ತಂಗುದಾಣ ತೆರವು: ಮಿಮ್ಸ್‌ನಲ್ಲಿ ಜನರ ಪರದಾಟ

7
ಆಸ್ಪತ್ರೆ ಮುಂದೆಯೇ ಮಲಗುವ ರೋಗಿಗಳ ಸಂಬಂಧಿಗಳು, ಕೊಳಕು ವಾತಾವರಣ, ದುರ್ವಾಸನೆ

ತಂಗುದಾಣ ತೆರವು: ಮಿಮ್ಸ್‌ನಲ್ಲಿ ಜನರ ಪರದಾಟ

Published:
Updated:
ತಂಗುದಾಣ ತೆರವು: ಮಿಮ್ಸ್‌ನಲ್ಲಿ ಜನರ ಪರದಾಟ

ಮಂಡ್ಯ: ನಗರದ ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರು ತಂಗಲು ಇದ್ದ ತಂಗುದಾಣ ತೆರವುಗೊಳಿಸಿ ಆ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಾಣ ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಜಾಗವಿಲ್ಲದೇ ಪರದಾಡುತ್ತಿರುವ ಜನರು ಎಲ್ಲೆಂದರಲ್ಲಿ ಚಾಪೆ ಹಾಸಿಕೊಂಡು ಮಲಗುತ್ತಿದ್ದಾರೆ.

ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಮಿಮ್ಸ್‌ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ದಾಖಲಾದ ರೋಗಿಗಳ ಜೊತೆಗಿರಲು ಒಬ್ಬರನ್ನು ಮಾತ್ರ ಒಳಗೆ ಬಿಡುತ್ತಾರೆ. ಉಳಿದವರು ಆಸ್ಪತ್ರೆಯ ಆವರಣದಲ್ಲೇ ಇರುತ್ತಾರೆ. ರೋಗಿಗಳನ್ನು ನೋಡಲು ಬೆಳಿಗ್ಗೆ 6–7, 10–11, ಮಧ್ಯಾಹ್ನ 1–2ವರೆಗೆ ಮಾತ್ರ ಅವಕಾಶವಿದೆ.

ಉಳಿದಂತೆ ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲೇ ಇರುತ್ತಾರೆ. ಇಲ್ಲಿಯವರೆಗೆ ಹೆರಿಗೆ ವಾರ್ಡ್‌ ಮುಂಭಾಗದಲ್ಲಿ ಇದ್ದ ತಂಗುದಾಣದಲ್ಲಿ ಜನರು ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿಯ ವೇಳೆ ಅಲ್ಲೇ ಮಲಗುತ್ತಿದ್ದರು. ಆದರೆ ತಂಗುದಾಣವನ್ನು ತೆರವುಗೊಳಿಸಿ ಮೇ 14ರಂದು ಅಲ್ಲಿ ಕ್ಯಾಂಟೀನ್‌ ಸ್ಥಾಪನೆ ಮಾಡಲಾಗಿದೆ.

ತಂಗುದಾಣವಿಲ್ಲದ ಕಾರಣ ಜನರಿಗೆ ಆಸ್ಪತ್ರೆ ಆವರಣದಲ್ಲಿ ಕುಳಿತುಕೊಳ್ಳಲೂ ಜಾಗವಿಲ್ಲದಂತಾಗಿದೆ. ಆವರಣದ ರಸ್ತೆಯಲ್ಲಿರುವ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ.

ಅಲ್ಲೇ ಚಾಪೆ ಹಾಸಿಕೊಂಡು ಊಟ, ತಿಂಡಿ ಮಾಡುತ್ತಿದ್ದಾರೆ. ರಾತ್ರಿಯ ವೇಳೆ ಮಣ್ಣಿನ ರಸ್ತೆಯಲ್ಲೇ ಮಲಗಿ ನಿದ್ದೆ ಮಾಡುತ್ತಾರೆ. ರಾತ್ರಿ ವೇಳೆ ಆಸ್ಪತ್ರೆಗೆ ಬಂದರೆ ಆವರಣವಿಡೀ ಜನರು ಮಲಗಿರುವುದು ಕಾಣುತ್ತಿದೆ.

ಮಳೆ ಬಂದರೆ ಸಂಕಷ್ಟ: ಮಳೆ ಬಂದಾಗ ರಕ್ಷಣೆ ಮಾಡಿಕೊಳ್ಳುವುದು ಕಷ್ಟದ ಕೆಲಸ. ಸಮೀಪದಲ್ಲಿರುವ ಮಕ್ಕಳ ಆಸ್ಪತ್ರೆ, ಎಸ್‌ಬಿಐ ಎಟಿಎಂ ಕಟ್ಟಡ, ಹೊರರೋಗಿಗಳ ವಿಭಾಗದ ಬಳಿ ಓಡಿ ಹೋಗಿ ರಕ್ಷಣೆ ಪಡೆಯುತ್ತಾರೆ. ಒಂದು ತಿಂಗಳಿಂದ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು ಆಸ್ಪತ್ರೆ ಆವರಣದಲ್ಲಿ ಜನರಿಗೆ ರಕ್ಷಣೆಯೇ ಇಲ್ಲವಾಗಿದೆ.

ಹಲವರು ಹೊರಗೆ ಬಂದು ಬಸ್‌ನಿಲ್ದಾಣಗಳಲ್ಲಿ, ಪಾಳು ಕಟ್ಟಡಗಳಲ್ಲಿ, ಕಾಮಗಾರಿ ನಡೆಯುತ್ತಿರುವ ಕಟ್ಟಡಗಳಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ.

‘ನನ್ನ ಮಗ ಅಪಘಾತದಿಂದ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಐದು ದಿನಗಳಿಂದ ಮನೆಮಂದಿ ಎಲ್ಲರೂ ಆಸ್ಪತ್ರೆ ಬಳಿಯೇ ಇದ್ದೇವೆ. ಮರದ ಕೆಳಗೆ ಆಶ್ರಯ ಪಡೆದಿದ್ದೇವೆ. ನನ್ನ ಪತ್ನಿ ಮಗನ ಜೊತೆ ಇರುತ್ತಾರೆ. ನಾನು, ನನ್ನಿಬ್ಬರು ಮಕ್ಕಳು ಮರದಡಿಯಲ್ಲೇ ಮಲಗುತ್ತೇವೆ. ಚಾಪೆ, ಬೆಡ್‌ಶೀಟ್‌ ತಂದಿದ್ದೇವೆ. ಇಲ್ಲೇ ಊಟ ಮಾಡುತ್ತೇವೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ನಿತ್ಯ ಕರ್ಮ ಮುಗಿಸುತ್ತೇವೆ’ ಎಂದು ಮಳವಳ್ಳಿಯಿಂದ ಬಂದಿದ್ದ ರಾಮೇಗೌಡ ಹೇಳಿದರು.

ಆಸ್ಪತ್ರೆ ಆವರಣದಲ್ಲಿ ಕೊಳಕು: ಜನರು ಮರದಡಿ ಕುಳಿತು ಗುಂಪುಗುಂಪಾಗಿ ಊಟ ಮಾಡುವ ಕಾರಣ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಕವರ್‌ಗಳು ಚೆಲ್ಲಾಡುತ್ತಿವೆ. ಹೊರಗಿನಿಂದ ಊಟ ಕಟ್ಟಿಸಿಕೊಂಡು ಬಂದು ಸೇವಿಸಿ ಅಲ್ಲೇ ಕವರ್‌ಗಳನ್ನು ಬಿಸಾಡುತ್ತಿದ್ದಾರೆ. ಜೊತೆಗೆ ಸ್ಥಳದಲ್ಲೇ ಕೈತೊಳೆಯುತ್ತಿರುವ ಕಾರಣ ಆಸ್ಪತ್ರೆ ಆವರಣ ಕೊಳಕಾಗುತ್ತಿದೆ. ಬೆಳಿಗ್ಗೆ ಕಾರ್ಮಿಕರು ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಸಂಜೆಯ ವೇಳೆಗೆ ಆವರಣದಲ್ಲಿ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.

‘ಜೆನರಿಕ್‌ ಔಷಧ ಅಂಗಡಿ ಸಮೀಪ ರಸ್ತೆಯುದ್ದಕ್ಕೂ ಜನರು ಊಟ ಮಾಡಿ ಅನ್ನ, ಸಾಂಬಾರ್‌ ನೀರು ಚೆಲ್ಲುತ್ತಾರೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಜನರಿಗೆ ಕುಳಿತುಕೊಳ್ಳಲು ಜಾಗವಿಲ್ಲದ ಕಾರಣ ಆಸ್ಪತ್ರೆ ಆವರಣ ಕೊಳಕಾಗುತ್ತಿದೆ’ ಎಂದು ನರ್ಸ್‌ ಒಬ್ಬರು ಹೇಳಿದರು.

ಬದಲಿ ವ್ಯವಸ್ಥೆ ಏಕಿಲ್ಲ?: ತಂಗುದಾಣ ತೆರವುಗೊಳಿಸುವ ಮೊದಲು ಸಾರ್ವಜನಿಕರು ತಂಗಲು ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆಸ್ಪತ್ರೆಗೆ ಪ್ರತಿದಿನ ಸಾವಿರಾರು ರೋಗಿಗಳು ಭೇಟಿ ನೀಡುತ್ತಾರೆ. ಇಂತಹ ಆಸ್ಪತ್ರೆಯಲ್ಲಿ ಕುಳಿತುಕೊಳ್ಳಲು ಒಂದು ಜಾಗ ನಿಗದಿ ಮಾಡದೇ ಇರುವುದು ಅಧಿಕಾರಿಗಳ ಲೋಪ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ರೋಗಿಗಳು ಹಾಗೂ ಅವರ ಸಂಬಂಧಿಕರನ್ನು ಮಿಮ್ಸ್‌ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮನುಷ್ಯರಂತೆ ಕಾಣುವುದಿಲ್ಲ. ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಕ್ಯಾಂಟೀನ್‌ ನಡೆಸಲು ತಂಗುದಾಣದ ಜಾಗ ಕೊಟ್ಟಿದ್ದಾರೆ. ಜನರ ಹಿತಕ್ಕಿಂತಲೂ ಅವರಿಗೆ ಕ್ಯಾಂಟೀನ್‌ ಮುಖ್ಯವಾಗಿತ್ತು. ಸಮೀಪದಲ್ಲೇ ಎರಡು ಇಂದಿರಾ ಕ್ಯಾಂಟೀನ್‌ಗಳಿವೆ, ರಮ್ಯಾ, ಅಪ್ಪಾಜಿ ಕ್ಯಾಂಟೀನ್‌ಗಳಿವೆ. ಊಟ ತಿಂಡಿಗೇನೂ ಕೊರತೆ ಇಲ್ಲ. ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್‌ಗಿಂತಲೂ ತಂಗಲು ಒಂದು ಜಾಗದ ಅವಶ್ಯಕತೆ ಇತ್ತು’ ಎಂದು ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆಗೆ ಬಂದಿದ್ದ ರಾಮಕೃಷ್ಣ ಹೇಳಿದರು.

ನಾಯಿಗಳ ಹಾವಳಿ ತಡೆಗೆ ಕ್ರಮ

‘ತಂಗುದಾಣದ ಜಾಗದಲ್ಲಿ ಜನರು ಊಟ ಮಾಡುತ್ತಿದ್ದ ಕಾರಣ ತ್ಯಾಜ್ಯ ತಿನ್ನಲು ನಾಯಿಗಳು ಬರುತ್ತಿದ್ದವು. ನಾಯಿಗಳ ಹಾವಳಿ ತಡೆಯಲು ತಂಗುದಾಣವನ್ನು ತೆರವುಗೊಳಿಸಿ ಕ್ಯಾಂಟೀನ್‌ಗೆ ನೀಡಿದ್ದೇವೆ. ನಾಯಿಗಳಿಂದ ಆಗಿರುವ ಅನಾಹುತಗಳನ್ನು ನಾವು ನೋಡಿದ್ದೇವೆ. ಈಚೆಗೆ ನಾಯಿಯೊಂದು ಮಗುವಿನ ಶವವನ್ನು ಕಚ್ಚಿ ತಂದು ಅನಾಹುತ ಸೃಷ್ಟಿಸಿತ್ತು. ಹೀಗಾಗಿ ತಂಗುದಾಣವನ್ನು ತೆರವುಗೊಳಿಸುವುದು ಅವಶ್ಯವಾಗಿತ್ತು. ಸಾರ್ವಜನಿಕರಿಗೆ ಶೀಘ್ರ ಬದಲಿ ವ್ಯವಸ್ಥೆ ಮಾಡುತ್ತೇವೆ’ ಎಂದು ಮಿಮ್ಸ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹನುಮಂತಪ್ರಸಾದ್‌ ಹೇಳಿದರು.

‘ರೋಗಲಕ್ಷಣ ಶಾಸ್ತ್ರ ವಿಭಾಗದ ಪಕ್ಕದಲ್ಲಿ ಜನರ ತಂಗುದಾಣ ನಿರ್ಮಿಸಲು ಸ್ಥಳ ಗುರುತಿಸಿದ್ದೇವೆ. ಶೀಘ್ರ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry