ಸಮಸ್ಯೆಗಳ ಕೂಪವಾದ ಬೆಸಗರಹಳ್ಳಿ ಸಂತೆ

7
ಮಳೆ ಬಂದರೆ ಆಶ್ರಯಕ್ಕೆ ಓಡಬೇಕಾದ ದುಃಸ್ಥಿತಿ: ಗ್ರಾಹಕರು, ವ್ಯಾಪರಿಗಳ ಗೋಳು ಕೇಳೋರಿಲ್ಲ

ಸಮಸ್ಯೆಗಳ ಕೂಪವಾದ ಬೆಸಗರಹಳ್ಳಿ ಸಂತೆ

Published:
Updated:
ಸಮಸ್ಯೆಗಳ ಕೂಪವಾದ ಬೆಸಗರಹಳ್ಳಿ ಸಂತೆ

ಕೊಪ್ಪ: ಸುಡು ಬಿಸಿಲಿನಲ್ಲೇ ದುರ್ವಾಸನೆ ಸಹಿಸಿಕೊಳ್ಳುತ್ತ ಗ್ರಾಹಕರು ತರಕಾರಿ ಖರೀದಿಸಬೇಕಿದೆ. ಮೂಲ ಸೌಕರ್ಯ ಇರದಿದ್ದರೂ ವ್ಯಾಪಾರ ಮಾಡಬೇಕಿರುವುದು ವ್ಯಾಪಾರಸ್ಥರ ವ್ಯಥೆ. ಇದು ಬೆಸಗರಹಳ್ಳಿ ಸಂತೆಯ ಕಥೆ...

ರಾಜ್ಯದ ಎರಡನೇ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಕೀರ್ತಿಗೆ ಭಾಜನವಾದ ಬೆಸಗರಹಳ್ಳಿಯ ಸಂತೆಗೆ ಕನಿಷ್ಠ ಸೌಲಭ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯ, ನೆರಳಿಗಾಗಿ ಗ್ರಾಹಕರು ಮತ್ತು ವ್ಯಾಪಾರಸ್ಥರು ಪರದಾಡಬೇಕಾದ ಸ್ಥಿತಿ ಇದೆ. ಸಂತೆ ಮೈದಾನದ ಪಕ್ಕದಲ್ಲಿರುವ ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ.

ಕೊಳಚೆ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉಗಮಸ್ಥಾನವಾಗಿದೆ. ಗ್ರಾಹಕರು ವಾಹನಗಳನ್ನು ನಿಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಇದರಿಂದ ಸುಗಮ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಸಂತೆ ಮುಗಿದ ಬಳಿಕ ಪಕ್ಕದ ಖಾಲಿ ಜಾಗದಲ್ಲಿ ಕಸ ಸುರಿಯುತ್ತಿರುವುದರಿಂದ ಅಶುಚಿತ್ವ ಎದ್ದು ಕಾಣುತ್ತಿದೆ.

ಸುಮಾರು 38 ಹಳ್ಳಿಗಳ ವ್ಯಾಪ್ತಿಯ ಕೇಂದ್ರ ಸ್ಥಾನವಾಗಿರುವ ಬೆಸಗರಹಳ್ಳಿಯ ಸಂತೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಮಳೆ ಬಂದಾಗ ಗ್ರಾಹಕರು ಮತ್ತು ವ್ಯಾಪಾರಸ್ಥರು ದಿಕ್ಕಾಪಾಲಾಗಿ ಓಡುವುದುಂಟು. ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತವಾಗಿರುವುದರಿಂದ ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಜನದಟ್ಟಣೆ ಮತ್ತು ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂಬ ಅಳಲು ಬೆಸಗರಹಳ್ಳಿ ಗ್ರಾಮಸ್ಥರದ್ದು.

ಶಾಸಕರು ಎಪಿಎಂಸಿಯಿಂದ ಸಂತೆಯ ಅಭಿವೃದ್ಧಿಗೆ ₹ 40 ಲಕ್ಷ ಹಣವನ್ನು ಮಂಜೂರು ಮಾಡಿಸಿದ್ದಾರೆ. ಅದರಂತೆ ಚರಂಡಿ, ಕಾಂಕ್ರೀಟ್‌ ರಸ್ತೆ, ನೆರಳಿನ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್‌.ನಾಗರಾಜು.

**

ಮೊದಲು ಈ ಭಾಗದ ನಾಗರಿಕರು ಸಂತೆಗಾಗಿ ಕೊಪ್ಪಕ್ಕೆ ಹೋಗಬೇಕಾಗುತ್ತಿತ್ತು. ಆದರೆ ಈಗ ಸಂತೆ ಇಲ್ಲೇ ಇದ್ದರೂ ಸೌಕರ್ಯ ಕೊರತೆ ಕಾಡುತ್ತಿದೆ

– ಎ.ಶೇಖರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry