿಂಗಳು ಬಂದಾಗ ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪಿನ ಬೆಲೆ ಹೆಚ್ಚಳವಾಗುತ್ತದೆ’ ಎಂದು ಸೊಪ್ಪಿನ ವ್ಯಾಪಾರಿ ಶಾರದಮ್ಮ ಹೇಳಿದರು.

ಸೇಬು ದುಬಾರಿ: ಹಣ್ಣಿನ ಬೆಲೆಯೂ ಹೆಚ್ಚಳ ಕಂಡಿದ್ದು ಕೆ.ಜಿ ₹ 180ಕ್ಕೆ ಮಾರಾಟವಾಗುತ್ತಿದೆ. ಮೋಸಂಬಿ ₹ 100, ಕಿತ್ತಳೆ ₹ 100, ದ್ರಾಕ್ಷಿ ₹ 120, ದಾಳಿಂಬೆ ₹ 140, ಕಲ್ಲಂಗಡಿ ₹ 25, ಕರಬೂಜ ₹ 30 ಇದೆ. ಈ ವಾರ ಮಾವಿನಹಣ್ಣಿನ ಬೆಲೆ ಇಳಿಕೆಯಾಗಿದ್ದು ಬಾದಾಮಿ ಹಣ್ಣು ₹ 50, ಸೇಂದೂರ ₹ 40, ರಸಪೂರಿ ₹ 40ಕ್ಕೆ ಇವೆ.ಹೂವಿನ ಬೆಲೆ ಇಳಿಕೆಯಾಗಿದ್ದು ಮಾರು ಮಲ್ಲಿಗೆ ₹ 30, ಮೊಗ್ಗು ಮಲ್ಲಿಗೆ ₹ 40, ಕನಕಾಂಬರ ಮಾರಿಗೆ ₹ 40, ಸೇವಂತಿಗೆ ₹ 50, ಗುಲಾಬಿ ಒಂದಕ್ಕೆ ₹ 10, ಬಟನ್‌ ಗುಲಾಬಿ ಕೆ.ಜಿಗೆ ₹ 120ರಂತೆ ಮಾರಾಟವಾಗುತ್ತಿದೆ. ಸಣ್ಣ ಮಲ್ಲಿಗೆ ಹಾರ ₹ 40ಕ್ಕೆ ಸಿಗುತ್ತಿದೆ. ಸುಗಂಧ ಹಾರ ₹ 50–100ಕ್ಕೆ ಮಾರಾಟವಾಗುತ್ತಿದೆ.ಅ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry